ಗುರುವಾರ , ಸೆಪ್ಟೆಂಬರ್ 23, 2021
24 °C

ನಿರುಪಯುಕ್ತ ವಸತಿ ಗೃಹ ಪ.ಪಂ.ಗೆ ಹಸ್ತಾಂತರಿಸಿ: ಶಾಸಕ ಎಚ್‌ ಹಾಲಪ್ಪ ಹರತಾಳು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಕೆಪಿಸಿ ಇಲಾಖೆಗೆ ನಿರುಪಯುಕ್ತವಾಗಿರುವ ಕಾರ್ಗಲ್ ಜೋಗ ಲಿಂಗನಮಕ್ಕಿಯ ವಸತಿ ಗೃಹಗಳನ್ನು ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸುವಂತೆ ಶಾಸಕ ಎಚ್‌.ಹಾಲಪ್ಪ ಹರತಾಳು ಸಲಹೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಒಳಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕೆಪಿಸಿ ಅಧಿಕಾರಿಗಳ ಗೈರು ಹಾಜರಿಯ ಬಗ್ಗೆ ಬೇಸರ ವ್ಯಕ್ತಪಡಿಸಿ ಅವರು ಮಾತನಾಡಿದರು.

‘ವಿದ್ಯುತ್ ನಿಗಮ ಕೂಡ ಸರ್ಕಾರದ ಒಂದು ಭಾಗವಾಗಿದೆ. ಅಲ್ಲಿನ ಅಧಿಕಾರಿಗಳು ಸ್ಥಳೀಯ ಆಡಳಿತದ ಮಾಸಿಕ ಸಭೆಗೆ ಅಗೌರವ ತರುವಂತೆ ಗೈರು ಹಾಜರಾಗುವುದನ್ನು ಸಹಿಸಲು ಅಸಾಧ್ಯ. ಕೂಡಲೇ ಸಂಬಂಧಪಟ್ಟ ಇಲಾಖೆಯ ವಿದ್ಯುತ್ ಮತ್ತು ಸಿವಿಲ್ ವಿಭಾಗದ ಮುಖ್ಯ ಎಂಜಿನಿಯರ್‌ಗಳನ್ನು ಸಭೆಗೆ ಕರೆಯಿಸಿ ಎಂದು ಸೂಚನೆ ನೀಡಿ’ ಎಂದು ಹೇಳಿದರು.

‘ಶೀಘ್ರವೇ ಸಾಗರ ಪಟ್ಟಣಕ್ಕೆ ಇಂಧನ ಸಚಿವರು ಬರಲಿದ್ದು, ಅಂದು ಅವರ ಬಳಿ ಕೆಪಿಸಿ ವಸತಿ ಗೃಹಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲಾಗುವುದು. ಪಟ್ಟಣ ಪಂಚಾಯಿತಿಗೆ ಸರ್ಕಾರದಿಂದ ವಿಶೇಷವಾಗಿ ₹ 5 ಕೋಟಿ ಅನುದಾನದ ಪ್ಯಾಕೇಜ್ ನೀಡಲು ಪ್ರಯತ್ನಿಸಲಾಗುವುದು. ಘನ ತ್ಯಾಜ್ಯ ವಿಲೇವಾರಿಯನ್ನು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಅಕ್ಕಪಕ್ಕದ ಗ್ರಾಮ ಪಂಚಾಯಿತಿಗಳಾದ ತಲವಾಟ, ಅರಳಗೋಡು ವ್ಯಾಪ್ತಿಯ ಕಸ ಸಂಗ್ರಹಣೆಯನ್ನು ಇಡುವಾಣಿ ಘನತ್ಯಾಜ್ಯ ಘಟಕದಲ್ಲಿ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಒಡಂಬಡಿಕೆ ಮಾಡಿಕೊಳ್ಳಿ’ ಎಂದು ಶಾಸಕರು ಸೂಚಿಸಿದರು.

‍ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್ ಮಾತನಾಡಿ, ‘ಜೋಗದ ಶಿರೂರು ಕೆರೆಯ ದೋಣಿ ವಿಹಾರ ಕೇಂದ್ರದ ನಿರ್ವಹಣಾ ಟೆಂಡರ್ ಕರೆಯಲಾಗುವುದು. ಜಲಪಾತ ಪ್ರದೇಶದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ರಾಣಿ ಜಲಪಾತದ ಬಳಿ ಇರುವ ಸುಲಭ್‌ ಶೌಚಾಲಯದ ನಿರ್ವಹಣೆಯನ್ನು ಟೆಂಡರ್ ಮೂಲಕ ನೀಡಲಾಗುವುದು. ಜೋಗದ ಬಜಾರ್ ಲೈನ್‌ನಲ್ಲಿ ಅನಧಿಕೃತ ಕೋಳಿ ಮಾಂಸ ಮಾರಾಟ ಮಾಡುತ್ತಿರುವಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು. ಕಾರ್ಗಲ್ ಪ್ಯಾಡೀಫೀಲ್ಡ್‌ನಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲಾಗುವುದು’ ಎಂದು ಅವರು ತಿಳಿಸಿದರು.

ಉಪಾಧ್ಯಕ್ಷ ಪಿ.ಮಂಜುನಾಥ, ಸದಸ್ಯರಾದ ನಾಗರಾಜ ವಾಟೇಮಕ್ಕಿ, ಲಲಿತಾ, ಎಂ.ರಾಜು, ಬಾಲಸುಬ್ರಮಣ್ಯ, ಕೆ.ಸಿ.ಹರೀಶ್ ಗೌಡ, ಲಕ್ಷ್ಮೀರಾಜು, ಜಯಲಕ್ಷ್ಮೀ, ಸುಜಾತಾ, ಮುಖ್ಯಾಧಿಕಾರಿ ಜಗದೀಶ್ ನಾಯ್ಕ, ತಡವಾಗಿ ಸಭೆಗೆ ಬಂದ ಕೆಪಿಸಿ ಮುಖ್ಯ ಎಂಜಿನಿಯರ್ ಜಿ.ಸಿ.ಮಹೇಂದ್ರ, ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ನಾರಾಯಣ ಗಜಕೋಶ್, ಕಂದಾಯ ಅಧಿಕಾರಿ ಸಂಟಯ್ಯ, ಆರೋಗ್ಯ ನಿರೀಕ್ಷಕ ಚಂದ್ರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು