ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಧಿಕಾರಿ ಆತ್ಮಹತ್ಯೆ | ಸಚಿವ ಸ್ಥಾನಕ್ಕೆ ಮಹಾದೇವಪ್ಪ ರಾಜೀನಾಮೆ ನೀಡಲಿ: ಚನ್ನಬಸಪ್ಪ

Published 27 ಮೇ 2024, 14:29 IST
Last Updated 27 ಮೇ 2024, 14:29 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಬೆಂಗಳೂರಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣದ ನೈತಿಕ ಹೊಣೆಹೊತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಶಾಸಕ ಎಸ್‌.ಎನ್.ಚನ್ನಬಸಪ್ಪ ಹೇಳಿದರು. 

‘ಆತ್ಮಹತ್ಯೆಗೂ ಮುನ್ನ ಚಂದ್ರಶೇಖರ್‌ ಅವರು ಮೂವರು ಅಧಿಕಾರಿಗಳು ನನ್ನ ಸಾವಿಗೆ ಕಾರಣರಾಗಿದ್ದಾರೆ ಎಂದು ಡೆತ್‌ನೋಟ್‌ ಬರೆದಿದ್ದಾರೆ. ಈ ಮೂವರ ಮೇಲೆ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಅಧಿಕಾರಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ತಿಳಿಸಿದರು. 

‘ಡೆತ್‌ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶದ ಕೋರಿಕೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿ ನಮೂದಿಸಿದ್ದಾರೆ. ಆ ಸಚಿವರು ಮಹಾದೇವಪ್ಪ ಅವರು ಆಗಿರಬಹುದು. ಅವರೇ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾರೆ ಅಲ್ಲವೇ? ಅಗತ್ಯವಿದ್ದರೆ ಸಚಿವರ ಮೇಲೂ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು. 

‘ದೊಡ್ಡ ಮಟ್ಟದಲ್ಲಿ ಹಗರಣ ನಡೆದಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡಲೇ ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಮುಂದಾಗಬೇಕು. ಸರ್ಕಾರ ನಿರ್ಲಕ್ಷ್ಯ ಮಾಡಿದರೇ ರಾಜ್ಯಪಾಲರನ್ನು ಭೇಟಿಯಾಗಿ ಅವರಿಗೆ ಮನವಿ ಸಲ್ಲಿಸುವ ಕುರಿತು ಚಿಂತನೆ ನಡೆದಿದೆ’ ಎಂದು ಹೇಳಿದರು. 

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಾಮಾಣಿಕ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ. ಅವರ ಮೇಲೆ ಒತ್ತಡ ಹೇರಲಾಗಿದೆ. ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾರೆ. ಸರ್ಕಾರ ಸತ್ತು ಹೋಗಿದೆ’ ಎಂದು ಕಿಡಿಕಾರಿದರು. 

‘ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಪುಡಾರಿಗಳು ಎಲ್ಲೆಂದರಲ್ಲಿ ನಡು ರಸ್ತೆಯಲ್ಲಿ ಲಾಂಗ್‌ ಹಿಡಿದುಕೊಂಡು ಓಡಾಡುತ್ತಾರೆ. ಇತ್ತ ಅಧಿಕಾರಿಗಳು ಕೂಡ ನೇಣಿಗೆ ಶರಣಾಗುತ್ತಿದ್ದಾರೆ. ಇದೊಂದು ಕೊಲೆಗುಡಕ ಸರ್ಕಾರವಗಿದೆ’ ಎಂದು ಆರೋಪಿಸಿದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ, ಕೆ.ವಿ.ಅಣ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT