ಶನಿವಾರ, ಮೇ 28, 2022
21 °C

ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ: ಡಾ.ಓಂಕಾರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರಜಾಪ್ರಭುತ್ವ ಸದೃಢಗೊಳಿಸಲು ಪ್ರತಿಯೊಬ್ಬರೂ ಚುನಾವಣೆಗಳಲ್ಲಿ ತಪ್ಪದೇ ಮತ ಚಲಾಯಿಸಬೇಕು ಎಂದು ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಓಂಕಾರಪ್ಪ ಸಲಹೆ ನೀಡಿದರು.

ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯಶಾಸ್ತ್ರ ವಿಭಾಗ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.

ಜಗತ್ತಿನಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಸರ್ಕಾರ ಅಸ್ತಿತ್ವಕ್ಕೆ ಬರಲು ಚುನಾವಣೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ. 18 ವರ್ಷ ತುಂಬಿದ ದೇಶದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಕೇವಲ ತಾವಷ್ಟೇ ಮತ ಚಲಾಯಿಸಿದರೆ ಸಾಲದು. ತಮ್ಮ ಕುಟುಂಬ, ನೆರೆ-ಹೊರೆಯವರಿಗೂ ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದರು.

ಚುನಾವಣೆ ಪವಿತ್ರ ಕಾರ್ಯ. ಯಾವುದೇ ಒಳ್ಳೆಯ ಸರ್ಕಾರ ಅಥವಾ ಕೆಟ್ಟ ಸರ್ಕಾರದ ಅಸ್ತಿತ್ವ ಮತದಾರರ ಮೇಲೆ ಅವಲಂಬಿತವಾಗಿರುತ್ತದೆ. ದೇಶದ ಪ್ರಜೆಗಳೆಲ್ಲ ಸಕ್ರಿಯವಾಗಿ ಪಾಲ್ಗೊಂಡು ಅರ್ಹರಿಗೆ ಮತ ಚಲಾಯಿಸುವುದರ ಮೂಲಕ ಉತ್ತಮ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಚ್.ಎಸ್.ನಾಗಭೂಷಣ, ‘ಅರ್ಹ ಮತದಾರರು ಪ್ರತಿ ಚುನಾವಣೆಯಲ್ಲಿ ಭಾಗವಹಿಸಬೇಕು. ಕಡ್ಡಾಯವಾಗಿ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವದ ಉದ್ದೇಶಗಳು ಈಡೇರುವಂತೆ ಮಾಡಬೇಕು’ ಎಂದರು.

ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ಉಪನ್ಯಾಸಕರಾದ ವಿದ್ಯಾಶ್ರೀ ಬಿ.ಕೆ., ಎನ್.ಡಿ.ರಮೇಶ, ಈಶ್ವರ, ನಾಗಾರ್ಜುನ ಉಪಸ್ಥಿತರಿದ್ದರು. ರಮ್ಯಶ್ರೀ ಪ್ರತಿಜ್ಞಾವಿಧಿ ಭೋದಿಸಿದರು.

ಮತದಾನದ ಹಕ್ಕಿನ ಅರಿವು ಅಗತ್ಯ: ‘ನಮ್ಮನ್ನು ಆಳುವ ಸಮರ್ಥ ನಾಯಕರನ್ನು ನಾವೇ ಆರಿಸುವ ಮತದಾನದ ಹಕ್ಕು ಅತ್ಯಂತ ಮಹತ್ವವುಳ್ಳದ್ದಾಗಿದೆ. ಈ ಕುರಿತು ಹೆಚ್ಚಿನ ಅರಿವು ಮೂಡಬೇಕಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮುಸ್ತಫಾ ಹುಸೇನ್ ಎಸ್.ಎ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ನಗರಪಾಲಿಕೆ ಸಹಯೋಗದಲ್ಲಿ ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘1950ರಲ್ಲಿ ಸ್ಥಾಪನೆಯಾದ ಚುನಾವಣಾ ಆಯೋಗ ಇಲ್ಲಿಯವರೆಗೂ ಎಲ್ಲ ಚುನಾವಣೆಗಳನ್ನು ನಡೆಸುತ್ತಾ ಬಂದಿದೆ. ಚುನಾವಣೆಗಳಲ್ಲಿ ಶೇ 40, ಶೇ 50ರಷ್ಟು ಕಡಿಮೆ ಮತದಾನ ಆಗುತ್ತಿರುವುದು ಒಂದು ಗಂಭೀರವಾದ ವಿಚಾರ’ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ, ಚುನಾವಣಾ ಶಾಖೆಯ ತಹಶೀಲ್ದಾರ್ ಮಂಜುಳಾ ಭಜಂತ್ರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು