ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಉರುಳುಗಲ್ಲು ಗ್ರಾಮಕ್ಕೆ ಅರಣ್ಯ ಕಾಯ್ದೆಯೇ ಉರುಳು

ಕಾಡಿನ ಮಡಿಲಲ್ಲಿರುವ ಕುಗ್ರಾಮ * ರಸ್ತೆ, ವಿದ್ಯುತ್ ಸೌಲಭ್ಯಕ್ಕೆ ತತ್ವಾರ
Last Updated 15 ಏಪ್ರಿಲ್ 2022, 4:40 IST
ಅಕ್ಷರ ಗಾತ್ರ

ಸಾಗರ: ‘ಮಂಗನ ಕಾಯಿಲೆಯಿಂದ ನನ್ನ ಪತ್ನಿ ಹಾಗೂ ಮಗನನ್ನು ಉಳಿಸಿಕೊಂಡಿದ್ದೇ ದೊಡ್ಡ ಪವಾಡದಂತೆ ಕಾಣುತ್ತಿದೆ. ಜ್ವರ ಬಂದು ಬಳಲಿದ ಪತ್ನಿಗೆ ಕಂಬಳಿ ಸುತ್ತಿ ಗೊಬ್ಬರ ಹೊರುವ ಬುಟ್ಟಿಯಲ್ಲಿ ಕೂರಿಸಿ ಎರಡು ಮರದ ತುಂಡುಗಳ ಸಹಾಯದಿಂದ ‘ದಡಿ’ ನಿರ್ಮಿಸಿ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡ ಹೋದ ದಿನಗಳನ್ನು ಹೇಗೆ ಮರೆಯಲಿ’ ಎನ್ನುವಾಗ ಚೀಕನಹಳ್ಳಿ ಗ್ರಾಮದ ಯೋಗರಾಜ್ ಅವರಲ್ಲಿ ಈ ವ್ಯವಸ್ಥೆಯ ಬಗ್ಗೆ ಅಸಹಾಯಕತೆಯ ಜೊತೆಗೆ ಆಕ್ರೋಶವೂ ಮಡುಗಟ್ಟಿತ್ತು.

‘ಕಾಡಿನ ನಡುವೆಯೆ ನಮ್ಮ ಮನೆಗಳಿವೆ. ಕಾಡಿನಲ್ಲಿ ಯಾವುದೇ ಪ್ರಾಣಿ ಸತ್ತರೂ ಅರಣ್ಯ ಇಲಾಖೆಯವರು ನಮ್ಮ ಮೇಲೆ ಅನುಮಾನ ಪಡುತ್ತಾರೆ. ಜಿಂಕೆ, ಹಂದಿ ಸತ್ತರೆ ನಮ್ಮ ಅಡುಗೆ ಮನೆಗೆ ಬಂದು ಬೇಯಿಸಿದ ಪದಾರ್ಥವನ್ನೂ ಅಧಿಕಾರಿಗಳು ಪರಿಶೀಲಿಸುತ್ತಾರೆ. ಇದು ಯಾವ ಕಾಲ ಸ್ವಾಮಿ’ ಎಂದು ಹೆಬ್ಬಾನಕೇರಿ ಗ್ರಾಮದ ಕೃಷಿಕ ಲಕ್ಷ್ಮಣ ಪ್ರಶ್ನಿಸುವಾಗ ಅವರ ಕಣ್ಣಲ್ಲೇ ರೋಷ ಉಕ್ಕಿದ ಮನೋಭಾವಎದ್ದುಕಾಣುತ್ತಿತ್ತು. ಹೀಗೆ ಇಲ್ಲಿನ ಗ್ರಾಮದ ಒಬ್ಬೊಬ್ಬರನ್ನೂ ಮಾತನಾಡಿಸುತ್ತ ಹೋದರೆ ಒಂದೊಂದು ಕತೆ-ವ್ಯಥೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ.

ಸಾಗರ ತಾಲ್ಲೂಕು ಕೇಂದ್ರದಿಂದ 70 ಕಿ.ಮೀ. ದೂರದಲ್ಲಿರುವ ಭಾನ್ಕುಳಿ ಪಂಚಾಯಿತಿ ವ್ಯಾಪ್ತಿಯ ಉರುಳುಗಲ್ಲು ಹಾಗೂ ಅದಕ್ಕೆ ಹೊಂದಿಕೊಂಡಿರುವ ಹೆಬ್ಬಾನಕೇರಿ, ಸಾಲ್ಕೊಡ್ಲು, ಚೀಕನಹಳ್ಳಿ, ಮುಂಡವಾಳ, ಮೇಲಿನೂರು ಮೊದಲಾದಗ್ರಾಮಗಳಲ್ಲಿರುವ 50ಕ್ಕೂ ಹೆಚ್ಚು ಮನೆಗಳಲ್ಲಿ ಸಮಸ್ಯೆಗಳ ಸರಮಾಲೆಯೇ ಅಡಗಿದೆ.

ನಾಡಿಗೆ ಬೆಳಕು ನೀಡಲು ಜಲ ವಿದ್ಯುತ್ ಯೋಜನೆ ಕೈಗೊಳ್ಳಲು ಸರ್ಕಾರ ಮುಂದಾದಾಗ ಮುಳುಗಡೆ ಸಂತ್ರಸ್ತರಾದವರು ಈ ಭಾಗಕ್ಕೆ ಬಂದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಶರಾವತಿ ಅಭಯಾರಣ್ಯ ಪ್ರದೇಶದ ವ್ಯಾಪ್ತಿಗೆ ಇಲ್ಲಿನ ಗ್ರಾಮಗಳು ಒಳಪಟ್ಟಿರುವ ಕಾರಣ ರಸ್ತೆ, ವಿದ್ಯುತ್, ಮೊಬೈಲ್ ನೆಟ್‌ವರ್ಕ್, ಶಾಲೆ, ಆಸ್ಪತ್ರೆ ಮೊದಲಾದ ಮೂಲ ಸೌಕರ್ಯಗಳಿಲ್ಲದೆ ಬಳಲುತ್ತಿವೆ.

300ಕ್ಕೂ ಹೆಚ್ಚು ಜನಸಂಖ್ಯೆ ಇರುವ ಇಲ್ಲಿನ ಮನೆಗಳು ಒತ್ತೊತ್ತಾಗಿಲ್ಲ. ಒಂದು ಮನೆಗೂ ಮತ್ತೊಂದು ಮನೆಗೂ ಕನಿಷ್ಠ 1ರಿಂದ 2 ಕಿ.ಮೀ. ದೂರವಿದೆ. ಹೆಚ್ಚಿನವರು ಪಿಯುಸಿವರೆಗೆ ಮಾತ್ರ ಓದಿದ್ದಾರೆ. ಪದವಿ, ಉನ್ನತ ಶಿಕ್ಷಣ ಪಡೆದ ಬೆರಳೆಣಿಕೆಯ ಯುವಜನರು ಉದ್ಯೋಗದ ನಿರೀಕ್ಷೆಯಲ್ಲಿದ್ದಾರೆ.

ಸಾಗರದಿಂದ ಕೋಗಾರ್ ಮೂಲಕ ಭಟ್ಕಳಕ್ಕೆ ತೆರಳುವ ರಸ್ತೆಯಲ್ಲಿ ಬಿಳಿಗಾರಿನಿಂದ ಕಾನೂರಿಗೆ ಹೋಗುವ ರಸ್ತೆಯಲ್ಲಿ ಕ್ರಮಿಸಿ ಅಲ್ಲಿಂದ ಎಡಕ್ಕೆ ಹೊರಳಿದರೆ ಉರುಳುಗಲ್ಲು ರಸ್ತೆ ಸಿಗುತ್ತದೆ. ಇಲ್ಲಿನ ಗ್ರಾಮಗಳು ಕಡಿದಾದ ಮಣ್ಣಿನ ರಸ್ತೆಯಿಂದ ಕೂಡಿದ್ದು, ವಾಹನ ತೆರಳಲು ಹರಸಾಹಸ ಮಾಡಬೇಕು. ಮಳೆಗಾಲದ ನಾಲ್ಕು ತಿಂಗಳಲ್ಲಂತೂ ವಾಹನ ಸಂಚಾರ ಸಾಧ್ಯವೇ ಇಲ್ಲ.

ಪ್ರಾಥಮಿಕ ಶಾಲೆಗೆ ಇಲ್ಲಿನ ಮಕ್ಕಳು 8 ಕಿ.ಮೀ., ಪ್ರೌಢಶಾಲೆಗೆ 15 ಕಿ.ಮೀ., ಕಾಲೇಜಿಗೆ 70 ಕಿ.ಮೀ. ಕ್ರಮಿಸಿ ಬರಬೇಕಿದೆ. ಗ್ರಾಮಸ್ಥರು ಆಸ್ಪತ್ರೆಗೆ ಚಿಕಿತ್ಸೆಗೆ ಬರಲು 70 ಕಿ.ಮೀ. ದೂರದ ಸಾಗರವನ್ನೇ ಅವಲಂಬಿಸಿದ್ದಾರೆ. ರಾತ್ರಿ ಕಾನೂರಿನಲ್ಲಿ ವಾಸ್ತವ್ಯ ಹೂಡುವ ಕೆಎಸ್‌ಆರ್‌ಟಿಸಿ ಬಸ್ ಬೆಳಿಗ್ಗೆ 6.30ಕ್ಕೆ ಅಲ್ಲಿಂದ ಹೊರಡುತ್ತದೆ. ಈ ಬಸ್ ಹಿಡಿಯಲು ಸುತ್ತಲಿನ ಗ್ರಾಮಸ್ಥರು ಬೆಳಗಿನ ಜಾವ 4.30ಕ್ಕೆ ಏಳಬೇಕು. ಈ ಬಸ್ ಬಿಟ್ಟರೆ ಮತ್ತೆ ಅವರಿಗೆ ಬಸ್ಸಿನ ವ್ಯವಸ್ಥೆ ಇಲ್ಲ.

ವಿದ್ಯುತ್ ಕಂಬ ಅಳವಡಿಸಲು ಹೋದರೆ ಅರಣ್ಯ ಇಲಾಖೆ ತಕರಾರು ಮಾಡುವುದರಿಂದ ಇಲ್ಲಿನ ಗ್ರಾಮಗಳಿಗೆ ಈವರೆಗೂ ವಿದ್ಯುತ್ ಸೌಲಭ್ಯ ತಲುಪಿಲ್ಲ. ಸರ್ಕಾರ ಸೋಲಾರ್ ಯೋಜನೆ ಮಂಜೂರು ಮಾಡಿದ್ದರೂ ಪದೇ ಪದೇ ಸೋಲಾರ್ ವ್ಯವಸ್ಥೆ ಕೈಕೊಡುವುದು ಗ್ರಾಮಸ್ಥರ ಪಾಲಿಗೆ ನುಂಗಲಾರದ ತುತ್ತಾಗಿದೆ.

ಪ್ರಾಕೃತಿಕವಾಗಿ ಹರಿಯುವ ಅಬ್ಬಿ ನೀರು ಮಾತ್ರ ಇಲ್ಲಿನ ಗ್ರಾಮಸ್ಥರ ಪಾಲಿಗೆ ವರದಾನವಾಗಿದೆ. ಇದರ ನೆರವಿನಿಂದ ರೈತರು ಕಷ್ಟದಿಂದಲೇ ಭತ್ತ, ಅಡಿಕೆಯ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಮೊಬೈಲ್ ನೆಟ್‌ವರ್ಕ್ ಎಂಬುದು ಹಳ್ಳಿಗರ ಪಾಲಿಗೆ ಮರೀಚಿಕೆಯಾಗಿದೆ. ಗುಡ್ಡ, ಬೆಟ್ಟ ಹತ್ತಿ ನೆಟ್‌ವರ್ಕ್ ಜಾಡು ಹಿಡಿದು ಕರೆ ಮಾಡುವುದು ಈ ಗ್ರಾಮಸ್ಥರ ದಿನಚರಿ.

ಅಭಿವೃದ್ಧಿ ಎಂದರೆ ನಗರಗಳ ಬೆಳವಣಿಗೆ ಮಾತ್ರ ಎಂದು ಭಾವಿಸುವ ಅಧಿಕಾರಸ್ಥರು ಒಮ್ಮೆ ಈ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರ ಬವಣೆಗಳನ್ನು ಆಲಿಸುವ ಔದಾರ್ಯ ತೋರಬೇಕಿದೆ. ಈ ಮೂಲಕವಾದರೂ ಅಲ್ಲಿನ ಜನರಿಗೆ ಕಿಂಚಿತ್ತಾದರೂ ನೆಮ್ಮದಿ ದೊರಕಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ.

*
ಒಂದು ಕಡೆ ಅರಣ್ಯ ಕಾಯ್ದೆಯ ಕಾಟ, ಅಧಿಕಾರಿಗಳ ಕಿರುಕುಳ, ಮತ್ತೊಂದೆಡೆ ಪರಿಸರವಾದಿಗಳ ಹುಯಿಲು. ಇವುಗಳ ನಡುವೆ ನಮ್ಮ ಬದುಕು ದುಸ್ತರವಾಗಿದೆ.
-ಲಕ್ಷ್ಮಣ, ಹೆಬ್ಬಾನಕೇರಿ

*
ರಸ್ತೆ, ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಕೊಟ್ಟು ಸಾಕಾಗಿ ಹೋಗಿದೆ. ಚುನಾವಣೆ ಸಮಯದಲ್ಲಿ ಮಾತ್ರ ಇಲ್ಲಿಗೆ ಬರುವ ರಾಜಕಾರಣಿಗಳು ನಂತರ ಈ ಕಡೆ ಮುಖ ಹಾಕುವುದಿಲ್ಲ.
-ಯೋಗರಾಜ್, ಚೀಕನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT