ಶನಿವಾರ, ಸೆಪ್ಟೆಂಬರ್ 25, 2021
23 °C

ಶಿವಮೊಗ್ಗ: ನೆಲೆ ಕಳೆದುಕೊಳ್ಳುತ್ತಿರುವ ವಾರದ ಸಂತೆಗಳು

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸುಮಾರು ನಾಲ್ಕು ಲಕ್ಷ ಜನಸಂಖ್ಯೆ ಇರುವ ಶಿವಮೊಗ್ಗ ನಗರದಲ್ಲಿ ವಾರದ ಸಂತೆಗೆ ಇದುವರೆಗೂ ವ್ಯವಸ್ಥಿತ ಸ್ಥಳವಿಲ್ಲ. ಶಿವಮೊಗ್ಗ ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮಿಳ್ಳಘಟ್ಟ ರಸ್ತೆಯ ಮಗ್ಗುಲಲ್ಲೇ ಇದುವರೆಗೂ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿತ್ತು. ಕೊರೊನಾ ಸಂಕಷ್ಟದ ನಂತರ ಅಲ್ಲೂ ಸಂತೆ ಕಣ್ಮರೆಯಾಗಿದೆ.

ತರಕಾರಿ ಮತ್ತು ಹಣ್ಣು ಮಾರುಕಟ್ಟೆ ನಡೆಸಲು ಸೂಕ್ತ ಸ್ಥಳಾವಕಾಶವಿಲ್ಲದೇ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ವ್ಯಾಪಾರ ನಡೆಯುತ್ತಿದೆ. ಶಿವಮೊಗ್ಗ ನಗರಸಭೆ 2014ರಲ್ಲಿ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿತು. 7 ವರ್ಷ ಕಳೆದರೂ ತರಕಾರಿ ಮಾರುಕಟ್ಟೆ ಇಲ್ಲ. ವಾರದ ಸಂತೆಗೂ ಸೂಕ್ತ ಸ್ಥಳಾವಕಾಶದ ವ್ಯವಸ್ಥೆಯಾಗಿಲ್ಲ. 

ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ಅದರ ಸುತ್ತಮುತ್ತಲ ರಸ್ತೆಗಳ ಇಕ್ಕೆಲಗಳಲ್ಲಿ ತರಕಾರಿ, ಹೂವು, ಹಣ್ಣು ಸೇರಿ ಇತರೆ ಸಾಮಗ್ರಿಗಳ ಮಾರಾಟ ನಡೆಯುತ್ತಿದೆ. ಒಂದೂವರೆ ವರ್ಷಗಳ ಹಿಂದೆ ಕೊರೊನಾ ಸಂಕಷ್ಟ ಆರಂಭವಾದ ನಂತರ ಈ ಮಾರುಕಟ್ಟೆಯೂ ಅತಂತ್ರವಾಗಿದೆ. ಲಾಕ್‌ಡೌನ್ ಆರಂಭವಾದ ನಂತರ ನಗರ ಪಾಲಿಕೆ ಮಾರುಕಟ್ಟೆಯನ್ನು ಕಾಶಿಪುರ, ವಿನೋಬನಗರ ಶಿವಾಲಯ, ವೀರಶೈವ ಕಲ್ಯಾಣ ಮಂದಿರ, ಬಿ.ಎಚ್‌.ರಸ್ತೆಯ ಸೈನ್ಸ್ ಮೈದಾನ, ಗೋಪಾಳ ಮೊದಲಾದ ಭಾಗಗಳಲ್ಲಿ ಮಾರಾಟಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿತ್ತು. ಸ್ಥಳೀಯವಾಗಿ ಸಾಮಗ್ರಿಗಳು ದೊರೆಯುತ್ತಿದ್ದ ಕಾರಣ ಜನರೂ ಅಲ್ಲಿ ಖರೀದಿಸಲು ಆರಂಭಿಸಿದ್ದರು. ಈಗ ಅದೇ ಕಾಯಂ ಸಂತೆಗಳಾಗಿವೆ. ಲಾಕ್‌ಡೌನ್ ತೆರವಿನ ನಂತರವೂ ವ್ಯಾಪಾರಿಗಳು ಆ ಸ್ಥಳಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ಹೆಚ್ಚಿದ  ತಳ್ಳುಗಾಡಿ ವ್ಯಾಪಾರ: ಲಾಕ್‌ಡೌನ್‌ ಸಮಯದಲ್ಲಿ ಹಣ್ಣು, ತರಕಾರಿ, ಹೂವುಗಳ ಮಾರಾಟಕ್ಕೆ ಸಂಚಾರಿ ವಾಹನಗಳು, ತಳ್ಳುಗಾಡಿಗಳ ವ್ಯವಸ್ಥೆ ಮಾಡಲಾಗಿತ್ತು. ಹಾಪ್‌ಕಾಮ್ಸ್, ಎಪಿಎಂಸಿ, ನಗರ ಪಾಲಿಕೆ ವತಿಯಿಂದ ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಸ್ವಯಂ ಇಚ್ಛೆಯಿಂದ ಸ್ವಂತ ವಾಹನಗಳಲ್ಲಿ ಬೀದಿಗಳಿಗೆ ತೆರಳಿ ವ್ಯಾಪಾರ ಮಾಡುವವರಿಗೆ ಪ್ರೋತ್ಸಾಹ ನೀಡಲಾಗಿತ್ತು. ಜನರೂ ಮನೆ ಬಾಗಿಲಿಗೆ ಬರುವ ವ್ಯಾಪಾರಿಗಳ ಬಳಿ ಖರೀದಿಸಲು ಒಲವು ತೋರಿದ್ದರು. ಈಗ ಪ್ರತಿ ವ್ಯಾಪಾರಿಯೂ ಆಯಾ ಬೀದಿಗಳಲ್ಲಿ ಕಾಯಂ ಗ್ರಾಹಕರನ್ನು ಕಂಡುಕೊಂಡಿದ್ದಾರೆ. ಸಂಚಾರಿ ವಾಹನಗಳ ಮೂಲಕ ವ್ಯಾಪಾರ ಮುಂದುವರಿದಿದೆ. ಬದಲಾದ ಪರಿಸ್ಥಿಯಲ್ಲಿ ವಾರದ ಸಂತೆಯ ಸ್ವರೂಪವೂ ಬದಲಾಗಿ ಹೋಗಿದೆ.

ಹೊಸ ಸಮಸ್ಯೆ ಸೃಷ್ಟಿಸಿದ ವ್ಯಾಪಾರ: ಪಾಲಿಕೆ ವ್ಯಾಪ್ತಿಯಲ್ಲಿ ತರಕಾರಿ, ಹಣ್ಣು ಮಾರಾಟಗಾರರು ಸೇರಿ 3,300 ಬೀದಿಬದಿ ವ್ಯಾಪಾರಿಗಳಿದ್ದರು. ಕೊರೊನಾ ಲಾಕ್‌ಡೌನ್‌ ನಂತರ ಅವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲವು ತಿಂಗಳ ಹಿಂದೆ ನಗರ ಪಾಲಿಕೆ 1,880 ವ್ಯಾಪಾರಿಗಳನ್ನು ಗುರುತಿಸಿ ಗುರುತಿನ ಪತ್ರ ನೀಡಿತ್ತು. ಸಂಚಾರಿ, ಬೀದಿಬದಿ ವ್ಯಾಪಾರಿಗಳ ಹೆಚ್ಚಳ ಸುಗಮ ಸಂಚಾರ ಸೇರಿದಂತೆ ಹಲವು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಕಸದ ನಿರ್ವಹಣೆಗೂ ಸವಾಲಾಗಿದೆ.

***

ದೊಡ್ಡ ಸಂತೆಗೆ ಮೂಲ ಸೌಕರ್ಯಗಳ ಕೊರತೆ
-ರವಿ.ಆರ್.ತಿಮ್ಮಾಪುರ
ಆನವಟ್ಟಿ (ಸೊರಬ ತಾಲ್ಲೂಕು):
ಇಲ್ಲಿನ ಸಂತೆ ಮಾರುಕಟ್ಟೆ ಐದು ಎಕರೆಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದೆ. ತಾಲ್ಲೂಕಿನ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಇದೆ. ಕೊರೊನಾ ಲಾಕ್‍ಡೌನ್‍ನಿಂದ ವರ್ಷದಿಂದ ಶನಿವಾರದ ಸಂತೆ ನಡೆಯದೆ, ತರಕಾರಿ ಮಾರುಕಟ್ಟೆಯಲ್ಲಿ ಕಸ ಬೆಳೆದು ವ್ಯಾಪಾರ ಪುನರಾರಂಭಿಸಲು ಸಾಧ್ಯವಾಗದ ಸ್ಥಿತಿ ಇದೆ.

ಸಂತೆ ನಡೆಯದ ಕಾರಣ ಪಟ್ಟಣದಲ್ಲಿ ಒಂದು–ಎರಡು ಇದ್ದ ತರಕಾರಿ ಅಂಗಡಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿವೆ. ವಿವಿಧ ವೃತ್ತಿ ಮಾಡುವವರು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ತರಕಾರಿಗಳ ಬೆಲೆ ಗಗನಕ್ಕೇರಿದೆ. ರೈತರಿಗೆ ಬೆಲೆಯ ಲಾಭವೂ ಸಿಗುತ್ತಿಲ್ಲ. ಜನಸಾಮಾನ್ಯರು ದುಬಾರಿ ಬೆಲೆ ತೆರುತ್ತಿದ್ದಾರೆ.

ಅಂದಾಜು 40 ಹಳ್ಳಿಗಳ ಜನರು ಆನವಟ್ಟಿ ಸಂತೆಗೆ ಬರುತ್ತಾರೆ. ಪಕ್ಕದ ಜಿಲ್ಲೆಗಳಿಂದಲ್ಲೂ ಸೇರಿ 400ಕ್ಕೂ ಹೆಚ್ಚು ವ್ಯಾಪಾರಸ್ಥರು ಸೇರುವ ಸಂತೆ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿ ಬೇಕಾದ ಶುದ್ಧ ಕುಡಿಯುವ ನೀರು, ಶೌಚಾಲಯ, ರಸ್ತೆಗಳ ಕೊರತೆ ಇದೆ. ಸಂತೆ ಮಾರುಕಟ್ಟೆಗೆ ಮೂಲಸೌಕರ್ಯ ಒದಗಿಸಬೇಕು. ನಂತರ ಸಂತೆ ನಡೆಸುವುದು ಸೂಕ್ತ ಎನ್ನುತ್ತಾರೆ ಗ್ರಾಮಸ್ಥ ಮಲ್ಲಿಕಾರ್ಜುನ ಮೇಷ್ಟ್ರು.

ಮಾಂಸ ಮತ್ತು ಚಿಕನ್ ಅಂಗಡಿ ಮಳಿಗೆಗಳ ಬಾಗಿಲು ಸೇರಿ ಕಟ್ಟಡಗಳು ಸಂಪೂರ್ಣ ಹಾಳಾಗಿವೆ. ಗಲೀಜು ನೀರು ಹೋಗುವಂತೆ ವ್ಯವಸ್ಥಿತವಾಗಿ ನಿರ್ಮಿಸಿಲ್ಲ. ಆನವಟ್ಟಿ ನೂತನವಾಗಿ ಪಟ್ಟಣ ಪಂಚಾಯಿತಿ ಆಗಿದೆ. ಈ ಹಳೆ ಮಳಿಗೆಗಳನ್ನು ನೆಲಸಮ ಮಾಡಿ, ಕೋಳಿ, ಕುರಿಗಳನ್ನು ಇಟ್ಟುಕೊಳ್ಳಲು ಗೋದಾಮು ಹಾಗೂ ಕುರಿ, ಕೋಳಿ ಕತ್ತರಿಸಲು, ಮಾಂಸ, ಚಿಕನ್ ಮಾರಾಟ ಮಾಡಲು ಪ್ರತ್ಯೇಕವಾಗಿ ಹೊಸದಾಗಿ ವ್ಯವಸ್ಥಿತ ಮಳಿಗೆಗಳನ್ನು ನಿರ್ಮಿಸಬೇಕು. ಕಲ್ಮಶ ಹಾಗೂ ಬಳಕೆ ಮಾಡಿರುವ ನೀರು ಸರಿಯಾಗಿ ಹೋಗುವಂತೆ ನೆಲಕ್ಕೆ ಕಾಂಕ್ರೀಟ್ ಮಾಡಿಸಬೇಕು ಎನ್ನುತ್ತಾರೆ ಗ್ರಾಮಸ್ಥ ಚನ್ನಕೇಶವ.

‘ಮೀನು ಮಾರುಕಟ್ಟೆ ಶೆಡ್‍ನ ಕಬ್ಬಿಣದ ಕಂಬಗಳ ಬುಡಕ್ಕೆ ತುಕ್ಕು ಹಿಡಿದು ಹಾಳಾಗಿದ್ದವು. ಮೀನು ವ್ಯಾಪಾರಸ್ಥರೇ ಸೇರಿ ಕಂಬಗಳ ಬುಡಕ್ಕೆ ಕಾಂಕ್ರೀಟ್ ಹಾಕಿಸಿದ್ದಾರೆ. ಮೀನು ಮಾರಾಟದ ಪ್ರತಿ ಕೆ.ಜಿಗೆ ₹ 4 ತನಕ ಪಂಚಾಯಿತಿಗೆ ತೆರಿಗೆ ಕಟ್ಟುತ್ತೇವೆ. ಪಂಚಾಯಿತಿ ಸಿಬ್ಬಂದಿ ಮಾರುಕಟ್ಟೆಯ ಅಭಿವೃದ್ಧಿ ಮಾಡುತ್ತಿಲ್ಲ. ಮಾರುಕಟ್ಟೆಯಿಂದ ನೀರು ಹರಿದುಹೋಗಲು ಕಾಲುವೆ ಹಾಗೂ ಜನರು ವ್ಯಾಪಾರ ಮಾಡಲು ಅನುಕೂಲವಾಗುವಂತೆ, ಮಾರುಕಟ್ಟೆಯಿಂದ ರಸ್ತೆವರೆಗೆ ಕಾಂಕ್ರೀಟ್‍ ಹಾಕಿಸಬೇಕು’ ಎಂದು ಆಗ್ರಹಿಸುತ್ತಾರೆ ಮೀನು ವ್ಯಾಪಾರಿ ಫಯಾಜ್ ಅಹಮದ್‌.

‘ತಗಡಿನ ಶೆಡ್ ಅನ್ನು ಬಹುಪಾಲು ವ್ಯಾಪಾರಸ್ಥರು ಬಳಕೆ ಮಾಡುತ್ತಿಲ್ಲ. ಈ ಶೆಡ್‍ಗಳನ್ನು ಕುರಿ ಸಾಕಾಣಿಕೆ, ಕಟ್ಟಿಗೆ ಹಾಕಲು, ಇತರೆ ಕೆಲಸಗಳಿಗೆ ಕೆಲವರು ಬಳಕೆ ಮಾಡುವ ಮೂಲಕ ಹಾಳು ಮಾಡುತ್ತಿದ್ದಾರೆ. ಅಧಿಕಾರಿಗಳು ಮೊದಲಿನಂತೆ ಸಂತೆ ಪ್ರಾರಂಭಿಸಿ, ವ್ಯಾಪಾರಸ್ಥರೇ ಬಳಕೆ ಮಾಡುವಂತೆ ನೋಡಿಕೊಳ್ಳಬೇಕು’ ಎನ್ನುವುದು ಸುರೇಶ್ ಮಸಾಲ್ತಿ ಒತ್ತಾಯ.

ಮಾರುಕಟ್ಟೆ ಒಳಗೆ ವ್ಯಾಪಾರಕ್ಕೆ ಆಗ್ರಹ: ರಾಜ್ಯ ಹೆದ್ದಾರಿ ಪಕ್ಕದಲ್ಲಿ, ಆಸ್ಪತ್ರೆ ಮುಂಭಾಗ, ಸಂತೆ ಮಾರುಕಟ್ಟೆ ಹೋಗುವ ರಸ್ತೆಯ ಬದಿಗಳಲ್ಲಿ ಸಂತೆ ಅಂಗಡಿಗಳನ್ನು ಹಾಕುವುದರಿಂದ, ಪ್ಲಾಸ್ಟಿಕ್‌ ತ್ಯಾಜ್ಯ, ಕೊಳೆತ ತರಕಾರಿ ಹಾಗೂ ಕಸವನ್ನು ಅಲ್ಲೇ ಬಿಟ್ಟು ವ್ಯಾಪಾಸ್ಥರು ಹೋಗುತ್ತಾರೆ. ಪಂಚಾಯಿತಿ ಸಿಬ್ಬಂದಿಯೂ ಸ್ವಚ್ಛ ಮಾಡುವುದಿಲ್ಲ. ಪಟ್ಟಣದ ಸ್ವಚ್ಛತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ಎಲ್ಲಾ ಸಂತೆ ವ್ಯಾಪಾರಸ್ಥರು ಮಾರುಕಟ್ಟೆ ಒಳಗಡೆಗೆ ವ್ಯಾಪಾರ ಮಾಡುವಂತೆ ಪಟ್ಟಣ ಪಂಚಾಯಿತಿ ಕ್ರಮಕೈಗೊಳ್ಳಬೇಕು ಎಂದು ಸಂತೆ ಮಾರುಕಟ್ಟೆಯ ರಸ್ತೆ ಬದಿಯ ನಿವಾಸಿಗಳು ಆಗ್ರಹಿಸುತ್ತಾರೆ.

ತರಕಾರಿ ವ್ಯಾಪಾಸ್ಥರಿಗೂ ಶೆಡ್ ಅಗತ್ಯ: ಕಿರಾಣಿ ಹಾಗೂ ವಿವಿಧ ವ್ಯಾಪಾರಸ್ಥರಿಗೆ ತಗಡಿನ ಶೆಡ್ ನಿರ್ಮಿಸಿದ್ದಾರೆ. ಅವರಂತೆ ತರಕಾರಿ ಮಾರುಕಟ್ಟೆಗೂ ಶೆಡ್ ನಿರ್ಮಿಸಬೇಕು. ಮಳೆಗಾಲದಲ್ಲಿ ಜನರಿಗೆ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ. ರಸ್ತೆ ಹಾಗೂ ಮಳೆ ನೀರು ಹೋಗಲು ಸರಿಯಾಗಿ ಕಾಲುವೆ ನಿರ್ಮಾಣ ಮಾಡಬೇಕು ಎಂದು ತರಕಾರಿ ವ್ಯಾಪಾರಿ ಸಂಜೀವ ನೇರಲಗಿ ಒತ್ತಾಯಿಸಿದರು.

ಶೌಚಾಲಯವಿದೆ, ಬಾಗಿಲು ಇಲ್ಲ: ವರ್ಷದಿಂದ ಸಂತೆ ನಡೆದಿಲ್ಲ. ಮಾರುಕಟ್ಟೆ ಶೌಚಾಲಯಕ್ಕೆ ಬಾಗಿಲು ಜೋಡಿಸದೆ ಕಾಮಗಾರಿಯ ಬಿಲ್‌ ಪಡೆಯಲಾಗಿದೆ. ಸಾರ್ವಜನಿಕರ ಬಳಕೆಗೆ ಸಿಗಬೇಕಾದ ಶೌಚಾಲಯ ಹಂದಿಗಳ, ನಾಯಿಗಳ ತಾಣವಾಗಿವೆ ಎಂದು ದೂರುತ್ತಾರೆ ಸ್ಥಳೀಯರು.

***

ಕೋಟಿ ವೆಚ್ಚದ ಸಂತೆಕಟ್ಟೆ ಅಲೆಮಾರಿಗಳ ತಾಣ!
-
ರಿ.ರಾ. ರವಿಶಂಕರ
ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆಗೆ 8 ದಶಕಗಳ ಇತಿಹಾಸ ಇದೆ. ಊರು ಬೆಳೆದಂತೆ ಕಾಲ ಕಾಲಕ್ಕೆ ತನ್ನ ಇರುವಿಕೆಯನ್ನು ಬದಲಿಸುತ್ತಾ, ಬೀದಿ ಬದಿ ಹಾಗೂ ಖಾಸಗಿಯವರ ಹಕ್ಕಿನ ಜಾಗದಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ಸೂಕ್ತ ನೆಲೆ ಸಿಕ್ಕಿದ್ದು ಮಾತ್ರ 2008–09ರಲ್ಲಿ.

ಹೊಸನಗರ ತಾಲ್ಲೂಕಿನಲ್ಲಿಯೇ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಸಂತೆ ಎಂಬ ಹೆಗ್ಗಳಿಕೆ ಇತ್ತು. ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ನಿವೇಶನ ನೀಡಿದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ₹  50 ಲಕ್ಷ ವೆಚ್ಚದಲ್ಲಿ ಒಂದು ದೊಡ್ಡ ಹಾಗೂ ಸಣ್ಣ ಮೂರು ಶೆಡ್‌ಗಳನ್ನು ನಿರ್ಮಿಸಿದೆ. ರಸ್ತೆ , ವಿದ್ಯುತ್‌ , ಕುಡಿಯುವ ನೀರಿನ ಯೋಜನೆ, ಶೌಚಾಲಯ ಸೇರಿ ಯಾವುದೇ ಮೂಲ ಸೌಕರ್ಯ ಕಲ್ಪಿಸದೆ ತರಾತುರಿಯಲ್ಲಿ ಗ್ರಾಮಾಡಳಿತಕ್ಕೆ ಹಸ್ತಾಂತರಿಸಿದೆ.

ಮಳೆಗಾಲದಲ್ಲಿ ಕೆಸರುಗದ್ದೆಯ ಕಂಬಳವಾಗಿರುತ್ತಿದ್ದ ಸಂತೆಯಲ್ಲಿ ವ್ಯಾಪಾರಸ್ಥರು ಟೆಂಟ್‌ ಹಾಕುತ್ತಿದ್ದರು. ಗ್ರಾಹಕರ ಪಡಿಪಾಟಲು, ವ್ಯಾಪಾರಿಗಳು ಸಂಕಷ್ಟ ಕೇಳುವವರಿಲ್ಲ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಶೇಷ ಕಾಳಜಿಯ ಫಲವಾಗಿ 2017–18ನೇ ಸಾಲಿನ ಕೇಂದ್ರದಿಂದ ವಿಶೇಷ ಅನುದಾನ ₹ 1 ಕೋಟಿ ತಂದು ಈ ಮಾರುಕಟ್ಟೆಗೆ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರು. ಉಳಿದ ಮೂಲಸೌಕರ್ಯಕ್ಕೆ ಅಭಿವೃದ್ಧಿಯ ನೀಲನಕ್ಷೆ ತಯಾರಿಸಿ, ಹೆಚ್ಚುವರಿ ₹ 2.5 ಕೋಟಿ ಬಿಡುಗಡೆಗೆ ಪ್ರಸ್ತಾವ ಕಳಿಸಿದ್ದರು. ಅದರಲ್ಲಿ ₹ 50 ಲಕ್ಷದ ಮಂಜೂರಾಗಿದೆ. ಹೈಟೆಕ್‌  ಶೌಚಾಲಯ, ತರಕಾರಿ ಸ್ವಚ್ಛತೆ ಹಾಗೂ ಮಾರಾಟದ ಶೆಡ್‌ ನಿರ್ಮಾಣ ಹಂತದಲ್ಲಿದೆ.

ಶೆಡ್‌ ನವೀಕರಿಸಿ ಚಿಕನ್‌ ಅಂಗಡಿ ಹಾಗೂ ಮೀನು ಮಾರಾಟಕ್ಕೆ ₹ 24 ಸಾವಿರ ಬಾಡಿಗೆ ಪಡೆಯುತ್ತಿದೆ. ವಾರದ ಸುಂಕ ವಸೂಲಿಗೆ ₹  1.25 ಲಕ್ಷದ ಟೆಂಡರ್‌ ನೀಡಲಾಗಿದೆ. ಮತ್ತೊಂದು ರೂಂ ನಲ್ಲಿ ಊರಿನ ಮರು ಬಳಕೆಯ ತ್ಯಾಜ್ಯವನ್ನು ಸಂಗ್ರಹಿಸಿಟ್ಟು ಸರ್ಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. 

ಪ್ರತಿ ಸೋಮವಾರ ಸ್ಥಳೀಯರ ಹೊರತಾಗಿ ದೂರದ ನ್ಯಾಮತಿ, ಮಲ್ಲಾಪುರ ಶಿಕಾರಿಪುರ ,ಕುಂಸಿ, ರಟ್ಟೆಹಳ್ಳಿ ರಾಣೆಬೆನ್ನೂರು, ಶಿವಮೊಗ್ಗ, ಆಯನೂರು, ಹಾರನಹಳ್ಳಿ ಹೊಸನಗರ ಸುತ್ತ ಮುತ್ತಲಿನ ವ್ಯಾಪಾರಸ್ಥರು ಇಲ್ಲಿ ತರಕಾರಿ, ಸೊಪ್ಪು, ಬಟ್ಟೆ, ದಿನಸಿ, ತಿಂಡಿ ತಿನಿಸುಗಳನ್ನು ತಂದು ಮಾರುವುದು ವಾಡಿಕೆ. ವ್ಯಾಪಾರಿಗಳ ಹಾಗೂ ಗ್ರಾಹಕರ ದ್ವಿಚಕ್ರ ವಾಹನ, ಲಘು ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಇದ್ದರೂ ಸಮರ್ಪಕವಾದ ನಿರ್ವಹಣೆ ಇಲ್ಲ. ದಶಕದಿಂದ ಶೆಡ್‌ಗಳ ಜಂತುಗಳು ಸುಣ್ಣ ಬಣ್ಣ ಕಾಣದೆ ತುಕ್ಕು ಹಿಡಿಯುತ್ತಿದ್ದರೂ ಅಧಿಕಾರಿಗಳು ಕಣ್ಣೆತ್ತಿ ನೋಡುತ್ತಿಲ್ಲ.

ಈ ವರ್ಷದ ಕೊರೊನಾ ಲಾಕ್‌ಡೌನ್‌ನಿಂದ ಸಂತೆ ರದ್ದಾದ ಪರಿಣಾಮ ಮಾರುಕಟ್ಟೆಯಲ್ಲಿ ವ್ಯಾಪಾರ–ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ವ್ಯಾಪಾರಸ್ಥರು ತಮ್ಮಲ್ಲಿರುವ ಲಘು ವಾಹನಗಳ ಮೂಲಕ ಮನೆ ಮನೆಗೆ ತೆರಳಿ ತರಕಾರಿ ಮಾರಾಟಕ್ಕೆ ಮುಂದಾಗಿದ್ದಾರೆ. ಲಾಕ್‌ಡೌನ್‌ನಿಂದ ಹೊಸ ಹೊಸ ಮುಖಗಳು ತರಕಾರಿ ಮಾರಾಟಕ್ಕೆ ಸಜ್ಜಾಗಿರುವುದರಿಂದ ಮೂಲ ವ್ಯಾಪಾರಸ್ಥರು ಸಂತೆ ವಹಿವಾಟು ಬಿಡಲು ಆಗದೆ, ನಡೆಸಲೂ ಆಗದೆ ಪರದಾಡುತ್ತಿದ್ದಾರೆ. ಮಾರುಕಟ್ಟೆಯ ವಿಶಾಲವಾದ ಜಾಗ ನೀರಿಕ್ಷಿತ ಉದ್ದೇಶಕ್ಕೆ ಬಳಕೆಯಾಗದೆ ಅಲೆಮಾರಿ ವ್ಯಾಪಾರಿಗಳ ಆಶ್ರಯ ತಾಣವಾಗಿ ಪರಿವರ್ತನೆ ಹೊಂದಿದೆ.

***

ಸಂತೆಯಿಲ್ಲದೇ ಪರದಾಡುವ ಗ್ರಾಹಕರು
-ಕುಮಾರ್ ಅಗಸನಹಳ್ಳಿ
ಹೊಳೆಹೊನ್ನೂರು: ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಬಳಕೆಯ ವಸ್ತುಗಳು ಸಿಗುವುದು ಸಂತೆಯಲ್ಲಿ. ಅಂತಹ ಸಂತೆಯೂ ಕೋವಿಡ್ ಹಾವಳಿ ನಂತರ ಮಾಯವಾಗುತ್ತಿವೆ.

ಪಟ್ಟಣದ ಸಂತೆಗೆ ಸುತ್ತಲಿನ 25ರಿಂದ 30 ಗ್ರಾಮಗಳ ಜನರು ಬಂದು ತಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು. ಇಲ್ಲಿ ನಡೆಯುವ ಸಂತೆಗೆ ಹೆಚ್ಚಾಗಿ ರೈತರೇ ವ್ಯಾಪಾರಿಗಳು. ತಾಜಾ ತರಕಾರಿ ಹಾಗೂ ಸೊಪ್ಪು ದೊರೆಯುತ್ತಿತ್ತು. ಆದ್ದರಿಂದ ಗ್ರಾಮೀಣ ಪ್ರದೇಶದ ಜನತೆಗೆ ಈ ಸಂತೆಯು ಅಚ್ಚುಮೆಚ್ಚಿನದಾಗಿತ್ತು.

ಎರಡು ವರ್ಷಗಳಿಂದ ಸಂತೆ ಸ್ಥಗಿತಗೊಳಿಸಲಾಗಿದೆ. ನಂತರ ಸಂತೆ ರಸ್ತೆಯ ಇಕ್ಕೆಲುಗಳಲ್ಲಿ ಕೆಲವೇ ಕೆಲವು ಅಂಗಡಿಗಳಿಗೆ ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಸಂತೆ ನಡೆಸಲು ಅವಕಾಶ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಹೊಳೆಹೊನ್ನೂರು, ಮಲ್ಲಾಪುರ, ಆನವೇರಿಯಲ್ಲಿ ಸಂತೆ ನಡೆಸಲು ಸ್ಥಳದ ಅಭಾವವಿದೆ. ರಸ್ತೆಯ ಅಕ್ಕಪಕ್ಕದಲ್ಲಿ ನಡೆಸಲಾಗುತ್ತಿದೆ. ಆದರೆ, ಮಾರಶೆಟ್ಟಿಹಳ್ಳಿ, ಅರಹತೊಳಲು ಗ್ರಾಮಗಳಲ್ಲಿ ಸಂತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ಅಂಗಡಿಗಳಲ್ಲಿ ದುಪ್ಪಟ್ಟು ಬೆಲೆಗೆ ತರಕಾರಿ ಸೇರಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ತಾಜಾ‌ ತರಕಾರಿ: ಕೊರೊನಾದಿಂದ ಸಂತೆಗಳು ನಿಯಮಿತವಾಗಿ ನಡೆಯದೇ  ತರಕಾರಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಷ್ಟವಾಗುತ್ತಿದೆ ಎನ್ನುವುದು ರೈತರ ಅಳಲು.

ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂತೆ ಕಡಿಮೆಯಾಗಿವೆ. ಬೆಳೆದ ತರಕಾರಿಗಳನ್ನು ಮಾರಟ ಮಾಡಲು ಅವಕಾಶ ಕಡಿಮೆಯಾಗಿವೆ.  ಮಾಡಿದ ಖರ್ಚು ಸಹ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಉತ್ತಮ ಸೌಲಭ್ಯದೊಂದಿಗೆ ಸಂತೆ ನಡೆಸಲು ಅನುಮತಿ ನೀಡಬೇಕು ಎನ್ನುತ್ತಾರೆ  ಮಂಗೋಟೆ ವೆಂಕಟೇಶಪ್ಪ.

***

ಸಂತೆಯಿಲ್ಲದ ಪರಿಣಾಮ ಕೆಲವು ಅಂಗಡಿಗಳಲ್ಲಿ ಬೇಕಾಬಿಟ್ಟಿ ಬೆಲೆ ಹೇಳುತ್ತಾರೆ. ರೈತರು ಬೆಳೆದ ತರಕಾರಿ, ಹೂವು ಭದ್ರಾವತಿ ಹಾಗೂ ಶಿವಮೊಗ್ಗ ನಗರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಲ್ಲಿ ದಲ್ಲಾಳಿಗಳ ಕಾಟ ಜಾಸ್ತಿ. ಸಂತೆ ನಡೆಸಲು ಅನುವು ಮಾಡಿಕೊಟ್ಟರೆ ಎಲ್ಲರಿಗೂ ಅನುಕೂಲ.
-ರೇಖಾ ಉಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ

***

ಕೊರೊನಾದಿಂದ ಕೆಲವೇ ಅಂಗಡಿಗಳಿಗೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ನಿತ್ಯ ಉಪಯೋಗಿಸುವ ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಜೀವನ ನಡೆಸುವುದು ಕಷ್ಟವಾಗಿದೆ.
-ರಂಗನಾಥ ವೈ, ಗ್ರಾಹಕ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು