ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹17 ಲಕ್ಷ ಕೋಟಿ ಮನ್ನಾ ಆದಾಗ ಸೊಲ್ಲೆತ್ತಲಿಲ್ಲವೇಕೆ? - ಮಧು ಬಂಗಾರಪ್ಪ

ಕಾಂಗ್ರೆಸ್‌ ಗ್ಯಾರಂಟಿ ಟೀಕಿಸುವವರಿಗೆ ಸಚಿವ ಮಧು ಬಂಗಾರಪ್ಪ ತರಾಟೆ
Published 3 ಜೂನ್ 2023, 14:35 IST
Last Updated 3 ಜೂನ್ 2023, 14:35 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬಡವರಿಗೆ ಉಚಿತ ಅಕ್ಕಿ ಕೊಟ್ಟರೆ ಆರ್ಥಿಕ ಹೊರೆ ಎಮದು ಮಾತನಾಡುವ ಬಿಜೆಪಿ ನಾಯಕರು, ಪ್ರಧಾನಿ ನರೇಂದ್ರ ಮೋದಿ ದೇಶದ ಸಾಹುಕಾರರ (ಉದ್ಯಮಿಗಳ) ₹ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಾಗ ಸೊಲ್ಲೆತ್ತಲಿಲ್ಲವೇಕೆ ?’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

ಇಲ್ಲಿನ ಲಗ್ನ (ಲಗನ್) ಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಶ್ರೀಮಂತರ ಸಾಲ ಮನ್ನಾ ಹಣದಲ್ಲಿ ದೇಶದ ಪ್ರತಿ ರಾಜ್ಯಕ್ಕೂ ₹ 50 ಸಾವಿರ ಕೋಟಿ ಕೊಟ್ಟು ಬಡವರಿಗೆ ನೆರವಾಗಬಹುದಿತ್ತು’ ಎಂದು ಹೇಳಿದರು.

ಈಶ್ವರ ಖಂಡ್ರೆ ಅವರನ್ನು ಶಿವಮೊಗ್ಗಕ್ಕೆ ಕರೆಯಿಸಿ ಸಭೆ ಮಾಡಿ ಶರಾವತಿ ಸಂತ್ರಸ್ತರು ಹಾಗೂ ಬಗರ್‌ಹುಕುಂ ಸಾಗುವಳಿದಾರರಿಗೆ ನೆರವಾಗಲು ಕಾರ್ಯಯೋಜನೆ ರೂಪಿಸಲಾಗುವುದು. ಬಗರ್‌ಹುಕುಂ ಸಾಗುವಳಿದಾರರಲ್ಲಿ ಅರ್ಹರಿಗೆ ಕಾನೂನು ತಿದ್ದುಪಡಿ ಮಾಡಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಮಧು ಭರವಸೆ ನೀಡಿದರು.

‘ಜಿಲ್ಲೆಯಲ್ಲಿ ಮುಂಬರುವ ಎಲ್ಲಾ ಚುನಾವಣೆಗಳ ಜವಾಬ್ದಾರಿಯನ್ನು ನಾನು ವಹಿಸಿಕೊಂಡು ಕಾಂಗ್ರೆಸ್ ಮತ್ತೆ ವಿಜೃಂಭಿಸುವಂತೆ ಮಾಡುತ್ತೇನೆ. ಸಚಿವನಾಗಿ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ’ ಎಂದರು.

‘ಮುಂಬರುವ ಲೋಕಸಭಾ ಚುನಾವಣೆಗೆ ನಾವು ಸಿದ್ಧವಾಗಬೇಕಾಗಿದೆ. ಸೋತವರಿಗೆ ಪಕ್ಷ ಬೆನ್ನೆಲುಬಾಗಿ ನಿಲ್ಲುತ್ತದೆ. ಬಿಜೆಪಿಯವರು ಏನನ್ನೂ ಮಾಡಿಲ್ಲ. ಅನ್ನಭಾಗ್ಯ, ಆಶ್ರಯ, ಭೂಹಕ್ಕು ನೀಡಿದ್ದು ಎಲ್ಲವೂ ಕಾಂಗ್ರೆಸ್ ಪಕ್ಷ. ಈ ವರ್ಷಪೂರ್ತಿ ಚುನಾವಣೆಗಳಿವೆ. ಮಲೆನಾಡು ಹಕ್ಕು ಹೋರಾಟ ಸಮಿತಿ ಮೂಲಕ ಹಕ್ಕುಪತ್ರಕ್ಕಾಗಿ ಬೇಡಿಕೆ ಇಟ್ಟಿದ್ದೆವು. ಈಗ ನಮ್ಮದೇ ಸರ್ಕಾರ ಇದೆ. ಅರಣ್ಯ ಮಂತ್ರಿಯ ಜೊತೆಗೆ ಮಾತುಕತೆ ನಡೆಸಿ ಅಗತ್ಯವಿದ್ದಲ್ಲಿ ಕಾನೂನು ತಿದ್ದುಪಡಿ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಕೇಂದ್ರ ಸರ್ಕಾರ ಕೂಡ ಸಹಕರಿಸುವ ವಿಶ್ವಾಸವಿದೆ’ ಎಂದರು.

ಸನ್ಮಾನ ಸ್ವೀಕರಿಸಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ‘ಮಧು ಉಸ್ತುವಾರಿ ಸಚಿವರಾಗಿರುವುದು ಹೆಮ್ಮೆಯ ವಿಷಯ. ಸಮಸ್ಯೆಗಳನ್ನು ನಿಭಾಯಿಸಲು ಅವರು ಸಮರ್ಥರಿದ್ದಾರೆ. ಆದರೆ, ಜಿಲ್ಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಅವು ಕೂಡ ಸವಾಲಾಗಿವೆ’ ಎಂದರು.

ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳು ಬಿಜೆಪಿಯ ವಕ್ತಾರರಂತೆ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಸೇರಿ ಅನೇಕ ವಿಷಯಗಳಲ್ಲಿ ತೊಡಕಾಗಿದ್ದರು. ಇವರನ್ನೆಲ್ಲ ವರ್ಗಾವಣೆ ಮಾಡಬೇಕು ಎಂದು ಹೇಳಿದರು.

‘ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ದೂರ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಮುಂದೆ ಬರಲಿರುವ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಆರ್.ಎಂ. ಮಂಜುನಾಥ ಗೌಡ, ಎಚ್.ಸಿ. ಯೋಗೇಶ್, ರೇಖಾ ರಂಗನಾಥ್, ಜಿ.ಡಿ. ಮಂಜುನಾಥ್, ಎಸ್.ಕೆ. ಮರಿಯಪ್ಪ, ವೇದಾ ವಿಜಯಕುಮಾರ್, ಅನಿತಾಕುಮಾರಿ, ಬಲ್ಕಿಷ್ ಭಾನು, ಶ್ರೀನಿವಾಸ ಕರಿಯಣ್ಣ, ವಿಜಯ್, ಮಧು, ಶಂಕರಘಟ್ಟ ರಮೇಶ್, ಎಸ್.ಪಿ. ಶೇಷಾದ್ರಿ, ದೇವೇಂದ್ರಪ್ಪ, ಎಚ್.ಪಿ. ಗಿರೀಶ್. ಸಿದ್ದಪ್ಪ, ವಿಜಯಲಕ್ಷ್ಮೀ ಪಾಟೀಲ್ ಇದ್ದರು.

ಶಿವಮೊಗ್ಗಕ್ಕೆ ಶನಿವಾರ ಬಂದ ಸಚಿವ ಮಧು ಬಂಗಾರಪ್ಪ ಅವರನ್ನು ಬೆಂಬಲಿಗರು ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸಿದ ಪರಿ
ಶಿವಮೊಗ್ಗಕ್ಕೆ ಶನಿವಾರ ಬಂದ ಸಚಿವ ಮಧು ಬಂಗಾರಪ್ಪ ಅವರನ್ನು ಬೆಂಬಲಿಗರು ಬೃಹತ್ ಹಾರ ಹಾಕುವ ಮೂಲಕ ಸ್ವಾಗತಿಸಿದ ಪರಿ

* ಅಭಿನಂದನೆ ವೇಳೆ ಅಪ್ಪ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಮಧು ಸ್ಮರಿಸಿ ಭಾವುಕರಾದರು * ಮೆರವಣಿಗೆ ವೇಳೆ ಬಿಸಿಲಿನ್ನೂ ಲೆಕ್ಕಿಸದೇ ಮಧು ಸನ್ಮಾನಕ್ಕೆ ಬೆಂಬಲಿಗರು ಮುಗಿಬಿದ್ದರು

* ಶಿಕ್ಷಕ ಹುದ್ದೆಯ ಆಕಾಂಕ್ಷಿಗಳ ಅಳಲು ಆಲಿಸಿದ ಮಧು ಅವರಿಂದ ಅಹವಾಲು ಸ್ವೀಕರಿಸಿದರು

ಮಧು ಮುಖ್ಯಮಂತ್ರಿ ಆಗಲಿದ್ದಾರೆ: ಕಿಮ್ಮನೆ

ಭವಿಷ್ಯ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮಧು ಬಂಗಾರಪ್ಪ ಶಿಕ್ಷಣ ಸಚಿವರಾಗಿರುವುದು ಅತ್ಯಂತ ಸಂತೋಷದ ವಿಷಯ. ಈ ಹುದ್ದೆ ಅವರು ಸದ್ಬಳಕೆ ಮಾಡಿಕೊಳ್ಳಬೇಕು. ಮುಂದೊಂದು ದಿನ ತಂದೆಯಂತೆಯೇ ಮಧು ಬಂಗಾರಪ್ಪ ಕೂಡ ಮುಖ್ಯಮಂತ್ರಿ ಆಗಬಹುದು ಎಂದು ಭವಿಷ್ಯ ನುಡಿದರು. ಸಣ್ಣ ಪುಟ್ಟ ಸಮುದಾಯದವರನ್ನು ಗುರುತಿಸಿ ಅವರಿಗೆ ಅವಕಾಶ ನೀಡಬೇಕು. ತುಳಿತಕ್ಕೆ ಒಳಗಾದವರ ಬಗ್ಗೆ ಅನುಕಂಪವಿರಲಿ. ಮುಖ್ಯವಾಗಿ ರಾಹುಲ್‌ಗಾಂಧಿ ಅವರ ರೀತಿ ಕಾಂಗ್ರೆಸ್ ಸಿದ್ಧಾಂತವನ್ನು ಪ್ರತಿಪಾದಿಸಬೇಕು. ಅವರು ನನಗಿಂತ ಚಿಕ್ಕವರು. ಶಿಕ್ಷಣ ಸಚಿವನಾಗಿನನಗೆ ಗೊತ್ತಿರುವುದನ್ನು ನಾನು ಕೂಡ ಅವರಿಗೆ ತಿಳಿಸುತ್ತೇನೆ ಎಂದರು. 

ಮಧುಗೆ ಬೆಂಬಲಿಗರಿಂದ ಭವ್ಯ ಸ್ವಾಗತ..

ಶಿಕ್ಷಣ ಸಚಿವರಾಗಿ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬಂದ ಮಧು ಬಂಗಾರಪ್ಪ ಅವರಿಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು. ನಗರದ ಎಂಆರ್‌ಎಸ್ ವೃತ್ತದಲ್ಲಿ ಮಧು ಅವರನ್ನು ಸ್ವಾಗತಿಸಿದ ಕಾರ್ಯಕರ್ತರು ಘೋಷಣೆ ಕೂಗಿ ಪಟಾಕಿ ಸಿಡಿಸಿ ಅನಾನಸ್ ಹಣ್ಣಿನ ಬೃಹತ್ ಹಾರ ಹಾಕಿ ಅದ್ಧೂರಿಯಾಗಿ ಅಭಿನಂದಿಸಿದರು. ನಂತರ ಎಂಆರ್‌ಎಸ್ ವೃತ್ತದಿಂದ ವಾಹನ ಹಾಗೂ ಬೈಕ್ ರ‍್ಯಾಲಿ ಮೂಲಕ ಮೆರವಣಿಗೆಯಲ್ಲಿ ಲಗಾನ್ ಮಂದಿರದವರೆಗೆ ಕರೆತರಲಾಯಿತು. ಈ ನಡುವೆ ವಿದ್ಯಾನಗರ ಹೊಳೆ ಬಸ್‌ಸ್ಟಾಪ್ ಹುಲಿಕೆರೆ ಶಾಂತಪ್ಪ ವೃತ್ತ ಎಎ ವೃತ್ತ ಸಾಗರ ರಸ್ತೆಗಳಲ್ಲಿ ಮಧು ಬಂಗಾರಪ್ಪ ಅವರನ್ನು ಅವರ ಅಭಿಮಾನಿಗಳು ಹಾರ ಹಾಕಿ ಅಭಿನಂದಿಸಿದರು.  ಲಗಾನ್ ಕಲ್ಯಾಣ ಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪಗೆ ಹಾರ ಹಾಕಲು ನೂಕು ನುಗ್ಗಲು ಉಂಟಾಯಿತು. ಆಯೋಜಕರು ಪದೇ ಪದೇ ಮೈಕ್‌ನಲ್ಲಿ ಹೇಳುತ್ತಿದ್ದರೂ ಕೂಡ ಅಭಿಮಾನಿಗಳು ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT