ಶಿವಮೊಗ್ಗ: ‘ಭಾರತದಂತಹ ಹಿಂದೂ ರಾಷ್ಟ್ರ ವಸುದೈವ ಕುಟುಂಬಕಂ ಆಶಯದಂತೆ ಎಲ್ಲರ ಒಳಿತನ್ನು ಯೋಚಿಸುತ್ತದೆ. ದೇಶದ ಪುರುಷಾರ್ಥ ವಿಶ್ವ ಕಲ್ಯಾಣ ದೃಷ್ಟಿಕೋನದಲ್ಲಿಯೇ ಅಡಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ ಭಾಗವತ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸಂಸ್ಕೃತ ಗ್ರಾಮ ಮತ್ತೂರಿಗೆ ಶುಕ್ರವಾರ ಭೇಟಿ ನೀಡಿದ್ದ ಅವರು, ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ನಡೆದ ಗಣೇಶ, ತಾರಕರಾಮ ಹಾಗೂ ಮೃತ್ಯುಂಜಯ ಯಾಗದಲ್ಲಿ ಪಾಲ್ಗೊಂಡು ಮಾತನಾಡಿದರು.
‘ದೇಶದ ಅಥವಾ ವಿಶ್ವದ ಉದ್ಧಾರ ಧರ್ಮವಿಲ್ಲದೇ ಆಗದು. ಭಾರತದ ಪುರುಷಾರ್ಥಕ್ಕಾಗಿ ಧರ್ಮದ ಜಾಗೃತಿ ಆಗಬೇಕಿದೆ. ಧರ್ಮದ ಜಾಗೃತಿ ಬರೀ ಭಾಷಣಗಳಿಂದ ಆಗಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಕೆಲಸ ಮಾಡಬೇಕಿದೆ’ ಎಂದರು.
‘ಸತ್ಯ, ದಯೆ, ದಾನ ಮತ್ತು ಯಜ್ಞ ಇವೆಲ್ಲ ಏನು ಹೇಳಿವೆಯೋ ಅವುಗಳ ನಂಬುಗೆಯ ಮೇಲೆಯೇ ಮನುಷ್ಯರ ನಡುವೆ ಪರಸ್ಪರ ವ್ಯವಹಾರ ನಡೆಯುತ್ತದೆ. ಸತ್ಯ ಇಲ್ಲದಿದ್ದರೆ, ನ್ಯಾಯಯುತ ವ್ಯವಹಾರ ಸಾಧ್ಯವಿಲ್ಲ. ಈ ನಂಬುಗೆಗಳ ಕಾರಣಕ್ಕೆ ಇಡೀ ಸಮಾಜದ ಪುರುಷಾರ್ಥ ಒಂದೇ ದಿಸೆಯಲ್ಲಿ ಸಾಗುತ್ತದೆ. ಆಗ ಮಾತ್ರ ದೇಶದ ಉನ್ನತಿ ಸಾಧ್ಯ’ ಎಂದು ಹೇಳಿದರು.
‘ಕೆಲಸದಿಂದ (ಕರ್ಮ) ಮನಸ್ಸು, ಶರೀರ ಹಾಗೂ ಬುದ್ಧಿ ವಿಕಾಸವಾಗುತ್ತದೆ. ಆಗ ಚರಿತ್ರೆ ಸೃಷ್ಟಿಯಾಗುತ್ತದೆ. ಅಭ್ಯಾಸವಿಲ್ಲದೇ ಸ್ವಭಾವವಿಲ್ಲ. ಸ್ವಭಾವವಿಲ್ಲದೇ ಧರ್ಮವಿಲ್ಲ. ಎಲ್ಲ ಮಾತುಗಳು ಅವರವರ ಕೆಲಸದಿಂದಾಗಿಯೇ ಬರುತ್ತವೆ. ಜನರು ತಮ್ಮ–ತಮ್ಮ ರೀತಿಯಲ್ಲಿ ಕೆಲಸಗಳನ್ನು ಮಾಡುತ್ತಿರಬೇಕು. ನಮಗೆ (ಸಂಘ) ಧರ್ಮವೇ ಕೆಲಸಕೊಟ್ಟಿದೆ. ನೀವು ಮಠದಲ್ಲಿ, ಯಜ್ಞ ಪೀಠದಲ್ಲಿ ಕುಳಿತು ಧರ್ಮದ ಕೆಲಸ ಮಾಡಿ. ನಿಮಗೆ ಯಾರೂ ತೊಂದರೆ ಕೊಡದಂತೆ ನಾವು ಹೊರಗೆ ಲಾಠಿ ಹಿಡಿದು ರಕ್ಷಣೆ ನೀಡುತ್ತೇವೆ. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡುವುದರಿಂದ ಅದು ಧರ್ಮದ ಕೆಲಸವಾಗುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು.
‘ಇದಕ್ಕೂ ಮೊದಲೂ ಮತ್ತೂರಿನಲ್ಲಿ ನೀವು ಎರಡು ಯಜ್ಞಗಳನ್ನು ಮಾಡಿದ್ದೀರಿ. ಅವು ಸಂಪೂರ್ಣವಾಗಿ ಫಲಪ್ರದವಾಗಿದ್ದವು. ಈ ಬಾರಿಯೂ ರಾಷ್ಟ್ರದ ಅಭಿವೃದ್ಧಿ, ಪ್ರಗತಿಗೆ ಯಜ್ಞ ಮಾಡಿದ್ದೀರಿ. ಅದು ದೇವರ ದಯೆ, ನಿಮ್ಮೆಲ್ಲರ ತಪಸ್ಸು, ನಮ್ಮೆಲ್ಲರ ನೆರವಿನಿಂದ ಸಂಪೂರ್ಣ ನಿರ್ವಿಘ್ನವಾಗಿ ಅದು ನೆರವೇರಲಿದೆ’ ಎಂಬ ಆಶಯ ವ್ಯಕ್ತಪಡಿಸಿದರು.
ಮತ್ತೂರಿಗೆ ಗೌಪ್ಯ ಭೇಟಿ
ಕರ್ನಾಟಕ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ ಭಾಗವತ್ ಅವರು ಮತ್ತೂರಿಗೆ ಭೇಟಿ ನೀಡಿರುವುದು ಮಹತ್ವ ಪಡೆದಿದೆ. ಅವರ ಭೇಟಿಯನ್ನು ಗೌಪ್ಯವಾಗಿ ಇಡಲಾಗಿತ್ತು.
ಶುಕ್ರವಾರ ನಸುಕಿನಲ್ಲಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಅವರನ್ನು ಮತ್ತೂರಿನ ಹಿರಿಯರಾದ ಪಟ್ಟಾಭಿರಾಮ್ ಹಾಗೂ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಚಾಲಕ ಎಂ.ಬಿ.ಭಾನುಪ್ರಕಾಶ್ ಸ್ವಾಗತಿಸಿದರು. ಮತ್ತೂರಿನ ಚನ್ನಕೇಶವ ಅವಧಾನಿ ನೇತೃತ್ವದಲ್ಲಿ ನಡೆದ ಯಾಗದಲ್ಲಿ ಪಾಲ್ಗೊಂಡ ಅವರು, ನಂತರ ರೈತರ ಬೀದಿಯಲ್ಲಿರುವ ಕಂಬದಮ್ಮ ಗುಡಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. ಈ ವೇಳೆ ಗ್ರಾಮಸ್ಥರು ಊರಿನ ಪರವಾಗಿ ಗೌರವಿಸಿದರು.
‘ಇದೇ ಮೊದಲ ಬಾರಿಗೆ ಸರಸಂಘ ಚಾಲಕರು ಮತ್ತೂರಿಗೆ ಬಂದಿದ್ದಾರೆ. ವರ್ಷದ ಹಿಂದೆಯೇ ಅವರು ಇಲ್ಲಿಗೆ ಬರುವುದು ನಿರ್ಧಾರವಾಗಿತ್ತು. ಮೂರು ತಿಂಗಳ ಹಿಂದಷ್ಟೇ ದಿನಾಂಕ ನಿಗದಿಯಾಗಿತ್ತು’ ಎಂದು ಪಟ್ಟಾಭಿರಾಮ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.