ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನಂಜಾಪುರ: ಜಿಲ್ಲೆಯ ಮೊದಲ ಏರ್‌ಪೋರ್ಟ್

Last Updated 27 ಫೆಬ್ರುವರಿ 2023, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಸೋಗಾನೆಯ ವಿಮಾನ ನಿಲ್ದಾಣಕ್ಕೂ ಮೊದಲು ಶಿವಮೊಗ್ಗ ಜಿಲ್ಲೆಯಲ್ಲಿ 50 ವರ್ಷಗಳ ಹಿಂದೆಯೇ ಪುಟ್ಟ ವಿಮಾನ ನಿಲ್ದಾಣ (ಏರ್‌ಸ್ಟ್ರಿಪ್) ನಿರ್ಮಾಣವಾಗಿತ್ತು. 70ರ ದಶಕದಲ್ಲಿ ಭದ್ರಾವತಿ ತಾಲ್ಲೂಕಿನ ಹೊಸ ನಂಜಾಪುರ ಗ್ರಾಮದ ಬಳಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ 1 ಕಿ.ಮೀ ದೂರದ ಮಣ್ಣಿನ ರನ್‌ ವೇ ನಿರ್ಮಾಣ ಮಾಡಿತ್ತು.

ಅದು ವಿಐಎಸ್ಎಲ್‌ನ ವೈಭವದ ಕಾಲ. ದೇಶ, ವಿದೇಶದಿಂದ ವಿವಿಧ ಕಂಪನಿಗಳ ಮುಖ್ಯಸ್ಥರು, ತಂತ್ರಜ್ಞರು, ಎಂಜಿನಿಯರ್‌ಗಳು ಭದ್ರಾವತಿಗೆ ಬರುತ್ತಿದ್ದರು. ಅವರಿಗೆ ಅನುಕೂಲವಾಗಲಿ ಎಂದು ಸಣ್ಣ ರನ್ ವೇ, ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಇದೇ ರನ್ ವೇಗೆ ಜರ್ಮನಿಯಿಂದ ಎಂಜಿನಿಯರ್‌ ಹೂತ್ ಎಂಬುವವರು ತಮ್ಮ ಖಾಸಗಿ ವಿಮಾನದಲ್ಲಿ ಬರುತ್ತಿದ್ದರು.

‘1968ರಿಂದ 1975ರವರೆಗೆ ನಾನು ಭದ್ರಾವತಿಗೆ ವಿಮಾನ ಬರುತ್ತಿದ್ದದ್ದನ್ನು ನೋಡಿದ್ದೇನೆ. ಹೂತ್ ಕಾರ್ಖಾನೆಯ ಟೆಕ್ನಿಕಲ್ ಡೈರೆಕ್ಟರ್ ಆಗಿದ್ದರು. ಅವರು ಜರ್ಮನಿಯಿಂದ ನೇರವಾಗಿ ಭದ್ರಾವತಿಗೆ ವಿಮಾನದಲ್ಲಿ ಬರುತ್ತಿದ್ದರು. ಅಲ್ಲಲ್ಲಿ ಇಂಧನ ಭರ್ತಿ ಮಾಡಿಸಿಕೊಂಡು, ಊಟ, ತಿಂಡಿ ಮುಗಿಸಿಕೊಂಡು ಇಲ್ಲಿ ಬಂದು ವಿಮಾನ ಇಳಿಸುತ್ತಿದ್ದರು. ವಿಐಎಸ್ಎಲ್ ಎಂಜಿನಿಯರ್ ಆಗಿದ್ದ ನಜೀರ್ ಅಹಮದ್ ಅವರು ನನ್ನ ಮೇಲಾಧಿಕಾರಿ. ನಜೀರ್ ಅಹಮದ್ ಮತ್ತು ಹೂತ್ ಅವರು ನಿಟಕವರ್ತಿಗಳು. ಹೂತ್ ಅವರು ಬಂದಾಗಲೆಲ್ಲ ನಜೀರ್ ಅಹಮದ್ ಅವರು ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದರು’ ಎಂದು ಕಾರ್ಖಾನೆಯ ನಿವೃತ್ತ ಉದ್ಯೋಗಿ ಜಿ.ವಿ.ಸಂಗಮೇಶ್ವರ ನೆನಪಿಸಿಕೊಳ್ಳುತ್ತಾರೆ .

ಸೇಲ್ ಅಧಿಕಾರಿಗಳು ಬರುತ್ತಿದ್ದರು..

ವಿಐಎಸ್ಎಲ್ ಕಾರ್ಖಾನೆಯನ್ನು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (SAIL) ವಹಿಸಲಾಯಿತು. ಆಗ ಉಕ್ಕು ಪ್ರಾಧಿಕಾರದ ಅಧಿಕಾರಿಗಳು ವಿಮಾನದಲ್ಲಿ ಈ ರನ್ ವೇಗೆ ಬಂದಿಳಿಯುತ್ತಿದ್ದರು. ಹೊಸ ನಂಜಾಪುರ ಗ್ರಾಮದಲ್ಲಿ ಈ ವಿಮಾನಗಳು ಬಂದಿಳಿಯುತ್ತಿದ್ದದ್ದನ್ನು ಕಂಡ ಹಲವರು ಈಗಲೂ ಇದ್ದಾರೆ. ಶಿವಮೊಗ್ಗದ ಕಡೆಯಿಂದು ಲ್ಯಾಂಡ್ ಆಗುತ್ತಿದ್ದ ವಿಮಾನಗಳು, ಸರ್.ಎಂ.ವಿ. ವಿಜ್ಞಾನ ಕಾಲೇಜು ಕಟ್ಟಡದವರೆಗೂ ಹೋಗಿ ಬರುತ್ತಿದ್ದವು ಎಂದು ಸ್ಮರಿಸಿಕೊಳ್ಳುವ ಹಲವರಿದ್ದಾರೆ.

***

ವಿಮಾನ ನಿಲ್ದಾಣಕ್ಕೆ ಪರಿಶೀಲನೆ ನಡೆದಿತ್ತು

ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ಸಿದ್ಧವಾದಾಗ ಹೊಸ ನಂಜಾಪುರದ ರನ್ ವೇ ಪರಿಶೀಲನೆ ನಡೆಸಲಾಗಿತ್ತು. ಅಧಿಕಾರಿಗಳ ತಂಡ ಇಲ್ಲಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ವಿವಿಧ ಕಾರಣಕ್ಕೆ ಈ ಜಾಗ ಆಯ್ಕೆಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT