ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರು ಕ್ಷೇತ್ರದಲ್ಲಿ ಪ್ರಬಲರಿಗಿಲ್ಲ ಸ್ಪರ್ಧೆ ಅವಕಾಶ

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮೀಸಲಾತಿ ನಿಗದಿ: ಮೂರು ಪಕ್ಷಗಳ ಆಕಾಂಕ್ಷಿಗಳಿಗೂ ನಿರಾಸೆ
Last Updated 4 ಜುಲೈ 2021, 6:52 IST
ಅಕ್ಷರ ಗಾತ್ರ

ಶಿವಮೊಗ್ಗ: ಪುನರ್‌ವಿಂಗಡಣೆಯಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ನಿಗದಿಪಡಿಸಿರುವರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲು ಬದಲಿಸಿ ಕರಡು ಅಧಿಸೂಚನೆ ಪ್ರಕಟಿಸಿದ್ದು, ಇದರಿಂದ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುವ ಅವಕಾಶ ಕೈ ತಪ್ಪಲಿದೆ.

ಮೀಸಲಾತಿ ಬದಲಾವಣೆಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಎಸ್‌.ಕುಮಾರ್, ಮಾಜಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್, ಕಲಗೋಡು ರತ್ನಾಕರ್ ಅವರು ತಮ್ಮ ಕ್ಷೇತ್ರ ಬಿಟ್ಟು ವೇರೆಯ ಕ್ಷೇತ್ರದಿಂದ ಸ್ಪರ್ಧಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಜ್ಯೋತಿ ಎಸ್‌.ಕುಮಾರ್ ಅವರು ಸ್ಪರ್ಧೆ ಮಾಡಿದ್ದ ಭದ್ರಾವತಿ ತಾಲ್ಲೂಕು ಹಿರಿಯೂರು ಕ್ಷೇತ್ರವೂ ಈ ಬಾರಿ ಎಸ್ಸಿ ಮಹಿಳೆಯ ಪಾಲಾಗಿದೆ. ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಹಸೂಡಿ ಕ್ಷೇತ್ರವೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್‌ ಅವರು ಸ್ಪರ್ಧೆ ಮಾಡಿದ್ದ ಹೊಳಲೂರು ಕ್ಷೇತ್ರ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಹೊಸನಗರ ಕ್ಷೇತ್ರವು ವಿಲೀನಗೊಂಡಿರುವುದರಿಂದ ಕಾಂಗ್ರೆಸ್‌ನ ಪ್ರಬಲ ಸ್ಪರ್ಧಿ
ಯಾಗಿರುವ ಕಲಗೋಡು ರತ್ನಾಕರ್ ಅವರಿಗೆ ಕ್ಷೇತ್ರ ಬಸಲಿಸುವ ಸವಾಲು ಎದುರಾಗಿದೆ. ಇನ್ನು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿರುವ ಕಾರಣ ಕಳೆದ ಬಾರಿ ಹೊಳೆಹೊನ್ನೂರು ಕ್ಷೇತ್ರದಲ್ಲಿ ಹೆಚ್ಚು ಮತಗಳಿಂದ ಜಯಗಳಿದ್ದ ರೇಖಾ ಉಮೇಶ್ ಅವರು ತನ್ನ ಕ್ಷೇತ್ರವನ್ನು ಕಳೆದುಕೊಳ್ಳುವಂತಾಗಿದೆ.

ತಾ.ಪಂಗೂ ತಟ್ಟಿದ ಮೀಸಲಾತಿ ಬಿಸಿ:ಈ ಹಿಂದೆ 19 ಸದಸ್ಯ ಬಲದ ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 15 ಸದಸ್ಯ ಬಲಕ್ಕೆ ಕುಸಿದಿದೆ. ನಾಲ್ಕು ಕ್ಷೇತ್ರಗಳು ಪಕ್ಕದ ಕ್ಷೇತ್ರಗಳೊಂದಿಗೆ ವಿಲೀನಗೊಂಡಿದೆ. ಇದೀಗ ಕ್ಷೇತ್ರ ಮೀಸಲಾತಿ ಕರಡು ಪಟ್ಟಿ ಪ್ರಕಾರ ಹಲವು ಮಾಜಿ ಸದಸ್ಯರು ಮರು ಸ್ಪರ್ಧೆ ಅವಕಾಶ ಕಳೆದುಕೊಂಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ನಿರ್ಮಲಾ ಮೋಹನ್‍ಕುಮಾರ್ ಗಾಜನೂರು ಸಾಮಾನ್ಯ ಮಹಿಳೆ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈಗ ಗಾಜನೂರು ಕ್ಷೇತ್ರ ಬಿಸಿಎಂಎ ಅಭ್ಯರ್ಥಿಗೆ ಮೀಸಲಾಗಿರುವುದರಿಂದ ಅವರು ಮತ್ತೊಮ್ಮೆ ಕಣಕ್ಕಿಳಿಯುವ ಅವಕಾಶ ಕಳೆದುಕೊಂಡಿದ್ದಾರೆ.

ಹಿಂದಿನ ಅವಧಿಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಮೂವರು ಅದೇ ಕ್ಷೇತ್ರದಿಂದ ಕಣಕ್ಕಿಳಿಯುವ ಅವಕಾಶದಿಂದ ವಂಚಿತರಾಗಿದ್ದಾರೆ. ಮೀಸಲಾತಿ ಬದಲಾಗಿರುವುದು ಮೂವರಿಗೂ ತೊಡಕಾಗಿದೆ. ಹೀಗಾಗಿ ಮಹೇಶ್, ಮುನಿರತ್ನಹಾಗೂ ಕೆ.ಜಿ.ಶ್ರೀಧರ್ ಬೇರೆ ಕ್ಷೇತ್ರದತ್ತ ಮುಖ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT