ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಅಕ್ರಮ ಕಟ್ಟಡಗಳು ಶೀಘ್ರ ಸಕ್ರಮ

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾಹಿತಿ
Last Updated 2 ಜೂನ್ 2020, 10:23 IST
ಅಕ್ಷರ ಗಾತ್ರ

ಶಿವಮೊಗ್ಗ:ರಾಜ್ಯದ ಎಲ್ಲ ನಗರ ಪಾಲಿಕೆ ವ್ಯಾಪ್ತಿಯ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ. ಸ್ಪಷ್ಟ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.ಸಂಪುಟದ ಅನುಮೋದನೆ ನಂತರ ಜಾರಿಯಾಗಲಿದೆ.

ಅಕ್ರಮ ನಿರ್ಮಾಣಗಳ ಪಟ್ಟಿ ಸಿದ್ಧಪಡಿಸುವುದಕ್ಕಾಗಿಸಮೀಕ್ಷೆಕಾರ್ಯ ಕೈಗೊಳ್ಳಲುಸೂಚಿಸಲಾಗಿದೆ.ನಿಗದಿತ ಸಮಯದ ಒಳಗೆ ಸಕ್ರಮೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶಿವಮೊಗ್ಗವನ್ನು ಮಾದರಿ ನಗರವಾಗಿ ಅಭಿವೃದ್ಧಿಗೊಳಿಸಲು ಕ್ರಮಕೈಗೊಳ್ಳಲಾಗಿದೆ. ನಗರದಲ್ಲಿರುವ ಎಲ್ಲಾ ಬೀದಿ ದೀಪಗಳನ್ನೂಬದಲಾಯಿಸಿ ಎಲ್‍ಇಡಿ ದೀಪ ಅಳವಡಿಸಲಾಗುವುದು. ಪ್ರಥಮ ಹಂತದಲ್ಲಿ 22 ಸಾವಿರ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಪಿಪಿಪಿ ಮಾದರಿಯ ಈ ಯೋಜನೆಯಿಂದಾಗಿ ವಿದ್ಯುತ್ ಗಣನೀಯ ಪ್ರಮಾಣದಲ್ಲಿ ಉಳಿತಾಯವಾಗಲಿದೆ.7 ವರ್ಷಗಳ ಉಚಿತ ನಿರ್ವಹಣೆ ಇರಲಿದೆ ಎಂದರು.

ವಾಜಪೇಯಿ ಬಡಾವಣೆ ಸಮಸ್ಯೆ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಾಜಪೇಯಿ ಬಡಾವಣೆ ಸಮಸ್ಯೆಗೆ ಮುಕ್ತಿ ದೊರಕಿಸಲಾಗುವುದು. ಅಡ್ವಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.ಪ್ರಕರಣ ಹಿಂತೆಗೆದುಕೊಳ್ಳಲು ಮನವಿ ಮಾಡಲಾಗಿದೆ ಎಂದರು.

ಜನರ ಸಹಭಾಗಿತ್ವ ಅಗತ್ಯ

ಜನರ ಸಹಭಾಗಿತ್ವ ಇದ್ದರೆ ಯಾವುದೇ ಕಾಮಗಾರಿ ಯಶಸ್ವಿಯಾಗಲು ಸಾಧ್ಯ. ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಸುಂದರವಾದ ಉದ್ಯಾನ ನಿರ್ಮಿಸಲಾಗುತ್ತಿದೆ.ಸ್ಥಳೀಯ ನಿವಾಸಿಗಳು ಸಂಘ ರಚಿಸಿ ಅವುಗಳ ಮೇಲುಸ್ತುವಾರಿ ನೋಡಿಕೊಳ್ಳಬೇಕು. ರಾಜೇಂದ್ರ ನಗರದಲ್ಲಿ ನೀರಿನ ಕಾಲುವೆಗೆ ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಸ್ಥಳೀಯರೇ ಕ್ರಮ ಕೈಗೊಳ್ಳಬೇಕು. ಮನೆಗಳ ತ್ಯಾಜ್ಯ ನೀರು ನೇರವಾಗಿ ಕಾಲುವೆ ಸೇರುವಂತೆ ಕ್ರಮಕೈಗೊಳ್ಳಬೇಕು.ಮಳೆಗಾಲದಲ್ಲಿ ಎಲ್ಲಿಯೂ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ರಾಜಕಾಲುವೆ ಒತ್ತುವರಿಯಾಗಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಬೇಕುಎಂದು ತಾಕೀತು ಮಾಡಿದರು.

ಪತ್ರಿಕಾಗೋಷ್ಠಿಗೂ ಮೊದಲುಶಿವಮೊಗ್ಗ ನಗರದ ಬಸ್‍ನಿಲ್ದಾಣದಿಂದ ಆಲ್ಕೊಳವೃತ್ತದವರೆಗೆ ನಡೆಯುತ್ತಿರುವ ಮಾದರಿ ರಸ್ತೆ ಕಾಮಗಾರಿ, ವಿನೋಬನಗರದ ಪಾದಚಾರಿ ರಸ್ತೆ ಕಾಮಗಾರಿ, ಪುರಲೆ ಒಳಚರಂಡಿ ಕಾಮಗಾರಿ, ಲಕ್ಷ್ಮೀಚಿತ್ರಮಂದಿರದ ಬಳಿ ಅಭಿವೃದ್ಧಿ ಕಾಮಗಾರಿ, ರಾಜೇಂದ್ರ ನಗರದಲ್ಲಿ ನಡೆಯುತ್ತಿರುವ ಉದ್ಯಾನ, ಒಳಾಂಗಣ ಕ್ರೀಡಾಂಗಣ ಸಮುಚ್ಛಯ, ಜಿಲ್ಲಾ ಪಂಚಾಯಿತಿಮುಂಭಾಗ ನೀರಿನ ಟ್ಯಾಂಕ್ ನಿರ್ಮಾಣ, ಬೊಮ್ಮನಕಟ್ಟೆ ಕೆರೆ ಅಭಿವೃದ್ಧಿ, ಆದಿಚುಂಚನಗಿರಿ ಬಳಿ ಸಮುಚ್ಛಯ ನಿರ್ಮಾಣ ಕಾಮಗಾರಿಗಳನ್ನು ವೀಕ್ಷಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮೇಯರ್ ಸುವರ್ಣಾ ಶಂಕರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT