ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ ವೈಫಲ್ಯ; ಹಣ ವಾಪಸ್‌

ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ
Last Updated 10 ಸೆಪ್ಟೆಂಬರ್ 2022, 5:09 IST
ಅಕ್ಷರ ಗಾತ್ರ

ಸಾಗರ: ನಗರವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಮೂಲಕ ಅನುಷ್ಠಾನಗೊಳ್ಳಬೇಕಿದ್ದ ವಸತಿ ಯೋಜನೆ ವೈಫಲ್ಯದ ಕುರಿತು ಶುಕ್ರವಾರ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದೆ.

‘ಯೋಜನೆ ಅನುಷ್ಠಾನಗೊಳ್ಳದ ಕಾರಣ ಫಲಾನುಭವಿಗಳಿಗೆ ಅವರು 5 ವರ್ಷಗಳ ಹಿಂದೆ ಪಾವತಿಸಿದ ₹ 50,000 ಹಣವನ್ನು ಬಡ್ಡಿ ಇಲ್ಲದೆ ವಾಪಸ್ ನೀಡಲಾಗುತ್ತಿದೆ. ಫಲಾನುಭವಿಗಳು ಸ್ವಸಹಾಯ ಸಂಘ, ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೇರಳ ಬಡ್ಡಿ ದರಕ್ಕೆ ಸಾಲ ಮಾಡಿ ಈ ಹಣ ಕಟ್ಟಿದ್ದಾರೆ. ಈಗ 5 ವರ್ಷಗಳ ನಂತರ ಬಡ್ಡಿ ಇಲ್ಲದೆ ಅವರಿಗೆ ಹಣ ವಾಪಸ್ ನೀಡಿರುವುದು ಎಷ್ಟು ಸರಿ’ ಎಂದು ಪ್ರತಿಪಕ್ಷ ನಾಯಕ ಗಣಪತಿ ಮಂಡಗಳಲೆ ಪ್ರಶ್ನಿಸಿದರು.

ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯೆ ಎನ್.ಲಲಿತಮ್ಮ, ‘ಅಧಿಕಾರಿಗಳ ಲೋಪದಿಂದಾಗಿ ವಸತಿ ಯೋಜನೆ ಅನುಷ್ಠಾನ ವಿಫಲಗೊಂಡಿದೆ. ಫಲಾನುಭವಿಗಳು ತಾವು ಕಟ್ಟಿದ ಹಣ ವಾಪಸ್ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ತಮಗೊಂದು ಸೂರು ದೊರಕುತ್ತದೆ ಎಂದು ಕನಸು ಕಂಡಿದ್ದರು. ಆದರೆ, ಮನೆ ಕಟ್ಟಿಕೊಡಲು ಸಾಧ್ಯವಾಗದೇ ಇರುವುದಕ್ಕೆ
ಬಡವರ ಕಣ್ಣೀರಿನ ಶಾಪ ನಮಗೆ ತಟ್ಟದೆ ಇರದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಡಲು ₹2 ಲಕ್ಷದಿಂದ ₹2.5 ಲಕ್ಷ ಮಾತ್ರ ನೆರವು ನೀಡಿದರೆ ಸಾಕಾಗುವುದಿಲ್ಲ. ಈಗಿನ ಕಾಲಮಾನಕ್ಕೆ ತಕ್ಕಂತೆ ನೆರವಿನ ಪ್ರಮಾಣ ಇರಬೇಕು. ಇಷ್ಟು ಕಡಿಮೆ ಮೊತ್ತದ ಅನುದಾನ ನೀಡಿದರೆ ಮನೆ ಕಟ್ಟುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಚುನಾವಣೆ ಬರುವ ಹೊತ್ತಿಗೆ ಅಗ್ಗದ ಜನಪ್ರಿಯತೆಗಾಗಿ ಯೋಜನೆ ರೂಪಿಸಿದರೆ ಏನಾಗುತ್ತದೆ ಎಂಬುದಕ್ಕೆ ಸ್ಲಂ ಬೋರ್ಡ್‌ನ ವಸತಿ ಯೋಜನೆ ಸಾಕ್ಷಿಯಾಗಿದೆ. ಮನೆ ನಿರ್ಮಿಸಲು ಕಡಿಮೆ ಹಣ ನಿಗದಿ ಮಾಡಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ’ ಎಂದು ಹೇಳುವ ಮೂಲಕ ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ತಿರುಗೇಟು ನೀಡಿದರು.

‘ಗುತ್ತಿಗೆದಾರರ ಲೋಪದಿಂದಾಗಿ ವಸತಿ ಯೋಜನೆ ವಿಫಲವಾಗಿದೆ. ಆದರೆ, ಶಾಸಕ ಹಾಲಪ್ಪ ಅವರ ಪ್ರಯತ್ನದಿಂದ ಫಲಾನುಭವಿಗಳಿಗೆ ಅವರು ಕಟ್ಟಿದ ಹಣ ಮರಳಿ ದೊರಕಿದೆ. ಸರ್ಕಾರಕ್ಕೆ ಹೋದ ಹಣ, ಸ್ಮಶಾನಕ್ಕೆ ಹೋದ ಹಣ ವಾಪಸ್ ಬರುವುದಿಲ್ಲ ಎಂಬ ಗಾದೆ ಸುಳ್ಳಾಗಿದೆ’ ಎಂದು ಹೇಳಿದರು.

‘ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ₹40 ಲಕ್ಷ ಮೊತ್ತದ ಸಿವಿಲ್ ಕಾಮಗಾರಿ ನಡೆಸಲು ಕ್ರಿಯಾಯೋಜನೆ ರೂಪಿಸಲಾಗಿದ್ದು, ಯಾವುದೇ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು ಲಲಿತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ನಿರುದ್ಯೋಗಿ ಯುವಕ ಯುವತಿಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆಗೆ ನಿರೀಕ್ಷೆಗೆ ತಕ್ಕಂತೆ ಫಲಾನುಭವಿಗಳು ಅರ್ಜಿ ಸಲ್ಲಿಸದೆ ಇರುವ ವಿಷಯವನ್ನು ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್ ಪ್ರಸ್ತಾಪಿಸಿದರು. ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಜನರಿಗೆ ಆಸಕ್ತಿ ಇಲ್ಲವೇ ಅಥವಾ ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವುದರಲ್ಲಿ ನಾವು ಹಿಂದೆ ಬಿದ್ದಿದ್ದೇವೆಯೇ ಎನ್ನುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ನಿರುದ್ಯೋಗಿ ಯುವಕರಿಗೆ ನೆರವು ಕಲ್ಪಿಸುವ ಯೋಜನೆಯನ್ನು ಬ್ಯಾಂಕ್ ಮೂಲಕ ಒದಗಿಸಲು ಮುಂದಾಗಿರುವುದು ಸಮಸ್ಯೆಗೆ ಕಾರಣವಾಗಿದೆ. ನಗರಸಭೆಯಿಂದ ಆಯ್ಕೆಯಾದ ಫಲಾನುಭವಿ ಬ್ಯಾಂಕ್‌ಗೆ ಹಲವು ಬಾರಿ ಸುತ್ತಿ ಆತನ ಚಪ್ಪಲಿ ಸವೆಯುತ್ತದೆ ಹೊರತು ಅಲ್ಲಿ ಸುಲಭವಾಗಿ ಸಾಲ ಸೌಲಭ್ಯ ದೊರಕುವುದಿಲ್ಲ. ಈ ಕಾರಣಕ್ಕೆ ಅರ್ಜಿ ಹಾಕುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಸದಸ್ಯ ಉಮೇಶ್ ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿ.ಮಹೇಶ್, ಪೌರಾಯುಕ್ತ ರಾಜು ಡಿ.ಬಣಕಾರ್ ಇದ್ದರು.

***

ಬಿಜೆಪಿ ಕಚೇರಿ ನಿರ್ಮಾಣಕ್ಕೆ ನಿವೇಶನ: ಮಾತಿನ ಚಕಮಕಿ

ನಗರವ್ಯಾಪ್ತಿಯಲ್ಲಿ ಬಿಜೆಪಿ ಕಚೇರಿ ನಿರ್ಮಾಣಕ್ಕೆ ನಗರಸಭೆಯಿಂದ ನಿವೇಶನ ನೀಡುವ ವಿಷಯವನ್ನು ಸಭೆಯ ಅಜೆಂಡಾದಲ್ಲಿ ತರದೆ ಇತರ ವಿಷಯಗಳಲ್ಲಿ ತಂದಿರುವ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿಗೆ ನಿವೇಶನ ನೀಡುವುದಾದರೆ ಇತರ ಪಕ್ಷಗಳಿಗೂ ನೀಡಬೇಕಾಗುತ್ತದೆ ಎಂದು ವಿರೋಧ ಪಕ್ಷದ ಸದಸ್ಯರು ಹೇಳಿದ್ದಕ್ಕೆ ಕಚೇರಿ ಇಲ್ಲದ ಪಕ್ಷಗಳಿಗೆ ನಿವೇಶನ ನೀಡಬಹುದು ಎಂದು ಬಿಜೆಪಿ ಸದಸ್ಯ ಟಿ.ಡಿ.ಮೇಘರಾಜ್ ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಚೇರಿಯಾಗಿರುವ ಗಾಂಧಿ ಮಂದಿರದ ಮಾಲಿಕತ್ವದ ಕುರಿತು ಆರೋಪ ಪ್ರತ್ಯಾರೋಪ ಕೇಳಿಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT