ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ; ಪಂಡರಹಳ್ಳಿಯ ಇಬ್ಬರ ಬಂಧನ

Published 24 ಆಗಸ್ಟ್ 2023, 9:06 IST
Last Updated 24 ಆಗಸ್ಟ್ 2023, 9:06 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಪಟ್ಟಣದಲ್ಲಿ ಆಗಸ್ಟ್ 21ರ ಬೆಳಗಿನ ಜಾವ ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿಯ ನಿವಾಸಿಗಳಾದ ಗಣೇಶ (24) ಹಾಗೂ ವಿನಯ್ (25) ಬಂಧಿತರು ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಗುರುವಾರ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳು ಆಗಸ್ಟ್ 20ರಂದು ಭಾನುವಾರ ತಡ ರಾತ್ರಿ ಪಂಡರಹಳ್ಳಿಯಿಂದ ಹೊಳೆಹೊನ್ನೂರು ಮಾರ್ಗವಾಗಿ ಜೋಗ ಜಲಪಾತ ವೀಕ್ಷಣೆಗೆ ಹೊರಟಿದ್ದರು. ಬೆಳಗಿನ ಜಾವ ದಾರಿ ಮಧ್ಯೆ ಕೃತ್ಯ ನಡೆಸಿದ್ದಾರೆ ಎಂದು ಹೇಳಿದರು.

ಆರೋಪಿಗಳು ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಸಿ.ಸಿ. ಕ್ಯಾಮೆರಾದಲ್ಲಿನ ಸುಳಿವು ಆಧರಿಸಿ, ಆರೋಪಿಗಳ ಪತ್ತೆಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಒಳಗೊಂಡ 50 ಮಂದಿಯ ಮೂರು ತಂಡ ರಚಿಸಲಾಗಿತ್ತು. ಆರೋಪಿಗಳ ಪತ್ತೆ ಮಾಡಿದ ಪೊಲೀಸರಿಗೆ ಬಹುಮಾನ ನೀಡುವುದಾಗಿ ತಿಳಿಸಿದರು.

ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿ ಮಾಡಿ ಶಿವಮೊಗ್ಗಕ್ಕೆ ತೆರಳಿ ಅಲ್ಲಿ ಬೆಳಿಗ್ಗೆವರೆಗೆ ಇದ್ದು, ಜೋಗಕ್ಕೆ ಹೋಗದೇ ಪಂಡರಹಳ್ಳಿಗೆ ವಾಪಸ್ ಮರಳಿದ್ದರು ಎಂದು ಎಸ್ಪಿ ಹೇಳಿದರು.

ಆರೋಪಿಗಳ ವಿದ್ಯಾರ್ಹತೆ, ಯಾವುದಾದರೂ ಸಂಘಟನೆ ಇಲ್ಲವೇ ಪಕ್ಷದೊಂದಿಗೆ ನಂಟು ಹೊಂದಿದ್ದಾರೆಯೇ? ಕೃತ್ಯಕ್ಕೆ ಪ್ರೇರಣೆ ಏನು? ಆ ವೇಳೆ ಮದ್ಯಪಾನ ಮಾಡಿದ್ದರೇ? ಎಂಬ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಎಸ್ಪಿ, 'ಆ ಬಗ್ಗೆ ಮಾಹಿತಿ ಇಲ್ಲ. ಇನ್ನೂ ವಿಚಾರಣೆ ನಡೆಸಬೇಕಿದೆ' ಎಂದರು.

ಘಟನೆಯಿಂದ ಸೋಮವಾರ ಹೊಳೆಹೊನ್ನೂರು ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ರು. ದುಷ್ಕರ್ಮಿಗಳ ಪತ್ತೆಗೆ ಆಗ್ರಹಿಸಿ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ 13 ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT