ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗ ಅಭಿವೃದ್ಧಿಗೆ ಸಿಎಂ ನೇತೃತ್ವದಲ್ಲಿ ಸಭೆ: ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್

ಪ್ರಗತಿ ಪರಿಶೀಲನಾ ಸಭೆ
Last Updated 24 ಸೆಪ್ಟೆಂಬರ್ 2018, 14:23 IST
ಅಕ್ಷರ ಗಾತ್ರ

ಶಿವಮೊಗ್ಗ: ಜೋಗ ಸರ್ವಋತು ಯೋಜನೆ ಹಾಗೂ ನನೆಗುದಿಗೆ ಬಿದ್ದಿರುವ ಸೋಗಾನೆ ವಿಮಾನನಿಲ್ದಾಣ ಕಾಮಗಾರಿ ಕುರಿತು ಚರ್ಚಿಸಲು ಅಕ್ಟೋಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ಭರವಸೆ ನೀಡಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್ಚು ಆಸಕ್ತಿಹೊಂದಿದ್ದಾರೆ. ಸಾಕಷ್ಟು ಅನುದಾನ ನೀಡುವ ಭರವಸೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜೋಗದ ಅಭಿವೃದ್ಧಿಗೆ ದುಬೈ ಮೂಲದ ಬಿ.ಆರ್. ಶೆಟ್ಟಿ ಅವರು ₹ 1 ಸಾವಿರ ಕೋಟಿ ವಿನಿಯೋಗಿಸಲು ಮುಂದೆ ಬಂದಿದ್ದರು. ಯೋಜನೆ ಅನುಷ್ಠಾನಕ್ಕೆ 200 ಎಕರೆ ಸ್ಥಳ ಕೇಳಿದ್ದಾರೆ. ಅಷ್ಟೊಂದು ಸ್ಥಳ ಅಲ್ಲಿ ಸಿಗುವುದು ಕಷ್ಟ.ಇರುವ ಜಾಗದಲ್ಲಿ ಕೆ‍ಪಿಸಿ ಪೈಪ್‌ಗಳು, ನಾಲೆಗಳೇ ಇವೆ. ಇದುವರೆಗೂ ಯಾವ ಕೆಲಸವೂ ಆಗಿಲ್ಲ. ಆಸಕ್ತಿಯೂ ಇಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ದೂರಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕೆಂದರೆ ಮೊದಲುವಿಮಾನನಿಲ್ದಾಣದ ಅಗತ್ಯವಿದೆ. ಬಿ.ಆರ್. ಶೆಟ್ಟಿ ಅವರೂ ಅದೇ ಮಾತು ಹೇಳಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು, ಟೆಂಡರ್ ಕಾಮಗಾರಿ ಪ್ರಕ್ರಿಯೆಯೂ ಮುಗಿದಿತ್ತು. ನಂತರ 5 ವರ್ಷ ನನೆಗುದಿಗೆ ಬಿದ್ದಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಗಮನ ಸೆಳೆದರು.

ಸೊರಬ ತಾಲ್ಲೂಕು ಗುಡವಿ ಪಕ್ಷಿಧಾಮ, ಮಂಡಗದ್ದೆ ಪಕ್ಷಿಧಾಮಗಳಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಅಲ್ಲಿಗೆ ದೇಶ, ವಿದೇಶಗಳಿಂದ ಪಕ್ಷಿಗಳು ಬರುತ್ತವೆ. ಪಕ್ಷಿಧಾಮಗಳು, ವನ್ಯಜೀವಿಧಾಮಗಳು, ಪರಿಸರ ಪ್ರವಾಸೋದ್ಯಮದಲ್ಲಿ ಪ್ರಮುಖವಾಗಿ ಪರಿಗಣಿಸಬೇಕು ಎಂದು ಶಾಸಕ ಕುಮಾರ್ ಬಂಗಾರಪ್ಪ, ಆರಗ ಜ್ಞಾನೇಂದ್ರಅವರ ಕೋರಿಕೆ ಮಾನ್ಯ ಮಾಡಿದ ಸಚಿವರು,ಗುಡವಿ ಪಕ್ಷಿಧಾಮದ ಅಭಿವೃದ್ಧಿಗೆ ಈಗ ಇರುವ ₹ 99 ಕೋಟಿಯ ಜತೆಗೆ ಹೆಚ್ಚುವರಿ ₹ 30 ಲಕ್ಷ ನೀಡುತ್ತೇವೆ. ಮಂಡಗದ್ದೆ ಅಭಿವೃದ್ಧಿಗೂ ಕ್ರಮ ಕೈಗೊಳ್ಳುತ್ತೇವೆ ಎಂದರು.

ರಾಮಚಂದ್ರಪುರ ಮಠದ ಯಾತ್ರಿ ನಿವಾಸ ನಿರ್ಮಾಣದ ಬಾಕಿ ಹಣ ₹ 62 ಲಕ್ಷ ಬಿಡುಗಡೆ ಮಾಡಬೇಕು. ಮುಂದುವರಿದ ಕಾಮಗಾರಿಗೆ ಅಗತ್ಯವಾದ 1.54 ಕೋಟಿ ಬಿಡುಗಡೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಗಮನ ಸೆಳೆದರು. ಸಹಕಾರ ನೀಡುವಂತೆ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಈಶ್ವರಪ್ಪ ಕೋರಿದರು.

ಮಠದ ನಿರ್ವಹಣೆಯಲ್ಲಿ ಇರುವ ಯತ್ರಿ ನಿವಾಸಕ್ಕೆ ಈಗಾಗಲೇ ಸರ್ಕಾರ ₹ 5 ಕೋಟಿ ನೀಡಿದೆ. ನಿರ್ವಹಣೆ ಅವರೇಮಾಡುವ ಕಾರಣ ಉಳಿದ ಹಣ ಮಠದಿಂದಲೇ ಭರಿಸಲಿ ಎಂದು ಸಚಿವರು ಸಲಹೆ ನೀಡಿದರು.

ತುಂಗಭದ್ರಾ ನದಿಗಳ ಸಂಗಮ ಕೂಡಲಿ ಅಭಿವೃದ್ಧಿ, ಪಿಳ್ಳಗೆರೆಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಿ,ಕೊಡಚಾದ್ರಿ ಪ್ರವಾಸಿ ತಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಸಿ ಮಾರ್ಗನಕ್ಷೆ ಸಿದ್ಧಪಡಿಸಿ: ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.ಈ ಎಲ್ಲಾ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಬೇಕಿದೆ. ಕನಿಷ್ಠ ಮೂರು ದಿನ ಜಿಲ್ಲೆಯಲ್ಲಿ ನೋಡಬಹುದಾದ ಪ್ರವಾಸಿ ತಾಣಗಳ ಮಾರ್ಗ ನಕ್ಷೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು, ಶಾಸಕ ಕೆ.ಬಿ. ಅಶೋಕ ನಾಯ್ಕ, ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ಜಿಲ್ಲಾ ಪಂಚಾಯಿತಿ ಸಿಇಒ ಶಿವರಾಮೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT