ಶುಕ್ರವಾರ, ಜುಲೈ 1, 2022
28 °C
ವೃತ್ತಗಳಿಗೆ ಹಿರಿಯರ ಹೆಸರು ನಾಮಕರಣ ವಿವಾದ

ಸಾಗರ: ಹಿರಿಯರ ಕೊಡುಗೆ ಮರೆತ ಸ್ಥಳೀಯ ಆಡಳಿತ

ಎಂ. ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ನಗರದ ವೃತ್ತವೊಂದಕ್ಕೆ ಹೆಸರು ನಾಮಕಾರಣ ಮಾಡುವ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಉನ್ನತ ಕೊಡುಗೆ ನೀಡಿದ ಸ್ಥಳೀಯ ನಾಯಕರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈಚೆಗೆ ನಡೆದ ಇಲ್ಲಿನ ನಗರಸಭೆಯ ಮಾಸಿಕ ಸಭೆಯಲ್ಲಿ ನಗರದ ವೃತ್ತವೊಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿವಮೊಗ್ಗ ಕ್ಷೇತ್ರದ ಪ್ರಥಮ ಸಂಸದ ಕೆ.ಜಿ. ಒಡೆಯರ್ ಅವರ ಹೆಸರು ಇಡಬೇಕು ಎಂಬ ವಿಷಯ ಚರ್ಚೆಗೆ ಬಂದಿತ್ತು. ಸಭೆಯ ನಡಾವಳಿಯಲ್ಲಿ ಇಲ್ಲದ ವಿಷಯ ಚರ್ಚೆಗೆ ತಂದಿದ್ದು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಕಾಗೋಡು ಸತ್ಯಾಗ್ರಹದ ರೂವಾರಿ ಎಚ್. ಗಣಪತಿಯಪ್ಪ, ಹಿರಿಯ ಸಮಾಜವಾದಿಗಳಾದ ಎಸ್.ಎಸ್. ಕುಮಟಾ, ಜಿ.ಆರ್.ಜಿ. ನಗರ್, ಪತ್ರಕರ್ತ ಕಮಲಾಕ್ಷ ಪಂಡಿತ್, ಪುರಸಭೆಯ ಮಾಜಿ ಅಧ್ಯಕ್ಷರಾದ ಅಹಮದ್ ಆಲಿಖಾನ್, ಬಿ.ಎಸ್. ಚಂದ್ರಶೇಖರ್, ಕೆ.ಎಂ. ಲಿಂಗಪ್ಪ, ಓಮನ್ ಸಿಂಗ್, ಮಾಜಿ ಸದಸ್ಯ ಪ್ರಹ್ಲಾದರಾವ್ ಬಾಪಟ್, ರಂಗಕರ್ಮಿ ಕೆ.ವಿ. ಸುಬ್ಬಣ್ಣ ಹೀಗೆ ಹಲವು ಹಿರಿಯರು ಊರನ್ನು ಕಟ್ಟುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ಊರಿನ ವೃತ್ತಕ್ಕೆ ಅವರ ಹೆಸರು ಇಡುವ ವಿಷಯದಲ್ಲಿ ಮಾತ್ರ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂಬ ದೂರು ಸಾರ್ವಜನಿಕ ವಲಯದಲ್ಲಿದೆ.

ಕಾಗೋಡು ಸತ್ಯಾಗ್ರಹದ ಆರಂಭ ಹಾಗೂ ನಂತರ ಅದನ್ನು ಸಂಘಟಿಸುವಲ್ಲಿ ಗಣಪತಿಯಪ್ಪ ಅವರು ವಹಿಸಿದ್ದ ಪಾತ್ರ ಇತಿಹಾಸದಲ್ಲಿ ದಾಖಲಾಗಿದೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಅವರಿಗೆ ರಾಜ್ಯ ಸರ್ಕಾರ ದೇವರಾಜ ಅರಸು ಪುರಸ್ಕಾರ ನೀಡಿ ಗೌರವಿಸಿದೆ.

ಅದೇ ರೀತಿ ಸಮಾಜವಾದಿ ಚಳವಳಿಯನ್ನು ಸಂಘಟಿಸುವಲ್ಲಿ ಎಸ್.ಎಸ್. ಕುಮಟಾ, ಜಿ.ಆರ್.ಜಿ. ನಗರ್ ವಹಿಸಿದ್ದ ಪಾತ್ರವನ್ನು ಕೂಡ ಮರೆಯುವಂತಿಲ್ಲ. ರಂಗಭೂಮಿ ಕ್ಷೇತ್ರಕ್ಕೂ ಇವರಿಬ್ಬರ ಹಾಗೂ ಪತ್ರಕರ್ತ ಕಮಲಾಕ್ಷ ಪಂಡಿತ್ ಅವರ ಕೊಡುಗೆ ಗಮನಾರ್ಹ.

ಮಲೆನಾಡು ಭಾಗದ ಕ್ರೀಡಾ ಕ್ಷೇತ್ರದ ಭೀಷ್ಮ ಎಂದೇ ಹೆಸರು ಗಳಿಸಿದ್ದವರು ಬಿ.ಎಸ್. ಚಂದ್ರಶೇಖರ್. 70ರ ದಶಕದಲ್ಲಿ ತಾಲ್ಲೂಕು ಕೇಂದ್ರವಾದ ಸಾಗರದಲ್ಲಿ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಸಂಘಟಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬರ್ಕ್ ಲಿ ಆಹ್ವಾನಿತ ರಾಜ್ಯಮಟ್ಟದ ಫುಟ್‌ಬಾಲ್ ಪಂದ್ಯಾವಳಿ, ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಸಂಘಟನೆಗೆ ಬೆನ್ನೆಲುಬಾಗಿದ್ದರು.

ಈ ಹಿಂದೆ ಸಾಗರದಲ್ಲಿ ಸಾರ್ವಜನಿಕವಾಗಿ ಊರಿನ ಎಲ್ಲರೂ ಒಂದಾಗಿ ಒಂದೇ ಕಡೆ ಗಣಪತಿ ಹಬ್ಬದಂದು ಗಣಪತಿಯನ್ನು ಪ್ರತಿಷ್ಠಾಪಿಸುತ್ತಿದ್ದರು. ಈ ಗಣೇಶೋತ್ಸವದ ಆಚರಣೆಯ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಅಹಮದ್ ಆಲಿಖಾನ್ ಅವರದ್ದಾಗಿತ್ತು. ಈ ಊರಿನ ಜಾತ್ಯತೀತ ಪರಂಪರೆಯ ಹೆಗ್ಗುರುತಿನಂತೆ ಇದ್ದರು ಖಾನ್ ಸಾಹೇಬರು.

ಬಿಜೆಪಿ ಸಂಘಟನೆ ದುರ್ಬಲವಾಗಿದ್ದಾಗಲೂ ಆ ಪಕ್ಷದಿಂದ ಪುರಸಭೆಗೆ ಆರಿಸಿ ಬರುತ್ತಿದ್ದವರು ಪ್ರಹ್ಲಾದರಾವ್ ಬಾಪಟ್. ಊರಿನ ಅಭಿವೃದ್ಧಿಗೆ ಪ್ರತಿಯೊಂದು ಸಭೆಯಲ್ಲೂ ರಚನಾತ್ಮಕ ಸಲಹೆ ನೀಡುತ್ತಿದ್ದರು. ಪ್ರಬಲ ಜಾತಿಯ ಹಿನ್ನೆಲೆ ಇರದಿದ್ದರೂ ಹಲವು ಬಾರಿ ಪುರಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಕೆ.ಎಂ. ಲಿಂಗಪ್ಪ ಅವರ ಸಾಧನೆ. ಶ್ರಮ ಸಂಸ್ಕೃತಿಯ ಹಿನ್ನೆಲೆಯ ಓಮನ್ ಸಿಂಗ್ ಕೂಡ ಸ್ಥಳೀಯ ಸಂಸ್ಥೆಯ ಪ್ರಮುಖ ಹುದ್ದೆಗೆ ಏರಿದ್ದು ಸಾಮಾನ್ಯ ಸಂಗತಿಯಲ್ಲ.

ಹೆಗ್ಗೋಡಿನಂತಹ ಪುಟ್ಟ ಗ್ರಾಮದಲ್ಲಿದ್ದುಕೊಂಡೇ ರಂಗಭೂಮಿ ಚಟುವಟಿಕೆಯನ್ನು ಹಲವು ದಶಕಗಳ ಕಾಲ ನಡೆಸುತ್ತಾ, ಊರಿನ ಹೆಸರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಕೆ.ವಿ. ಸುಬ್ಬಣ್ಣ ಅವರದ್ದು. ಪ್ರತಿಷ್ಠಿತ ಮ್ಯಾಗ್ಸಸೆ ಪ್ರಶಸ್ತಿ ಗೆ ಪಾತ್ರರಾಗಿದ್ದರು.

ಇಂತಹ ಮಹನೀಯರ ಹೆಸರನ್ನು ಊರಿನ ಒಂದೊಂದು ವೃತ್ತಕ್ಕೆ ಇಡುವ ಮೂಲಕ ಹೊಸ ತಲೆಮಾರಿನವರು ಹಿಂದಿನವರ ಕೊಡುಗೆಯನ್ನು ಸ್ಮರಿಸಲು ಅವಕಾಶ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

*
ಊರಿನ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ, ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಹೆಸರನ್ನು ಊರಿನ ವೃತ್ತಕ್ಕೆ ಇಡುವುದರಿಂದ ಊರಿನ ಗೌರವ ಹೆಚ್ಚಾಗುತ್ತದೆ.
-ಈ. ನಾಗರಾಜ್, ಅಧ್ಯಕ್ಷರು, ವಕೀಲರ ಸಂಘ, ಸಾಗರ

*
ನಗರದ ವೃತ್ತಗಳಿಗೆ ಗಣ್ಯರ ಹೆಸರು ಇಡುವಾಗ ಜಾತಿ, ಧರ್ಮ, ಪಕ್ಷ ನೋಡದೆ ಹಿರಿಯರ ಕೊಡುಗೆಯನ್ನು ಪ್ರಮುಖವಾಗಿ ಪರಿಗಣಿಸಬೇಕು. ನಗರಸಭೆ ಈ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.
-ಬಿ.ಆರ್. ಜಯಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು