ಗುರುವಾರ , ಜನವರಿ 20, 2022
15 °C
ತಾಳಗುಪ್ಪದಲ್ಲಿ ವಿವಿಧ ಸಂಘಟನೆಗಳ ಮುಖಂಡರಿಂದ ಪ್ರತಿಭಟನೆ

ತಾಳಗುಪ್ಪ-ಭಟ್ಕಳ ರೈಲ್ವೆ ಮಾರ್ಗಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಶಿವಮೊಗ್ಗ- ತಾಳಗುಪ್ಪ ನಡುವಿನ ರೈಲ್ವೆ ಮಾರ್ಗವನ್ನು ಕೊಂಕಣ ರೈಲ್ವೆ ಮಾರ್ಗಕ್ಕೆ ಸೇರಿಸಬೇಕು ಎಂಬ ಒತ್ತಾಯ ದೀರ್ಘಕಾಲದಿಂದ ಕೇಳಿಬರುತ್ತಿದೆ. ತಾಳಗುಪ್ಪ-ಭಟ್ಕಳ ರೈಲ್ವೆ ಮಾರ್ಗ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಗೂರ್ಲಕೆರೆ ಒತ್ತಾಯಿಸಿದ್ದಾರೆ.

ತಾಲ್ಲೂಕಿನ ತಾಳಗುಪ್ಪ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖರು ತಾಳಗುಪ್ಪಕ್ಕೆ ರೈಲ್ವೆ ಸೇವೆ ಆರಂಭಗೊಂಡು 80 ವರ್ಷಗಳು ಸಂದಿರುವುದರಿಂದ ಗುರುವಾರ ಸಂಭ್ರಮ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೊಂಕಣ ರೈಲ್ವೆಗೆ ಸೇರಿಸುವ ಸಂಬಂಧ ಸಮೀಕ್ಷೆ ನಡೆದು ದಶಕಗಳೇ ಕಳೆದಿವೆ. ಆದಾಗ್ಯೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗದಿರುವುದು ಬೇಸರದ ಸಂಗತಿಯಾಗಿದೆ. ರಾಜಮಹಾರಾಜರಿಗೆ ಇದ್ದ ದೂರದೃಷ್ಟಿ ಈಗಿನ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ ಎಂದು ಅವರು ಟೀಕಿಸಿದರು.

ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೊಂಕಣ ರೈಲ್ವೆಗೆ ಸೇರಿಸಿದರೆ ಈ ಭಾಗದ ಸಂಚಾರದ ವಿಷಯದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ತನ್ಮೂಲಕ ವ್ಯಾಪಾರ, ಉದ್ದಿಮೆಗಳಲ್ಲೂ ಅಭಿವೃದ್ಧಿ ಕಾಣಲು
ಸಾಧ್ಯವಿದೆ. ಈಗಲಾದರೂ ಜನಪ್ರತಿನಿಧಿಗಳು ಈ ವಿಷಯದಲ್ಲಿ ಆಸಕ್ತಿ ತೋರಬೇಕು ಎಂದು ಅವರು ಒತ್ತಾಯಿಸಿದರು.

ರೈಲ್ವೆ ಹೋರಾಟ ಸಮಿತಿಯ ಮೂಗಿಮನೆ ಗಣಪತಿ ಹೆಗಡೆ, ‘ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಸಂದರ್ಭದಲ್ಲಿ ಇಲ್ಲಿಗೆ ರೈಲ್ವೆ ಸಂಚಾರ ಆರಂಭವಾಗಿತ್ತು. ಇಂದಿಗೂ ಆರ್ಥಿಕವಾಗಿ ಹಿಂದುಳಿದವರು ಕಡಿಮೆ ವೆಚ್ಚದಲ್ಲಿ ರೈಲಿನ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಕೊಂಕಣ ರೈಲ್ವೆಗೆ ಇಲ್ಲಿನ ಮಾರ್ಗ ಸೇರ್ಪಡೆಯಾದರೆ ಮಲೆನಾಡಿನ ಅಭಿವೃದ್ಧಿಯ ಚಿತ್ರಣ ಬದಲಾಗಲಿದೆ’ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಿನಾರಾಯಣ, ಸದಸ್ಯ ಉದಯಗೌಡ, ಮೆಡಿಕಲ್ ರಾಮಣ್ಣ, ನಾಗರಾಜ್, ಆಟೊ ಚಾಲಕರ ಸಂಘದ ಅಧ್ಯಕ್ಷ ಮಾದೇವ, ಗಣೇಶ್ ಮರತ್ತೂರು, ಅಸಳ್ಳೆ ಚಂದ್ರು, ಪಾಂಡುರಂಗ, ಗಣಪತಿ ಹೆಗಡೆ, ಹೋಟೆಲ್ ಗುರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು