ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಪುನರ್ ಪರಿಶೀಲನೆಗೆ ಸರ್ಕಾರಕ್ಕೆ ಪತ್ರ

ಪಾಲಿಕೆ ಸಭೆಯಲ್ಲಿ ಸದ್ದು ಮಾಡಿದ ಆಸ್ತಿ ತೆರಿಗೆ ಹೆಚ್ಚಳ ವಿಷಯ l ಕಾಂಗ್ರೆಸ್‌, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ
Last Updated 15 ಜುಲೈ 2021, 6:27 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾದಿಂದ ಜನರು ತತ್ತರಿಸಿ ಹೋಗಿದ್ದು, ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬುಧವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸದಸ್ಯರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಆರಂಭದಲ್ಲೇ ಆಸ್ತಿ ತೆರಿಗೆ ಹೆಚ್ಚಳ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರಾದ ಎಚ್.ಸಿ.ಯೋಗೀಶ್, ಬಿ.ಎ.ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ಆರ್.ಸಿ. ನಾಯ್ಕ್ ಮತ್ತು ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ ಅವರು, ‘ಬರಗಾಲದಲ್ಲಿ ಮನೆ ಮಗನಿಗೆ ಹಸಿವು ಜಾಸ್ತಿ ಎನ್ನುವ ಹಾಗೆ ಈಗ ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ಕ್ರಮ ಅವೈಜ್ಞಾನಿಕ’ ಎಂದು ದೂರಿದರು.

ಕಾಂಗ್ರೆಸ್‌, ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ: ಎಸ್‌ಆರ್ ದರದಲ್ಲಿ ತೆರಿಗೆ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ. ಈಗಿರುವುದಕ್ಕಿಂತ ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಅಲ್ಲದೇ ಖಾಲಿ ಜಾಗಕ್ಕೂ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಹೂವು ಗಿಡಗಳನ್ನು ಬೆಳೆಸಿಕೊಳ್ಳಲು, ದನಕರುಗಳನ್ನು ಸಾಕಿಕೊಳ್ಳಲು ಹುಲ್ಲಿನ ಬಣವೆ ಹಾಕಲು ಬಿಟ್ಟಿದ್ದ ಜಾಗಗಳಿಗೆಲ್ಲ ತೆರಿಗೆ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ. ಇದು ಸರಿಯಲ್ಲ, ಈ ಕೂಡಲೇ ಇದನ್ನು ಪುನರ್ ಪರಿಶೀಲಿಸಬೇಕು ಎಂದು ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಸುರೇಖಾ ಮುರಳೀಧರ್, ವಿಶ್ವನಾಥ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ ಮತ್ತು ಮೇಯರ್ ಸುನಿತಾ ಅಣ್ಣಪ್ಪ ಸೇರಿ ಹಲವರು ಪ್ರತಿಕ್ರಿಯೆ ನೀಡಲು ಮುಂದಾದಾಗ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಗಲಾಟೆ, ಗದ್ದಲ: ‘ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಸರ್ಕಾರ ಆಸ್ತಿ ತೆರಿಗೆ ಕಾಯ್ದೆಗೆ ಸಂಬಂಧಿಸಿದಂತೆ ನೀಡಿದ ಮಾರ್ಗಸೂಚಿ ಪ್ರಕಾರ ತೆರಿಗೆ ವಿಧಿಸಲಾಗಿದೆ’ ಎಂದು ಆಯಕ್ತ ಚಿದಾನಂದ್‌ ವಟಾರೆ ತಿಳಿಸುತ್ತಿದ್ದಂತೆ, ವಿರೋಧ ಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದರ ಮಧ್ಯೆಯೇ ಪ್ರಧಾನಿ ಮೋದಿ ವಿರುದ್ಧವೂ ವಿರೋಧ ಪಕ್ಷದವರು ಘೋಷಣೆ ಕೂಗಿದರು. ‘ಮೋದಿ ಎಂದರೆ ಸಾವು’ ಎಂಬ ವಿರೋಧ ಪಕ್ಷದವರ ಘೋಷಣೆಗೆ ಪ್ರತ್ಯುತ್ತರವಾಗಿ ಆಡಳಿತ ಪಕ್ಷದವರು ‘ಮೋದಿ ಎಂದರೆ ವಿಶ್ವನಾಯಕ’ ಎಂದು ಘೋಷಣೆ ಕೂಗಿದರು. ಎರಡೂ ಪಕ್ಷದವರ ಪರ, ವಿರೋಧಗಳು ಪ್ರತಿಧ್ವನಿಸಿ ಸಭೆಯ ದಿಕ್ಕನ್ನೇ ಬದಲಾಯಿಸಿತು.

ಗದ್ದಲ, ಗಲಾಟೆ, ಪ್ರತಿಭಟನೆ, ವಾಗ್ವಾದಗಳ ನಡುವೆ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದ ಆಯುಕ್ತ ಚಿದಾನಂದ್‌ ವಟಾರೆ ಗದ್ದಲಕ್ಕೆ ತೆರೆ ಎಳೆದರು.

ಸಭೆ ನಡಾವಳಿ: ಆಯುಕ್ತರಿಗೆ ಎಚ್ಚರಿಕೆ!
ಸ್ಥಾಯಿ ಸಮಿತಿ ಸಭೆಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಭಾಗವಹಿಸಬೇಕೆ? ಬೇಡವೇ? ಎಂಬ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸದಸ್ಯ ಬಿ.ಎ.ರಮೇಶ್ ಹೆಗ್ಡೆ ಆಯುಕ್ತರನ್ನು ಆಗ್ರಹಿಸಿದರು.

‘ಮುನ್ಸಿಪಾಲಿಟಿ ಕಾಯ್ದೆ 1976ರ ಅನ್ವಯ ಆಡಳಿತ, ಪ್ರತಿಪಕ್ಷದ ನಾಯಕರು ಕೂಡ ಭಾಗವಹಿಸುವಂತಿಲ್ಲ. ಆದರೆ, ಈ ನಿಯಮವನ್ನು ಮೀರಿ ಆಡಳಿತ ಪಕ್ಷದ ಸದಸ್ಯರು ಸ್ಥಾಯಿ ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು, ‘ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನೆಗೆ ಅನುಸಾರವಾಗಿ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರು ವಿಶೇಷ ಆಹ್ವಾನಿತರಾಗಿ ಭಾಗವಹಿಸಬಹುದೇ ಹೊರತು ನಿರ್ಣಯಗಳ ಪರ ಅಥವಾ ವಿರುದ್ಧ ಮತ ಹಾಕುವ ಅಧಿಕಾರ ಇಲ್ಲ’ ಎಂದಾಗ, ‘ತಪ್ಪು ಮಾಹಿತಿ ನೀಡಬೇಡಿ. ಕಾಯ್ದೆಯಲ್ಲೇ ಅವಕಾಶವಿಲ್ಲ ಎಂದ ಮೇಲೆ ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಸಭೆಗೆ ತಪ್ಪು ಮಾಹಿತಿ ನೀಡಿದರೆ ನಿಮ್ಮ ವಿರದ್ಧವೇ ಸರ್ಕಾರಕ್ಕೆ ದೂರು ಸಲ್ಲಿಸಬೇಕಾಗುತ್ತದೆ’ ಎಂದು ರಮೇಶ್‌ ಹೆಗ್ಡೆ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT