ಗುರುವಾರ , ಮಾರ್ಚ್ 23, 2023
28 °C

ಮಾರಿಕಾಂಬಾ ದೇವಿ ಜಾತ್ರೆ: ಅಂಕೆ ಹಾಕುವ ಶಾಸ್ತ್ರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಮೂರು ವರ್ಷಗಳಿಗೊಮ್ಮೆ ನಡೆಯುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆಯು ಫೆ. 7ರಿಂದ ಆರಂಭಗೊಳ್ಳಲಿದ್ದು, ಜಾತ್ರೆಯ ಧಾರ್ಮಿಕ ಕೈಂಕರ್ಯದ ಪ್ರಮುಖ ಭಾಗವಾದ ಅಂಕೆ ಹಾಕುವ ಶಾಸ್ತ್ರ ಮಂಗಳವಾರ ರಾತ್ರಿ ನಡೆಯಿತು.

ಜಾತ್ರೆಗೆ ಎಂಟು ದಿನಕ್ಕೆ ಮುನ್ನ ಅಂಕೆ ಹಾಕುವ ಶಾಸ್ತ್ರ ನಡೆಸಲಾಗಿದ್ದು, ಇದರ ನಂತರ ಈ ಊರಿನ ಸ್ಥಳೀಯರು ಜಾತ್ರೆ ಮುಗಿಯುವವರೆಗೂ ಬೇರೆ ಊರಿಗೆ ತೆರಳಬಾರದು ಎಂಬ ಪ್ರತೀತಿ ಇದೆ. ಈ ಅವಧಿಯಲ್ಲಿ ಊರಿನಲ್ಲಿ ಯಾರೂ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಅಂಕೆ ಹಾಕುವ ಶಾಸ್ತ್ರದ ಮೂಲಕ ಜಾತ್ರೆಯ ವಿಧಿ ವಿಧಾನಗಳಿಗೆ ಶಾಸ್ತ್ರೋಕ್ತವಾಗಿ ಚಾಲನೆ ದೊರಕಿದಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಾರಿಕಾಂಬಾ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ‘ಈ ಸಲದ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿದೆ. ಕೋವಿಡ್ ನಂತರ ಜಾತ್ರೆ ನಡೆಯುತ್ತಿರುವುದರಿಂದ ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

‘ಫೆ. 6ರಂದು ರಾತ್ರಿ 10ಕ್ಕೆ ಚಿಕ್ಕಮ್ಮನನ್ನು ಹೊರಡಿಸುವ ಶಾಸ್ತ್ರ ನಡೆಯಲಿದೆ. ಫೆ. 7ರಂದು ಬೆಳಿಗ್ಗೆ 5ಕ್ಕೆ ತವರು ಮನೆ ದೇವಸ್ಥಾನದಲ್ಲಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಾತ್ರೆ ಆರಂಭಗೊಳ್ಳಲಿದೆ. ಅಂದು ರಾತ್ರಿ 10ಕ್ಕೆ ರಾಜಬೀದಿ ಉತ್ಸವ ನಡೆಯಲಿದ್ದು, ಫೆ. 8ರ ಬೆಳಗಿನ ಜಾವದ ಹೊತ್ತಿಗೆ ದೇವಿಯ ವಿಗ್ರಹವನ್ನು ಗಂಡನ ಮನೆ ದೇವಸ್ಥಾನದ ಎದುರು ಪ್ರತಿಷ್ಠಾಪಿಸಲಾಗುವುದು’ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಗಿರಿಧರ ರಾವ್ ಮಾಹಿತಿ ನೀಡಿದರು.

‘ಜಾತ್ರೆ ಅಂಗವಾಗಿ ಗಾಂಧಿ ಮೈದಾನದಲ್ಲಿರುವ ನಗರಸಭೆ ರಂಗಮಂದಿರ ದಲ್ಲಿ ಫೆ. 8ರಿಂದ 15ರವರೆಗೆ ಪ್ರತಿದಿನ ಸಂಜೆ 5ಕ್ಕೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ಪ್ರಖ್ಯಾತ ಕಲಾ ತಂಡಗಳು ರಾತ್ರಿ 12ರವರೆಗೂ ತಮ್ಮ ಪ್ರದರ್ಶನವನ್ನು ನೀಡಲಿವೆ’ ಎಂದು ಸಮಿತಿಯ ಖಜಾಂಚಿ ನಾಗೇಂದ್ರ ಕುಮಟಾ ಹೇಳಿದರು.

ದೇವಸ್ಥಾನದ ವಿವಿಧ ಸಮಿತಿಯ ಸಂಚಾಲಕರು, ಪದಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.