ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭತ್ತ ಖರೀದಿ: ರೈತರ ನಡುವೆ ಸರ್ಕಾರದ ತಾರತಮ್ಯ!

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಬೆಳೆಗಾರರಿಗೆ ಮಾತ್ರ ಪ್ರೋತ್ಸಾಹಧನ
Last Updated 23 ನವೆಂಬರ್ 2022, 20:24 IST
ಅಕ್ಷರ ಗಾತ್ರ

ಶಿವಮೊಗ್ಗ: ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಭತ್ತ ಖರೀದಿಸುವ ವೇಳೆ ರಾಜ್ಯದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ರೈತರಿಗೆ ಮಾತ್ರ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್‌ಗೆ ₹ 500 ಪ್ರೋತ್ಸಾಹ ಧನ (ಎಕ್ಸ್‌ಗ್ರೇಷಿಯಾ) ನಿಗದಿ ಮಾಡಿದೆ. ಇದು ಉಳಿದ ಜಿಲ್ಲೆಗಳ ಭತ್ತ ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆ ಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತಿತರ ತಳಿಯ ಭತ್ತ
ಖರೀದಿಸಲಾಗುತ್ತಿದ್ದು, ನವೆಂಬರ್ 21ರಿಂದ ರೈತರ ನೋಂದಣಿ ಆರಂಭ ವಾಗಿದೆ.

ಹೀಗೆ ಖರೀದಿಸಲಾಗುವ ಭತ್ತಕ್ಕೆ (ಸಾಮಾನ್ಯ) ಪ್ರತಿ ಕ್ವಿಂಟಲ್‌ಗೆ ₹ 2,040 ಹಾಗೂ ಗ್ರೇಡ್ ‘ಎ’ ಭತ್ತಕ್ಕೆ ₹ 2,060 ಬೆಂಬಲಬೆಲೆ ನಿಗದಿಪಡಿಸಲಾ ಗಿದೆ. ಪ್ರತಿ ರೈತರಿಂದ ಎಕರೆಗೆ 16 ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್‌ಗೆ ಮಿತಿಗೊಳಿಸಿ ಖರೀದಿ ನಡೆಯುತ್ತಿದೆ. ಹೀಗೆ ಖರೀದಿ ಆದ ಪ್ರತಿ ಕ್ವಿಂಟಲ್‌ ಭತ್ತಕ್ಕೆ ಹೆಚ್ಚುವರಿಯಾಗಿ ₹ 500 ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ.

₹100 ಕೋಟಿ ಬಿಡುಗಡೆ: ಕರಾವಳಿಯ ಮೂರು ಜಿಲ್ಲೆಗಳ ರೈತರಿಗೆ ಪ್ರೋತ್ಸಾಹ ಧನ ನೀಡಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಪರಿಗಣಿಸಿ, ಆಹಾರ ಇಲಾಖೆ ಸಲ್ಲಿಸಿದ್ದ ಬೇಡಿಕೆ ಆಧರಿಸಿ ಹಣಕಾಸು ಸಚಿವಾಲಯ ₹ 100 ಕೋಟಿ ಬಿಡುಗಡೆ ಮಾಡಿದೆ.

‘ಕುಚಲಕ್ಕಿಯ ಜ್ಯೋತಿ ಮತ್ತಿತರ ತಳಿಯ ಭತ್ತವನ್ನು ಶಿವಮೊಗ್ಗ,ಚಿಕ್ಕಮಗಳೂರು ಮಾತ್ರವಲ್ಲದೇ ಹಾವೇರಿ, ಬೆಳಗಾವಿ, ಮೈಸೂರು ಹಾಗೂ ಚಾಮರಾಜ ನಗರ ಜಿಲ್ಲೆಗಳಲ್ಲೂ ಬೆಳೆಯಲಾಗುತ್ತದೆ. ಪ್ರೋತ್ಸಾಹ
ಧನವನ್ನು ಮೂರು ಜಿಲ್ಲೆಗಳಿಗೆ ಸೀಮಿತ ಗೊಳಿಸಿರುವುದು ಸರಿಯಲ್ಲ’ ಎಂದು ಭದ್ರಾವತಿ ತಾಲ್ಲೂಕು ಹನುಮಂತಾ ಪುರದ ರೈತ ಎಂ.ಪಿ.ಸುಮಂತ್ಹೇಳುತ್ತಾರೆ.

‘ಕೇರಳ ಮಾದರಿ ಅನುಸರಿಸಲಿ’

‘ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರೈತರಲ್ಲಿ ತಾರತಮ್ಯ ಮಾಡಲಾಗಿದೆ. ಕರಾವಳಿ ಕರ್ನಾಟಕದವರು ಮಾತ್ರ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿಲ್ಲ. ಮೂರು ಜಿಲ್ಲೆಗಳಿಗೆ ಮಾತ್ರ ಪ್ರೋತ್ಸಾಹಧನ ಕೊಟ್ಟಿರುವುದು ಉಳಿದವರಿಗೆ ಮಾಡಿದ ದೊಡ್ಡ ದ್ರೋಹ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್‌. ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇರಳದ ಎಲ್ಲ ಭತ್ತ ಬೆಳೆಗಾರರಿಗೂ ಪ್ರತಿ ಕ್ವಿಂಟಲ್‌ಗೆ ₹ 500 ಪ್ರೋತ್ಸಾಹಧನ ನೀಡಲಾಗುತ್ತಿದೆ. ಅದೇ ಮಾದರಿಯನ್ನು ಕರ್ನಾಟಕದಲ್ಲೂ ಅನುಸರಿಸಲಿ. ಕರಾವಳಿ ಹೊರತಾಗಿ ರಾಜ್ಯದ ಉಳಿದ ಭಾಗದಲ್ಲಿ ಬೆಳೆಯಲಾಗುವ ಭತ್ತವನ್ನೂ ಪಡಿತರ ವ್ಯವಸ್ಥೆಯಡಿ ವಿತರಿಸಲಾಗುತ್ತದೆ. ಅದರಲ್ಲಿ ಏನೂ ವ್ಯತ್ಯಾಸವಿಲ್ಲ’ ಎಂದು ಅವರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT