ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ನೇಕಾರಿಕೆಯ ಕರ್ಮಭೂಮಿಯಲ್ಲಿ ರಂಗಕರ್ಮಿಗಳ ಕಲರವ

ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ರಾಷ್ಟ್ರಮಟ್ಟದ ರಂಗ ತರಬೇತಿ ಶಿಬಿರ
Published 31 ಮೇ 2024, 6:40 IST
Last Updated 31 ಮೇ 2024, 6:40 IST
ಅಕ್ಷರ ಗಾತ್ರ

ಸಾಗರ: ಕೈಮಗ್ಗ ನೇಕಾರಿಕೆಯಲ್ಲಿ ಹೆಸರು ಮಾಡಿರುವ ತಾಲ್ಲೂಕಿನ ಹೆಗ್ಗೋಡಿನ ಚರಕ ಸಂಸ್ಥೆಯು ತನ್ನ ಅಂಗ ಸಂಸ್ಥೆಯಾದ ಕವಿಕಾವ್ಯ ಟ್ರಸ್ಟ್‌ನ ಸಹಯೋಗದೊಂದಿಗೆ ಕಳೆದ ಎರಡು ವರ್ಷಗಳಿಂದ ರಾಷ್ಟ್ರಮಟ್ಟದ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.

ನಾಡಿನ ಹಿರಿಯ ರಂಗಕರ್ಮಿ ಪ್ರಸನ್ನ ಅವರ ನಿರ್ದೇಶನದಲ್ಲಿ, ತಾಲ್ಲೂಕಿನ ಹೊನ್ನೇಸರ ಗ್ರಾಮದ ಶ್ರಮಜೀವಿ ಆಶ್ರಮದಲ್ಲಿ ಕಳೆದ ಆರು ದಿನಗಳಿಂದ ಶಿಬಿರ ನಡೆಯುತ್ತಿದೆ.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್, ಅಸ್ಸಾಂ ಸೇರಿ ದೇಶದ ವಿವಿಧ ರಾಜ್ಯಗಳ 30 ಯುವ ರಂಗಕರ್ಮಿಗಳು ‘ಆ್ಯಕ್ಟಿಂಗ್ ಶಾಸ್ತ್ರ’ ಎಂಬ ಹೆಸರಿನ ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ನೇಕಾರರ ಕರ್ಮಭೂಮಿ ಆಗಿರುವ ಶ್ರಮಜೀವಿ ಆಶ್ರಮದಲ್ಲಿ ಈಗ ರಂಗಕರ್ಮಿಗಳ ಕಲರವ ಕೇಳಿಬರುತ್ತಿದೆ.

ಬೆಳಗಿನ ಜಾವ ಆಶ್ರಮದ ಆವರಣದಲ್ಲಿನ ಕೆರೆಯಲ್ಲಿ ಶ್ರಮದಾನ ಮಾಡುವ ಮೂಲಕ ಶಿಬಿರ ಆರಂಭಗೊಳ್ಳುತ್ತಿದೆ. ನಂತರ ರಂಗಭೂಮಿಗೆ ಸಂಬಂಧಿಸಿದ ಪಠ್ಯಗಳ ಕುರಿತ ವಾಚನ, ಮಾತುಕತೆ, ಸಂವಾದ, ಥಿಯೇಟರ್ ಗೇಮ್ಸ್, ಅಭಿನಯದ ವಿವಿಧ ಆಯಾಮಗಳ ವಿಶ್ಲೇಷಣೆ, ಪ್ರಾತ್ಯಕ್ಷಿಕೆ, ಕಿರು ರಂಗ ಪ್ರಯೋಗ ಹೀಗೆ ಹತ್ತು ಹಲವು ಚಟುವಟಿಕೆಗಳು ಶಿಬಿರದಲ್ಲಿ ನಡೆಯುತ್ತಿವೆ.

‘ಶಿಬಿರಾರ್ಥಿಗಳಿಗೆ ಶ್ರಮದಾನದ ಮಹತ್ವ ತಿಳಿಸಲಾಗುತ್ತದೆ. ಈ ಮೂಲಕ ಅವರು ಪ್ರಕೃತಿಯ ಜೊತೆಗೂ ಅವಿನಾಭಾವ ಸಂಬಂಧ ಬೆಳೆಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಶಿಬಿರದ ನಿರ್ದೇಶಕ ಪ್ರಸನ್ನ.

‘ರಂಗಭೂಮಿಯಲ್ಲಿ ಕಲಿಕೆ ಎಂದ ಕೂಡಲೇ ಒಂದೊ ನಾಟ್ಯ ಶಾಸ್ತ್ರದ ಅಭಿಜಾತ ಪರಂಪರೆ ಅಥವಾ ಗ್ರೀಕ್ ನಾಟಕಕಾರ ಸ್ಟ್ಯಾನಿಸ್ಲಾವೆಸ್ಕಿಯ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇವೆರಡನ್ನೂ ಒಳಗೊಂಡ ಹೊಸ ಮಾದರಿಯ ಹುಡುಕಾಟ ಈಗ ರಂಗಭೂಮಿಯ ಅಗತ್ಯ ಎನ್ನುವ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಶಿಬಿರಕ್ಕೆ ‘ಆ್ಯಕ್ಟಿಂಗ್ ಶಾಸ್ತ್ರ’ ಎಂಬ ಹೆಸರು ಇಡಲಾಗಿದೆ’ ಎಂದು ಅವರು ವಿವರ ನೀಡುತ್ತಾರೆ.

‘ದೇಶದ ಪ್ರಮುಖ ನಗರಗಳಲ್ಲಿ ಉದ್ಯೋಗದಲ್ಲಿರುವ ಯುವಕ, ಯುವತಿಯರು ತಮ್ಮ ಹುದ್ದೆ ತೊರೆದು ರಂಗಭೂಮಿಯತ್ತ ಬರುತ್ತಿದ್ದಾರೆ. ಮೇಲ್ನೋಟಕ್ಕೆ ಸಿನಿಮಾಕ್ಕೆ ಪ್ರವೇಶಿಸಲು ಇದು ಕಾರಣ ಎಂದೆನಿಸಿದರೂ ರಂಗಭೂಮಿ ಸಹಜವಾಗಿ ಬೆರೆಯುವ ಸಾಧ್ಯತೆ ಇರುವ ಸಂವಹನ ಮಾಧ್ಯಮವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ. ಹೀಗೆ ಬರುವ ಯುವ ಸಮುದಾಯವನ್ನು ಸರಿದಾರಿಗೆ ತರುವ ಪ್ರಯತ್ನದ ಭಾಗವಾಗಿಯೂ ಇಂತಹ ಶಿಬಿರಗಳ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸುತ್ತಾರೆ.

ಹೀಗೆ ರಂಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡವರು ನಂತರ ತಾವು ನೆಲೆಸಿರುವ ಪ್ರದೇಶಕ್ಕೆ ತೆರಳಿ, ಅವರವರ  ಮಾತೃಭಾಷೆಯಲ್ಲಿ ರಂಗಭೂಮಿ ಚಟುವಟಿಕೆ ಕೈಗೊಳ್ಳುವ ಮೂಲಕ ಸಮಾಜ, ಸಂಸ್ಕೃತಿಯನ್ನು ಜೀವಂತವಾಗಿಡುವ ಕೆಲಸ ಮಾಡಬೇಕು ಎಂಬ ಉದ್ದೇಶ ಶಿಬಿರದ ಹಿಂದಿದೆ ಎಂದೂ ಅವರು ಉದ್ದೇಶವನ್ನು ತಿಳಿಸುತ್ತಾರೆ.

ಪ್ರಸನ್ನ
ಪ್ರಸನ್ನ
ನಟನೆ ಎಂಬುದು ಸಂಕೀರ್ಣ ಪ್ರಕ್ರಿಯೆಯಲ್ಲ. ಓರ್ವ ಜಾನಪದ ಕಲಾವಿದ ರಂಗದ ಮೇಲೆ ಒಂದು ಪಾತ್ರವನ್ನು ಹೇಗೆ ಲೀಲಾಜಾಲವಾಗಿ ಸಂತೋಷಿಸುತ್ತ ನಿರ್ವಹಿಸುತ್ತಾನೋ ಅದೇ ರೀತಿ ನಮ್ಮ ಯುವ ರಂಗ ನಟ ನಟಿಯರು ತಯಾರಾಗಬೇಕು ಎಂಬುದಕ್ಕೆ ಶಿಬಿರ ಒತ್ತು ನೀಡುತ್ತಿದೆ.
– ಪ್ರಸನ್ನ ರಂಗ ನಿರ್ದೇಶಕ
ಶ್ವೇತಾ ಮುಂಬೈ
ಶ್ವೇತಾ ಮುಂಬೈ
ರಂಗಭೂಮಿಯಲ್ಲಿ ಹೊಸತನ್ನು ಕಲಿಯಬೇಕು ಎಂಬ ಹುಡುಕಾಟದಿಂದ ಶಿಬಿರಕ್ಕೆ ಸೇರಿದ್ದೇನೆ. ಈವರೆಗೆ ಯಾವುದು ನಟನೆ ಅಂದುಕೊಂಡಿದ್ದೆನೋ ಅದಷ್ಟೇ ಅಲ್ಲ ಎಂಬ ಸಂಗತಿಗಳು ಶಿಬಿರದಲ್ಲಿ ಅರಿವಿಗೆ ಬಂದಿದೆ.
– ಶ್ವೇತಾ ರಂಗ ನಟಿ
ಗೋರ್ಧನ್ ಸಿಂಗ್ ಮುಂಬೈ
ಗೋರ್ಧನ್ ಸಿಂಗ್ ಮುಂಬೈ
ಮುಂಬೈ ನಟನೆಯ ಜೊತೆಗೆ ಇಲ್ಲಿನ ಪರಿಸರವು ನಾವು ಹೇಗೆ ಸರಳವಾಗಿ ಬದುಕಬಹುದು ಎಂಬುದನ್ನು ಕಲಿಸಿಕೊಟ್ಟಿದೆ. ಕಾಯಕ ಸಂಸ್ಕೃತಿಯ ಮಹತ್ವ ಕೂಡ ಶಿಬಿರದಲ್ಲಿ ಅರಿವಿಗೆ ಬಂದಿದೆ.
– ಗೋರ್ಧನ್ ಸಿಂಗ್ ರಂಗ ನಟ ಮುಂಬೈ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT