ಶಿವಮೊಗ್ಗ: ‘ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ 1,700 ಸರ್ಕಾರಿ ಶಾಲೆಗಳಲ್ಲಿ ಈ ವರ್ಷ ಪ್ರಾಯೋಗಿಕವಾಗಿ ಅರಂಭಿಸಿರುವ ಎಲ್‌ಕೆಜಿ, ಯುಕೆಜಿ ಒಳಗೊಂಡ ಮಾಂಟೆಸ್ಸರಿ ಶಿಕ್ಷಣ ವಿಭಾಗಕ್ಕೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. 1 ತಿಂಗಳಲ್ಲಿ 38,000ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಆಗಿದೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೊರಬ ತಾಲ್ಲೂಕಿನ ಕುಬಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಜ್ಯಮಟ್ಟದಲ್ಲಿ ಆರಂಭಿಸಿರುವ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಎಲ್‌ಕೆಜಿ, ಯುಕೆಜಿ ನಂತರ ಮಕ್ಕಳು ಅಲ್ಲಿಯೇ ಶಿಕ್ಷಣ ಮುಂದುವರಿಸುವುದರಿಂದ ಸರ್ಕಾರಿ ಶಾಲೆಗಳ ಬಲವರ್ಧನೆಗೂ ನೆರವಾಗಲಿದೆ. ಮಾಂಟೆಸ್ಸರಿ ತರಗತಿಯನ್ನು ಹಂತಹಂತವಾಗಿ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದರು.
ರಾಜ್ಯದಲ್ಲಿ 46,000 ಸರ್ಕಾರಿ ಶಾಲೆಗಳ ನಿರ್ವಹಣೆಗೆ ವಾರ್ಷಿಕ ₹ 44,000 ಕೋಟಿ ವ್ಯಯಿಸಲಾಗುತ್ತಿದೆ. ಸರ್ಕಾರದ ಅನುದಾನದಿಂದಲೇ ಎಲ್ಲ ಶಾಲೆಗಳ ಅಭಿವೃದ್ಧಿ ಸಾಧ್ಯವಾಗದು. ವಿದ್ಯಾರ್ಥಿಗಳ ಬಗ್ಗೆ ಜನಸಾಮಾನ್ಯರಲ್ಲಿ ಕಾಳಜಿ ಹೆಚ್ಚಿಸಲು ‘ನನ್ನ ಶಾಲೆ, ನನ್ನ ಜವಾಬ್ದಾರಿ’ ಕಾರ್ಯಕ್ರಮ ಆರಂಭಿಸಲಾಗಿದೆ. ಇದರಡಿ ಈ ವರ್ಷ ಸಮುದಾಯದಿಂದ ₹ 1,000 ಕೋಟಿ ಆರ್ಥಿಕ ನೆರವು ದೊರೆಯುವ ನಿರೀಕ್ಷೆ ಇದೆ ಎಂದರು.
‘ಮಂಡ್ಯ ಜಿಲ್ಲೆ ಮಳವಳ್ಳಿ ಹಾಗೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನಲ್ಲಿ ಹಳೆಯ ವಿದ್ಯಾರ್ಥಿಗಳು ₹ 6 ಕೋಟಿಗೂ ಅಧಿಕ ಮೊತ್ತದ ನೆರವು ನೀಡಿ ಶಾಲಾ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಈ ಮಾದರಿ ಕಾರ್ಯ ಎಲ್ಲರಿಗೂ ಸ್ಫೂರ್ತಿ ಆಗಲಿ’ ಎಂದು ಆಶಿಸಿದರು.
‘ನನ್ನ ಶಾಲೆ ನನ್ನ ಜವಾಬ್ದಾರಿ’ ಅಡಿ ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಯಲ್ಲಿರುವವರು ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬಹುದು. ಆಯಾ ಶಾಲಾ ಆಡಳಿತ ಸಂಪರ್ಕಿಸಬಹುದು. ಇದಕ್ಕೆ ತೆರಿಗೆ ವಿನಾಯ್ತಿ ಇದೆ.–ಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.