ಶುಕ್ರವಾರ, ಡಿಸೆಂಬರ್ 3, 2021
27 °C
ಪೊಲೀಸ್ ಸಂಸ್ಮರಣ ದಿನಾಚರಣೆ

ಹುತಾತ್ಮ ಪೊಲೀಸರ ಸ್ಮರಣೆ ಎಲ್ಲರ ಕರ್ತವ್ಯ: ನ್ಯಾಯಾಧೀಶ ಎಸ್.ಎ. ಮುಸ್ತಫಾ ಹುಸೇನ್

‍ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಮಾಜದ ನೆಮ್ಮದಿಗಾಗಿ ಪ್ರಾಣ ತ್ಯಾಗ ಮಾಡಿದ ಪೊಲೀಸರ ಸ್ಮರಣೆ ಎಲ್ಲರ ಕರ್ತವ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್.ಎ.ಮುಸ್ತಫಾ ಹುಸೇನ್ ಹೇಳಿದರು.

ಇಲ್ಲಿನ ಕವಾಯತು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸರಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಅಪರಾಧ ತಡೆ, ಕಾನೂನು ಮತ್ತು ಸುವ್ಯವಸ್ಥೆ, ಶಿಸ್ತುಪಾಲನೆ, ಸಂಚಾರ ಸುರಕ್ಷತೆಯಂತಹ ಜವಾಬ್ದಾರಿಯುತ ಕರ್ತವ್ಯದಲ್ಲಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ ಪೊಲೀಸ್‌ ಸಿಬ್ಬಂದಿ ತ್ಯಾಗ ಸ್ಮರಣೀಯ ಎಂದರು.

ಪೊಲೀಸರ ತ್ಯಾಗ, ಸೇವಾ ಮನೋಭಾವ ಶ್ರೇಷ್ಠವಾದುದು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳೆನ್ನದೇ ಜನರ ಸೇವೆಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜನಸಾಮಾನ್ಯರ ಆಸ್ತಿ ಸುಭದ್ರವಾಗಿರಲು ಕಾರಣ ಪೊಲೀಸರು. ಜನಸಾಮಾನ್ಯರೂ ಪೊಲೀಸರಿಗೆ ಗೌರವಿಸಿ, ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬೇಕು‌ ಎಂದು ಸಲಹೆ ನೀಡಿದರು.

ಪೊಲೀಸರ ಕರ್ತವ್ಯನಿಷ್ಠೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿಯುತ ಮತ್ತು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಪೊಲೀಸರು ಎಂಥ ಕಠಿಣ ಪ್ರಕರಣವನ್ನೂ ಭೇದಿಸುತ್ತಾರೆ. ಸಮಾಜದಲ್ಲಿ ಶಾಂತಿ ನೆಲೆಸಲು ಕಾರಣರಾಗಿರುವ ಪೊಲೀಸರನ್ನು ರಾಷ್ಟ್ರಲಾಂಛನದಲ್ಲಿರುವ ಕಣ್ಣಿಗೆ ಕಾಣಿಸದ ನಾಲ್ಕನೇ ಸಿಂಹಕ್ಕೆ ಹೋಲಿಸಲಾಗುತ್ತದೆ ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ‘ಕರ್ತವ್ಯನಿರತ ಪೊಲೀಸರ ಮರಣಾ ನಂತರ ಅವರ ಕುಟುಂಬದ ಸ್ಥಿತಿಗತಿ, ತೊಳಲಾಟ ಅಸಹನೀಯವಾದುದು. ಸಾರ್ವಜನಿಕ ಶಾಂತಿ ಮತ್ತು ನೆಮ್ಮದಿಗಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಎಲ್ಲರೂ ಋಣಿಯಾಗಿರಬೇಕು’ ಎಂದರು.

‘ಭಯೋತ್ಪಾದನೆ, ಸಮಾಜ ವಿದ್ರೋಹಿಗಳ ದುಷ್ಕೃತ್ಯಗಳು ದೇಶದೆಲ್ಲೆಡೆ ಕಂಡುಬರುತ್ತಿವೆ. ಅದರ ನಿಯಂತ್ರಣಕ್ಕಾಗಿ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ-ಸಿಬ್ಬಂದಿಯನ್ನು ಗೌರವಿಸುವುದು, ಬಲಿದಾನ ಮಾಡಿದ ರಕ್ಷಣಾ ಸಿಬ್ಬಂದಿಯನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’  ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ಸ್ವಾಗತಿಸಿ, ಹುತಾತ್ಮ ಪೊಲೀಸರ ನಾಮವಾಚನ ಮಾಡಿದರು. ಅದಕ್ಕೂ ಮುನ್ನ ಹುತಾತ್ಮ ಪೊಲೀಸ್ ಪುತ್ಥಳಿಗೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಸಮವಸ್ತ್ರಧಾರಿ ಸಶಸ್ತ್ರ ಪೊಲೀಸರು ಮೂರು ಬಾರಿ ಕುಶಾಲ ತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಚ್‌.ಟಿ.ಶೇಖರ್, ಇಲಾಖೆಯ ವಿವಿಧ ವಿಭಾಗಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ನಿವೃತ್ತ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು