ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಮಾಂಚನಕಾರಿ ಹೋರಿ ಬೆದರಿಸುವ ಹಬ್ಬ

ಶಿಕಾರಿಪುರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ– ಹೋರಿ ಹಬ್ಬ
Last Updated 7 ನವೆಂಬರ್ 2021, 4:27 IST
ಅಕ್ಷರ ಗಾತ್ರ

ಶಿಕಾರಿಪುರ: ಬೆಳಕಿನ ಹಬ್ಬ ದೀಪಾವಳಿಯನ್ನು ಶುಕ್ರವಾರ ಪಟ್ಟಣದ ಜನರು ಗೋವಿಗೆ ವಿಶೇಷ ಪೂಜೆ ಸಲ್ಲಿಸಿ ಹಾಗೂ ಹೋರಿ ಬೆದರಿಸುವ ಮೂಲಕ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು.

ಹಿಂದೂ ಧರ್ಮದ ಸಂಪ್ರದಾಯದಂತೆ ದೊಡ್ಡ ಹಬ್ಬವಾಗಿರುವುದರಿಂದ, ತಮ್ಮ ಮನೆ ಬಾಗಿಲಿಗೆ ತಳಿರು ತೋರಣ, ಆಕಾಶಬುಟ್ಟಿ ಹಾಗೂ ಬಣ್ಣದ ದೀಪಗಳನ್ನು ಅಳವಡಿಸುವ ಮೂಲಕ ಮನೆಯನ್ನು ಆಕರ್ಷಕವಾಗಿ ಕಾಣುವಂತೆ ಸಿಂಗಾರಗೊಳಿಸಿದ್ದರು. ಗೋವುಗಳನ್ನು ಮನೆ ಒಳಗೆ ತಂದು ಪೂಜೆ ಸಲ್ಲಿಸಿದರು.

ಹಲವು ವರ್ಷಗಳ ಸಂಪ್ರದಾಯದಂತೆ ಪ್ರತಿ ಮನೆಯ ಜಗಲಿಯ ಮೇಲೆ ಗೋವಿನ ಸಗಣಿ ಇಟ್ಟು, ಸಗಣಿ ಮೇಲೆ ಚಂಡು ಹೂವು, ಅಡಿಕೆ ಇಂಗಾರ, ಉತ್ರಾಣಿ ಕಡ್ಡಿ, ಇಂಗ್ಲಿಚಿ ಕಾಯಿ ಸಂಗ್ರಹಿಸಿಟ್ಟು, ಅದರ ಮೇಲೆ ಬಿದಿರಿನ ಬುಟ್ಟಿ ಇಟ್ಟು ಹಟ್ಟಿ ಪೂಜೆ ಸಲ್ಲಿಸಿದರು. ಪುಟಾಣಿ ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ರೋಮಾಂಚನಕಾರಿ ಹೋರಿ ಹಬ್ಬಕ್ಕೆ ಚಾಲನೆ: ಹಲವು ವರ್ಷಗಳ ಸಂಪ್ರದಾಯದಂತೆ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಹೋರಿ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು. ಪಟ್ಟಣದ ದೊಡ್ಡಕೇರಿ ಹಾಗೂ ಸೊಪ್ಪಿನಕೇರಿ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋರಿ ಹಬ್ಬವು ವಿಜೃಂಭಣೆಯಿಂದ ನಡೆಯಿತು. ದೊಡ್ಡಕೇರಿಯಲ್ಲಿ ಗಿಡ್ಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೋರಿಹಬ್ಬಕ್ಕೆ ಚಾಲನೆ ನೀಡಲಾಯಿತು.

ರೈತ ಸಮುದಾಯದ ಹಬ್ಬ ಹಾಗೂ ಜನಪದ ಸಂಸ್ಕೃತಿಯ ಪ್ರತೀಕವಾದ ಹೋರಿ ಹಬ್ಬದಲ್ಲಿ ಸಾವಿರಾರು ಪ್ರೇಕ್ಷಕರು ಪಾಲ್ಗೊಂಡು ಮನರಂಜನೆ ಪಡೆದರು. ಹೋರಿ ಹಬ್ಬದಲ್ಲಿ ಪಾಲ್ಗೊಳ್ಳಲು ಹೋರಿ ಮಾಲೀಕರು ಕೊಬ್ಬರಿ ಮಾಲೆ, ಕಾಲ್ಗೆಜ್ಜೆ, ಬಲೂನ್ ಸೇರಿ ವಿವಿಧ ಅಲಂಕಾರಿಕಾ ವಸ್ತುಗಳಿಂದ ಹೋರಿಗಳನ್ನು ಸಿಂಗರಿಸಿದ್ದರು.

ಹೋರಿ ಹಬ್ಬದಲ್ಲಿ ಹೋರಿಗಳು ಪಾಲ್ಗೊಂಡ ಸಂದರ್ಭದಲ್ಲಿ ಯುವಕರು ತಮ್ಮ ಹೋರಿಯ ಹೆಸರುಗಳನ್ನು ಹೊಂದಿದ್ದ ಧ್ವಜವನ್ನು ಹಾರಿಸುತ್ತಾ ಸಂಭ್ರಮದಿಂದ ಮುಂದೆ ಸಾಗುತ್ತಿದ್ದರು. ಕೆಲವು ಹೋರಿ ಮಾಲೀಕರು ತಮ್ಮ ಹೋರಿಗಳಿಗೆ ಪುಷ್ಪವನ್ನು ಹಾಕುವ ಮೂಲಕ ಸ್ವಾಗತ ಕೋರುತ್ತಿದ್ದ ದೃಶ್ಯ ಕಂಡು ಬಂದಿತು. ಹಿರಿಯರು, ಯುವಕರು ಹಾಗೂ ಪುಟಾಣಿ ಮಕ್ಕಳು ಹೋರಿಹಬ್ಬವನ್ನು ಕುತೂಹಲದಿಂದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT