ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ: ಮೈಸೂರಿನಲ್ಲಿ ಆ. 7ರಿಂದ ಟಿ20 ಟೂರ್ನಿ ಆರಂಭ

Last Updated 20 ಜುಲೈ 2022, 4:31 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಶ್ರಯದಲ್ಲಿ ಮೈಸೂರಿನಲ್ಲಿ ಆಗಸ್ಟ್‌ 7ರಿಂದ ಆರಂಭವಾಗಲಿರುವ ‘ಮಹಾರಾಜ ಟ್ರೋಫಿ ಟಿ20’ ಟೂರ್ನಿಯಲ್ಲಿ ಶಿವಮೊಗ್ಗ ತಂಡ ಪಾಲ್ಗೊಳ್ಳಲಿದೆ ಎಂದು ಕೆಎಸ್‌ಸಿಎ ವಲಯ ಸಮನ್ವಯಕಾರರೂ ಆದವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಂಡವು ಆಯಾ ಪ್ರದೇಶದ ಇಬ್ಬರು ಆಟಗಾರರನ್ನು ಒಳ ಗೊಂಡಿರಬೇಕಿದೆ. ಹೀಗಾಗಿ ತಂಡದಲ್ಲಿ ಸ್ಥಾನ ಪಡೆಯಲುಶಿವಮೊಗ್ಗದ ಆಟಗಾರರಿಗೆ ಉತ್ತಮ ಅವಕಾಶ ಇದೆ ಎಂದರು.

ಆಟಗಾರರನ್ನು ಪ್ಲೇಯರ್ಸ್ ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಾಗುವುದು.ಇದಕ್ಕೆ ಕೃತಕ ಬುದ್ಧಿಮತ್ತೆಯ ಕ್ರಮ ಅನುಸರಿಸಲಾಗುವುದು. ಆಟಗಾರರ ಹಿಂದಿನ ಸಾಧನೆ ಆಧರಿಸಿ, ಅವರನ್ನು ಬೇರೆ ಬೇರೆ ವರ್ಗವಾಗಿ ವಿಂಗಡಿಸಿ ಬೆಲೆ ನಿಗದಿಪಡಿಸಲಾಗುವುದು. ಕೆಎಸ್‌ಸಿಎಯು ನಿಯೋಜಿಸಿರುವ ಸಮಿತಿ ಪ್ರತಿಯೊಂದು ತಂಡಕ್ಕೂ ತರಬೇತಿ ಸಿಬ್ಬಂದಿ ಮತ್ತು ಸಹಾಯಕ ಸಿಬ್ಬಂದಿ ನಿಯೋಜಿಸಲಿದೆ ಎಂದು ಹೇಳಿದರು.

ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶವೀರ್ ತಾರಾಪೂರ್ ಮಾತನಾಡಿ, ಸಂಸ್ಥೆಯ ಅಧ್ಯಕ್ಷರೂ ಆಗಿದ್ದ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮರಣಾರ್ಥ ಈ
ಟೂರ್ನಿ ಆಯೋಜಿಸಲಾಗಿದೆ. ಆ. 7ರಿಂದ 22ರವರೆಗೆ ನಡೆಯಲಿದೆ ಎಂದರು.

ಯುವ ಕ್ರಿಕೆಟಿಗರಿಗೆ ತಮ್ಮ ಪ್ರತಿಭೆ ಪ್ರಕಟಿಸಲು ಅವಕಾಶ ನೀಡುವಲ್ಲಿ ಕೆಎಸ್‌ಸಿಎ ಯಾವಾಗಲೂ ಮೊದಲ ಆದ್ಯತೆ ನೀಡುತ್ತದೆ ಎಂದರು.

ಕರ್ನಾಟಕದಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿರುವ ದೇವದತ್ತ ಪಡಿಕ್ಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಮನೀಶ್ ಪಾಂಡೆ, ಜೆ.ಸುಚಿತ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಅಭಿನವ್ ಮನೋಹರ್, ಕೆ.ಸಿ.ಕಾರಿಯಪ್ಪ, ಪ್ರವೀಣ್ ದುಬೆ ಮತ್ತು ಅಭಿಮನ್ಯು ಮಿಥುನ್ ಮಹಾರಾಜ ಟ್ರೋಫಿಯಲ್ಲಿ ಆಡಲಿದ್ದಾರೆ. ಪ್ರತಿ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗಲಿದೆ. ಫ್ಯಾನ್‌ಕೋಡ್ ಆ್ಯಪ್‌ನಲ್ಲಿಯೂ ನೇರಪ್ರಸಾರವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಮಹಾರಾಜ ಟ್ರೋಫಿ ಪ್ರದರ್ಶನ ಮಾಡಲಾಯಿತು. ಮಂಜುನಾಥ್ ರಾಜ್, ಕೆ.ಶಶಿಧರ್, ಡಿ.ಟಿ.ಕುಮಾರ್, ಡಿ.ಆರ್.ನಾಗರಾಜ್ ಇದ್ದರು.

***

ಟ್ರೋಫಿಗಾಗಿ 6 ತಂಡಗಳ ಹೋರಾಟ

ಟೂರ್ನಿಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ಸೇರಿದಂತೆ ಒಟ್ಟು ಆರು ತಂಡಗಳು ಪಾಲ್ಗೊಳ್ಳಲಿವೆ. ಮೊದಲ ಹಂತದ 18 ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೈನಲ್ ಸೇರಿದಂತೆ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕೆಎಸ್‌ಸಿಎ ಜಂಟಿ ಕಾರ್ಯದರ್ಶಿ ಶವೀರ್ ತಾರಾಪೂರ್ ಹೇಳಿದರು.

***

ಈ ಹಿಂದೆ ಕೆಪಿಎಲ್‌ ಟೂರ್ನಿ ನೋಡಿಕೊಂಡು ಬಂದಿದ್ದೇವೆ. ಇದೀಗ ಹೊಸರೂಪದೊಂದಿಗೆ ಮಹಾರಾಜ ಟ್ರೋಫಿ ಟಿ20 ಟೂರ್ನಿ ಆಯೋಜಿಸಲಾಗಿದೆ. ಸ್ಥಳೀಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲಾಗುವುದು.

ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT