ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ: ಅಣ್ಣಾಮಲೈ ವಿಶ್ವಾಸ

Published 25 ಏಪ್ರಿಲ್ 2024, 14:42 IST
Last Updated 25 ಏಪ್ರಿಲ್ 2024, 14:42 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ದಕ್ಷಿಣ ಭಾರತದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಥಾನ ಸಿಗಲಿವೆ ಎಂದು ತಮಿಳುನಾಡು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಅಣ್ಣಾಮಲೈ ಹೇಳಿದರು. 

‘ಕರ್ನಾಟಕದಲ್ಲಿ ಎನ್‌ಡಿಎ ಮೈತ್ರಿಕೂಟ ಕ್ಲೀನ್‌ಸ್ವೀಪ್‌ ಮಾಡಲಿದೆ. ಕರುನಾಡಿನ ಜನತೆ ಕಣ್ಣುಮುಚ್ಚಿ ಮೋದಿ ಪರ ಮತ ಹಾಕಲಿದ್ದಾರೆ. ತಮಿಳುನಾಡಿನಲ್ಲಿ 11ಕ್ಕೂ ಅಧಿಕ ಸ್ಥಾನ, ಗೋವಾದಲ್ಲಿ 2, ಕೇರಳದಲ್ಲಿ ಖಾತೆ ತೆರೆಯಲಿದ್ದೇವೆ. ಆಂಧ್ರ ಮತ್ತು ತೆಲಂಗಾಣದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ’  ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿ ಇದ್ದಾಗ 10 ವರ್ಷಗಳಲ್ಲಿ ₹1,500 ಕೋಟಿ ಬರ ಪರಿಹಾರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ₹7,000 ಕೋಟಿ ನೀಡಿದ್ದಾರೆ. ಯುಪಿಎ ಶೇ 8ರಷ್ಟು ಪರಿಹಾರ ನೀಡಿದ್ದರೆ, ಮೋದಿ ಸರ್ಕಾರ ಶೇ 38ರಷ್ಟು ನೀಡಿದೆ. ಆದರೆ ರಾಜ್ಯ ಸರ್ಕಾರ ಇದೀಗ ಬರ ಪರಿಹಾರ ಕೊಟ್ಟಿಲ್ಲವೆಂದು ಚೊಂಬಿನ ಜಾಹೀರಾತು ನೀಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಕೈಗೆ ಚೊಂಬು ಕೊಡುವುದು ಗ್ಯಾರಂಟಿ ಆಗಿದೆ’ ಎಂದು ಹೇಳಿದರು. 

ನೆರವು ಕೇಳಲು ಸ್ನೇಹಿತನ ತರಹ ಹೋಗಬೇಕೇ ಹೊರತು ಪ್ರತಿಭಟನೆಯ ಮೂಲಕ ಅಲ್ಲ. ಈಗಾಗಲೇ ಕೇಂದ್ರ ರಾಜ್ಯಕ್ಕೆ ಪರಿಹಾರ ನೀಡಲು ಒಪ್ಪಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿಯೇ ವಿಳಂಬವಾಗಿದೆ ಎಂದು ಅಣ್ಣಾಮಲೈ ಹೇಳಿದರು. 

‘ಇಂಡಿಯಾ ಒಕ್ಕೂಟದಲ್ಲಿ ಹೊಂದಾಣಿಕೆ ಇಲ್ಲ. ಕೇರಳ ರಾಜ್ಯದಲ್ಲಿ ಈಗಾಗಲೇ ಜಗಳ ಪ್ರಾರಂಭವಾಗಿದೆ. ಸಿಪಿಐ, ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಶುರುವಾಗಿದೆ. ರಾಹುಲ್ ಗಾಂಧಿ ಬಂಧನವಾಗುವ ಬಗ್ಗೆಯೇ ಮಾತುಕತೆಯಾಗುತ್ತಿದೆ. ಇದು ದೇಶದ ಚುನಾವಣೆ. ಜನ ಬುದ್ಧಿವಂತರಿರುತ್ತಾರೆ. ಯಾರು ಪ್ರಧಾನಿಯಾಗಬೇಕು ಎಂಬುದನ್ನು ಈಗಾಗಲೇ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರು ಪ್ರಧಾನಿ ಮೋದಿ ಬಗ್ಗೆ ಕೀಳುಮಟ್ಟದ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿಗಳಿಂದ ಅಲ್ಲ. ಅದಕ್ಕೆ ಬಿಜೆಪಿ ಆಡಳಿತ ವಿರೋಧಿ ಅಲೆ ಸೇರಿದಂತೆ ಬೇರೆ ಬೇರೆ ಕಾರಣಗಳಿವೆ’ ಎಂದು ತಿಳಿಸಿದರು.

ಸಂಸದ ಬಿ.ವೈ. ರಾಘವೇಂದ್ರ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಮತದಾರರು ಅವರಿಗೆ ಮನ್ನಣೆ ನೀಡಲಿದ್ದಾರೆ. ಈಶ್ವರಪ್ಪನವರ ಸ್ಪರ್ಧೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು. 

ಬಿಜೆಪಿ ಜಿಲ್ಲಾ ಅಧ್ಯಕ್ಷದ ಟಿ.ಡಿ. ಮೇಘರಾಜ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಎಸ್. ದತ್ತಾತ್ರಿ, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ, ವಿನ್ಸೆಂಟ್ ರೋಡ್ರಿಗಸ್, ಗಣೇಶ್ ಬಿಳಕಿ, ಪೆರುಮಾಳ್, ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT