ಗುರುವಾರ , ಫೆಬ್ರವರಿ 9, 2023
30 °C
ಹುಲಿಕಲ್ ಅಪಘಾತ ತಂದ ಆಪತ್ತು; ಮೂರು ಸಾವಿನಿಂದ ಕಂಪಿಸಿದ ಕಂಪನಕೈ ಗ್ರಾಮ

ಹುಲಿಕಲ್ ಅಪಘಾತ: ಅನಾಥರಾದ ಮಕ್ಕಳು– ಬೇಕಿದೆ ನೆರವಿನ ಆಸರೆ

ರವಿ ನಾಗರಕೂಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಹುಲಿಕಲ್‌ ಬಳಿ ಸಂಭವಿಸಿರುವ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದರಿಂದ ಸಮೀಪದ ಕಂಪನಕೈ ಗ್ರಾಮದ ಮನೆ– ಮನಗಳಲ್ಲಿ ಮೌನ ಆವರಿಸಿದ್ದು, ಪ್ರೀತಿಪಾತ್ರರ ಅಗಲಿಕೆಯಿಂದ ಸಂಬಂಧಿಕರಲ್ಲಿ ದುಃಖ ಮಡುಗಟ್ಟಿದೆ. ಇಡೀ ಗ್ರಾಮವೇ ವಿಧಿಯ ಅಟ್ಟಹಾಸವನ್ನು ಹಳಿಯುತ್ತಿದೆ.

ಗ್ರಾಮದ ಎರಡು ಕುಟುಂಬಗಳಲ್ಲಿ ಸಾವಿನ ಮೇಲೆ ಸಾವು ನಡೆದು ದಟ್ಟ ಕಾರ್ಮೋಡ ಕವಿದಿದೆ. ಹುಲಿಕಲ್ ಅಪಘಾತದಲ್ಲಿ ರವಿ ಮತ್ತು ಮಗ ಶಿಶಿರ ಸ್ಥಳದಲ್ಲೇ ಸಾವು ಕಂಡರೆ, ಶಾಲಿನಿ ಅವರು ಸಾವು ಬದುಕಿನ ನಡುವೆ ಹೋರಾಡಿದ ನಂತರ ಸಾವಿಗೆ ಶರಣಾಗಿದ್ದಾರೆ.

ಭಾನುವಾರ ಶಾಲಿನಿ ಅವರ ಮೃತದೇಹವನ್ನು ಗ್ರಾಮಕ್ಕೆ ತಂದಾಗ ಊರಿಗೆ ಊರೇ ರೋಧಿಸಿತು. ಮಕ್ಕಳು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಾಲಿನಿ ಅವರ ಎರಡು ಮಕ್ಕಳಂತೂ ‘ಅಮ್ಮ... ಅಮ್ಮ’ ಎಂದು ಅತ್ತು, ಕರೆದ ದೃಶ್ಯ ಮನಕಲಕಿತು.

ಬಡ ಕುಟುಂಬ: ಖಾತೆ ಹೊಂದಿರದ ಮುಳುಗಡೆ ಜಮೀನಿನಲ್ಲಿ ಕೃಷಿ ಮಾಡಿ, ಜೊತೆಗೆ ಕೂಲಿಗೂ ಹೋಗಿ ರವಿ ಹಾಗೂ ಶಿಶಿರ ಅವರ ಕುಟುಂಬ ಜೀವನ ಸಾಗಿಸುತ್ತಿದ್ದವು. ಮೃತ ರವಿ ಅವರ ಕುಟುಂಬದಲ್ಲಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಕಡು ಬಡತನದ ಕುಟುಂಬಕ್ಕೆ ಈಗ ಅಪ್ಪ, ಅಮ್ಮ ಇಬ್ಬರೂ ಇಲ್ಲದಂತಾಗಿದೆ.

ಆಸರೆಯಾಗಬೇಕಿದ್ದ ಮಗ: ಅಪಘಾತದಲ್ಲಿ ಮೃತಪಟ್ಟ ಶಿಶಿರ ಕಂಪನಕೈ ಗ್ರಾಮದ ಇಂದಿರಮ್ಮ ಅವರ ಒಬ್ಬನೇ ಮಗ. 4ನೇ ತರಗತಿ ಓದುತ್ತಿದ್ದ ಶಿಶಿರ ಚಿಕ್ಕಪ್ಪನ ಜತೆ ಸಾವು ಕಂಡಿದ್ದಾನೆ. ತಾಯಿ ಇಂದಿರಮ್ಮನಿಗೆ ಮಗನ ಸಾವು ಭರಿಸಲಾಗದ ದುಃಖ ತಂದೊಡ್ಡಿದೆ. ಕಳೆದ ವರ್ಷ ಮಗಳು ಉಯ್ಯಾಲೆ ಆಡುವಾಗ ಆಕಸ್ಮಿಕವಾಗಿ ಹಗ್ವು ಕತ್ತಿಗೆ ಸಿಲುಕಿ ದಾರುಣ ಸಾವು ಕಂಡಿದ್ದಳು. ಈ ಹಿಂದೆ ಪತಿ ಶಂಕರಪ್ಪಗೌಡ ಅವರೂ  ಅನಾರೋಗ್ಯದಿಂದ ಮೃತಪಟ್ಟಿದ್ದು, ಇದೀಗ ಬದುಕಿಗೆ ಆಸರೆಯಾಗಿದ್ದ ಶಿಶಿರ ನಡುರಸ್ತೆಯಲ್ಲೇ ಬಾರದ ಲೋಕಕ್ಕೆ ಹೋಗಿರುವುದು ತಾಯಿಗೆ ಆಕಾಶವೇ  ತಲೆ ಮೇಲೆ ಬಿದ್ದಂತಾಗಿದೆ.

ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಈ ಎರಡೂ ಕುಟುಂಬಗಳಿಗೆ ಭವಿಷ್ಯದ್ದೇ ಪ್ರಶ್ನೆಯಾಗಿದೆ. ಅಪಘಾತ ಇನ್ಶೂರೆನ್ಸ್ ಹಣದ ಮೇಲೆ ಈ ಕುಟುಂಬಗಳ ಬದುಕು ನಿಂತಿದೆ. ಈ ವಿಚಾರದಲ್ಲಿ ಸರ್ಕಾರ ಸ್ಪಂದಿಸಬೇಕಿದೆ. ಮಾಸ್ತಿಕಟ್ಟೆಯ ಯುವ ಮಿತ್ರರು ಸಂಘಟನೆ ಕಟ್ಟಿಕೊಂಡು ಈ ಕುಟುಂಬಗಳಿಗೆ ಆರ್ಥಿಕ ನೆರವು ದೊರಕಿಸಿಕೊಡಲು ಮುಂದಾಗಿದ್ದಾರೆ. ತಾಯಿ, ಅನಾಥ ಮಕ್ಕಳ ಬದುಕಿಗಾಗಿ ಸಾಂತ್ವನ, ಆಸರೆ, ಆಶ್ರಯ ಸಿಗಲಿ ಎಂಬುದು ಗ್ರಾಮಸ್ಥರ ಆಶಯವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು