ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು, ನಾಳೆ ಅಣಕು ಪರೀಕ್ಷೆ

ಜುಲೈ19– 22ರ ಎಸ್ಸೆಸ್ಸೆಲ್ಸಿ ಪರೀಕ್ಷೆ, ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
Last Updated 14 ಜುಲೈ 2021, 5:48 IST
ಅಕ್ಷರ ಗಾತ್ರ

ಶಿವಮೊಗ್ಗ: ಕೊರೊನಾ ಕಾರಣ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಜುಲೈ 19 ಮತ್ತು 22ರಂದು ನಡೆಯಲಿದ್ದು, ಜುಲೈ 14 ಮತ್ತು 15ರಂದು ಅಣಕು ಪರೀಕ್ಷೆ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ಎಂ.ರಮೇಶ್‌ ತಿಳಿಸಿದರು.

ಇಲ್ಲಿನ ಜಿಲ್ಲಾಡಳಿತದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೊರೊನಾ ಕಾರಣದಿಂದ ಪರೀಕ್ಷೆಯ ಸ್ವರೂಪವೇ ಬದಲಾಗಿದ್ದು, ಈ ವರ್ಷ ಬಹು ಆಯ್ಕೆ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಖ್ಯ ಪರೀಕ್ಷೆಗೂ ಮುನ್ನ ಅಣಕು ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ ಕಡ್ಡಾಯವಲ್ಲ. ಸ್ವಯಂ ಆಸಕ್ತಿಯಿಂದ ಪರೀಕ್ಷೆ ಬರೆಯಲು ಮುಂದೆ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಬರೆಯಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಎಸ್‍ಒಪಿ ಪ್ರಕಾರ ಮಾಹಿತಿ ನೀಡಿದ್ದು, ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 150 ಪರೀಕ್ಷಾ ಕೇಂದ್ರಗಳಲ್ಲಿ 24,771 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 61 ಮಾರ್ಗಾಧಿಕಾರಿಗಳು, 150 ಸ್ಥಾನಿಕ ಜಾಗೃತದಳ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿರಬೇಕು. ಪರೀಕ್ಷೆ ವೇಳೆ ಪಾಸಿಟಿವ್‌ ಬಂದರೆ ಅಂತಹವರ ಬದಲಿಗೆ ಬೇರೆಯವರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗುವುದು. ಪರೀಕ್ಷಾ ಕಾರ್ಯಕ್ಕೆ 3,967 ಸಿಬ್ಬಂದಿಯನ್ನು ನಿಯೋಜಿಸಿದ್ದು, ಅವರೆಲ್ಲರೂ ಪ್ರಥಮ ಡೋಸ್ ಲಸಿಕೆ ಪಡೆದಿದ್ದು, ಈ ಪೈಕಿ 746 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌.ವೈಶಾಲಿ ಮಾತನಾಡಿ, ‘ಪರೀಕ್ಷಾ ಮಂಡಳಿಯಿಂದ ನೀಡಲಾದ ಎಸ್‌ಒಪಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್) ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ, ವಿಶೇಷ ಕೊಠಡಿಗಳು, ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಪ್ರವೇಶದಲ್ಲೇ ಆರೋಗ್ಯ ತಪಾಸಣಾ ಕೌಂಟರ್ ಸ್ಥಾಪಿಸಲಾಗುವುದು. ಅಂದು ಬೆಳಿಗ್ಗೆ 8.30ರಿಂದ ವೈದ್ಯಕೀಯ, ಆಶಾ ಕಾರ್ಯಕರ್ತೆಯರು ತಪಾಸಣೆ ನಡೆಸಲಿದ್ದಾರೆ ಎಂದರು.

ಆರು ಅಡಿ ಅಂತರ ಕಡ್ಡಾಯ: ಪರೀಕ್ಷಾ ಕೊಠಡಿಗಳಲ್ಲಿ ಆರು ಅಡಿ ಅಥವಾ 2 ಮೀಟರ್ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯಂತೆ ಒಂದು ಕೊಠಡಿಯಲ್ಲಿ 12 ಮಕ್ಕಳು ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಾಲ್ಲೂಕು
ಕೇಂದ್ರಕ್ಕೆ ಹೋಗದಂತೆ ಸ್ಥಳೀಯವಾಗೇ ಪರೀಕ್ಷಾ ಕೇಂದ್ರ ರಚಿಸಲು ಸೂಚಿಸಲಾಗಿದೆ.

ವಿಶೇಷ ಮತ್ತು ಕಾಯ್ದಿರಿಸಿದ ಕೇಂದ್ರ: ಕೆಮ್ಮು, ನೆಗಡಿ, ಜ್ವರ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಪ್ರತಿ ಕೇಂದ್ರದಲ್ಲಿ ಎರಡು ವಿಶೇಷ ಕೊಠಡಿಗಳನ್ನು ಕಾಯ್ದಿರಿಸಲಾಗುವುದು. ತಾಲ್ಲೂಕು ಭಾಗದಲ್ಲಿ ಎರಡು ಕಾಯ್ದಿರಿಸಿದ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಒಂದು ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಆರೋಗ್ಯಾ ಇಲಾಖೆ ಅಧಿಕಾರಿಗಳಿಗೆ ಎನ್‌.ಎಂ.ರಮೇಶ್‌ ಸೂಚನೆ ನೀಡಿದರು.

ಸಭೆಯಲ್ಲಿ ಡಯಟ್ ಕಾಲೇಜಿನ ಪ್ರಾಂಶುಪಾಲ ಬಸವರಾಜಪ್ಪ, ಜಿಲ್ಲಾ ಖಜಾನಾಧಿಕಾರಿ ಎಚ್.ಎಸ್.ಸಾವಿತ್ರಿ, ಜಿಲ್ಲಾ ಶಿಕ್ಷಣಾಧಿಕಾರಿ ಎಚ್.ಆರ್.ಕೃಷ್ಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT