ಬುಧವಾರ, ಮಾರ್ಚ್ 29, 2023
31 °C

ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ಕಪ್ಪು ಪಟ್ಟಿಗೆ ಸೇರಿಸಲು ಸದಸ್ಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೆಕೆಂಡ್ ಬಜಾರ್ ಏರಿಯಾದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಅತ್ಯಂತ ಕಳಪೆಯಾಗಿ ಮಾಡಿರುವ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕೆ.ಸಿ. ಹರೀಶ ಗೌಡ ಒತ್ತಾಯಿಸಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಒಳಾಂಗಣದಲ್ಲಿ ಅಧ್ಯಕ್ಷೆ ವಾಸಂತಿ ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ವಿಷಯ ಸೂಚಿಯ ಮೇಲೆ ಅವರು ಮಾತನಾಡಿದರು.

ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ 6 ಬಾರಿ ಗುತ್ತಿಗೆದಾರನಿಗೆ ತಿಳಿವಳಿಕೆ ನೋಟಿಸ್ ನೀಡಲಾಗಿದೆ. ಆದರೆ, ಯಾವುದೇ ಸಮರ್ಪಕ ಉತ್ತರ ದೊರೆತಿಲ್ಲ. ಈ ಬಗ್ಗೆ ಜೂನ್ 17ರಂದು ನಡೆದ ಮಾಸಿಕ ಸಭೆಯಲ್ಲಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಆಗಸ್ಟ್ 9ರಂದು ನಡೆದ ಸಭೆಯಲ್ಲಿ ಈ ವಿಚಾರವನ್ನು ಓದಿ ದಾಖಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅಧ್ಯಕ್ಷರು ಮತ್ತೆ ಇದೇ ವಿಷಯವನ್ನು ಮಾಸಿಕ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿ ಸಂಬಂಧಪಟ್ಟ ಗುತ್ತಿಗೆದಾರನನ್ನು ರಕ್ಷಣೆ ಮಾಡಲು ಹೊರಟಿದ್ದಾರೆ. ಇದೇ ಪ್ರಯತ್ನ ಮುಂದುವರಿದಲ್ಲಿ ಪಟ್ಟಣ ಪಂಚಾಯಿತಿ ಕಚೇರಿಯ ಆವರಣದಲ್ಲಿ ಧರಣಿ ನಡೆಸುವುದು ಅನಿವಾರ್ಯವಾಗಲಿದೆ ಎಂದು ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದರು.

ಕಾಂಗ್ರೆಸ್ ಸದಸ್ಯ ಎಂ. ರಾಜು ಮಾತನಾಡಿ, ‘ಒಮ್ಮೆ ಅಧ್ಯಕ್ಷರು ಸರ್ವಾನುಮತದಿಂದ ದಾಖಲಿಸಿದ ನಿರ್ಣಯಗಳನ್ನು ಪದೇ ಪದೇ ತಿದ್ದುಪಡಿ ಮಾಡಲು ಪುರಸಭಾ ನಿಯಮಗಳ ಅಡಿಯಲ್ಲಿ ಅವಕಾಶವಿಲ್ಲ. ಕಣ್ತಪ್ಪಿನಿಂದ ಆದ ಘಟನೆ ಎಂದು ಅಧ್ಯಕ್ಷರು ಸಮರ್ಥನೆ ಮಾಡಿಕೊಳ್ಳುತ್ತಿರುವ ಕ್ರಮದ ಹಿಂದೆ ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆ’ ಎಂದು ಆರೋಪಿಸಿದರು.

ಉಪಾಧ್ಯಕ್ಷ ಪಿ. ಮಂಜುನಾಥ, ‘ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರನನ್ನು ಯಾವುದೇ ಕಾರಣಕ್ಕೂ ಕಪ್ಪು ಪಟ್ಟಿಗೆ ಸೇರಿಸಬಾರದು. ಈ ರೀತಿ ಕ್ರಮ ಕೈಗೊಂಡಲ್ಲಿ ಗುತ್ತಿಗೆದಾರನ ಕುಟುಂಬದ ಭವಿಷ್ಯವೇನು’ ಎಂದು ಪ್ರಶ್ನಿಸಿದರು.

ಅಂತಿಮವಾಗಿ ಅಧ್ಯಕ್ಷರು ಈ ವಿಚಾರದ ಬಗ್ಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಸಭೆ ಮುಂದುವರಿಯಿತು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಇ–ಆಸ್ತಿ ನಕಲು ಶುಲ್ಕಗಳನ್ನು ಶೇ 30 ಸರಾಸರಿಯಂತೆ ಹೆಚ್ಚಿಸಲು ತೀರ್ಮಾನಿಸಲಾಯಿತು.

ದೀರ್ಘಕಾಲದಿಂದ ಖಾಲಿಯಿದ್ದ ಸ್ಥಾಯಿ ಸಮಿತಿಯನ್ನು ರಚಿಸಲು ಅಧ್ಯಕ್ಷೆ ವಾಸಂತಿ ಮುಂದಾಗಿದ್ದು, ಸದಸ್ಯರಾದ ಉಮೇಶ್ ಕೆಮ್ಮಣ್ಣುಗಾರು, ಸುಜಾತಾ, ಲಕ್ಷ್ಮೀರಾಜು, ಜಯಲಕ್ಷ್ಮೀ, ಲಲಿತಾ ಅವರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಪಿ. ಮಂಜುನಾಥ, ಸದಸ್ಯರಾದ ನಾಗರಾಜ್ ವಾಟೇಮಕ್ಕಿ, ಉಮೇಶ್, ಬಾಲಸುಬ್ರಮಣ್ಯ, ಮುಖ್ಯಾಧಿಕಾರಿ ಜಗದೀಶ್ ನಾಯ್ಕ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು