ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವಿಷಬೀಜ ಬಿತ್ತುತ್ತಿರುವ ಸಿದ್ದರಾಮಯ್ಯ

ಬಿಜೆಪಿ ಪೇಜ್ ಪ್ರಮುಖರ ಸಭೆಯ ಸಿ.ಟಿ. ರವಿ ಆರೋಪ
Last Updated 7 ಫೆಬ್ರುವರಿ 2023, 5:06 IST
ಅಕ್ಷರ ಗಾತ್ರ

ಸೊರಬ: ‘ವೀರಶೈವ ಲಿಂಗಾಯತರನ್ನು ಒಡೆಯಲು ಪ್ತಯತ್ನಿಸಿದ್ದ ಸಿದ್ದರಾಮಯ್ಯ, ಜಾತಿ ವಿಷಬೀಜ ಬಿತ್ತುತ್ತಿದ್ದಾರೆ. ರಾಜ್ಯದಲ್ಲಿ 29 ಜನ ಹಿಂದೂ ಕಾರ್ಯಕರ್ತರ ಹತ್ಯೆಯಾಗಿರುವ ಬಗ್ಗೆ ಅವರು ಮಾತನಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಯಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲ್ಲೂಕು ಬಿಜೆಪಿ ಪೇಜ್ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ‘ಮತಕ್ಕಿಂತ ಸಿದ್ಧಾಂತ, ದೇಶ ದೊಡ್ಡದು. ಸರ್ವರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೊಳಿಸಿದ್ದು, ಇದರ ಲಾಭ ಪಡೆದಿರುವ ಶೇ 70ರಷ್ಟು ಫಲಾನುಭವಿಗಳು ಬಿಜೆಪಿ ಬೆಂಬಲಿಸಬೇಕು’ ಎಂದು ಕೋರಿದರು.

‘70 ವರ್ಷಗಳ ಇತಿಹಾಸದಲ್ಲಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸದ ಕಾಂಗ್ರೆಸ್ ನಾಯಕರು ಭಾರತವನ್ನು ಹಾವಾಡಿಗರ, ಸಾಲಗಾರರ ಹಾಗೂ ಸುಳ್ಳುಗಾರರ ದೇಶ ಎಂಬ ಅಪಕೀರ್ತಿಗೆ ಈಡು ಮಾಡಿದ್ದರು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನಕುಮಾರ್ ಕಟೀಲ್ ದೂರಿದರು.

‘ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಮುಸ್ಲಿಮರ ವಿರೋಧವಿಲ್ಲ. ಆದರೆ, ಕಾಂಗ್ರೆಸ್ ವಿರೋಧವಿದೆ. ಪ್ರಧಾನಿ ಮೋದಿ ನಾಯಕತ್ವವನ್ನು ವಿಶ್ವವೇ ಮೆಚ್ಚಿದೆ. ಗಡಿ ವಿವಾದ, ಜಮ್ಮು ಕಾಶ್ಮೀರ ಸಮಸ್ಯೆ ನಿವಾರಣೆ, ಶ್ರೀಲಂಕಾದಿಂದ 3,000 ಮಿನುಗಾರರ ಬಿಡುಗಡೆಯಂಥ ಕೆಲಸ ಮಾಡಿದ್ದಾರೆ. ನಿಜವಾದ ಭಾರತ್ ಜೋಡೊ ಮಾಡುತ್ತಿರುವುದು ಮೋದಿಯೇ ಹೊರತು ರಾಹುಲ್ ಗಾಂಧಿ ಅಲ್ಲ’ ಎಂದು ಅವರು ಹೇಳಿದರು.

‘ಕೊರೊನಾ ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗುವುದಿಲ್ಲ ಎಂದು ಸಿದ್ದರಾಮಯ್ಯ ಜನರಿಗೆ ತಪ್ಪು ಮಾಹಿತಿ ನೀಡಿದ್ದರು. ಆದರೂ ಕಾಂಗ್ರೆಸ್ ನಾಯಕರು ಕೊರೊನಾಕ್ಕೆ ಹೆದರಿ ಲಸಿಕೆ ಹಾಕಿಸಿಕೊಂಡರು. ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಮಾತು ಕೇಳಿ ರಾಹುಲ್ ಗಾಂಧಿ ಮದುವೆ ಆಗುತ್ತಿಲ್ಲ’ ಎಂದು ಅವರು ವ್ಯಂಗ್ಯವಾಡಿದರು.

ಶಾಸಕ ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಪುರಸಭೆ ಅಧ್ಯಕ್ಷ ಈರೇಶ್ ಮೇಸ್ತ್ರಿ, ಎಂ.ಡಿ.ಉಮೇಶ್, ಶಿವಕುಮಾರ್ ಕಡಸೂರು, ಟಿ.ಆರ್.ಸುರೇಶ್, ಶ್ರೀನಿವಾಸ್, ಆರ್.ಡಿ.ಹೆಗಡೆ, ಎನ್.ಡಿ.ಸತೀಶ್
ಇದ್ದರು.

***

ಮೋದಿ ಆದರ್ಶ ಕಾರ್ಯಕರ್ತರಿಗೆ, ಯುವಕರಿಗೆ ಮಾದರಿಯಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಬಲಿದಾನಗೊಂಡ ರಾಷ್ಟ್ರ ನಾಯಕರನ್ನು ಬಿಜೆಪಿ ಗೌರವದಿಂದ ಕಂಡಿದೆ.

ಬಿ.ವೈ.ರಾಘವೇಂದ್ರ, ಸಂಸದ

***

ಜನರನ್ನು ಕೇವಲ ಮತ ಪಡೆಯಲು ಬಳಸಿಕೊಳ್ಳದೆ ಅವರ ಕಷ್ಟಸುಖಗಳ ಬಗ್ಗೆ ನಿಗಾ ವಹಿಸಬೇಕು. ರಾಜಕಾರಣದಲ್ಲಿರುವ ಯಾವುದೇ ವ್ಯಕ್ತಿ ಪಕ್ಷಗಳನ್ನು ಕುಟುಂಬದಂತೆ ಪ್ರೀತಿಸಬೇಕು.

ಕುಮಾರ್ ಬಂಗಾರಪ್ಪ, ಶಾಸಕ

***

ದತ್ತಾತ್ರೇಯ ಹೊಸಬಾಳೆ ಮನೆಗೆ ಭೇಟಿ

ಸಮಾವೇಶ ಮುಗಿಯುತ್ತಿದ್ದಂತೆಯೇ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್, ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಅವರ ಮನೆಗೆ ಭೇಟಿ ನೀಡಿ ಅವರ ಸಹೋದರ, ಸಹಕಾರಿ ಧುರೀಣ ಎಚ್.ಎಸ್.ಮಂಜಪ್ಪ ಜೊತೆ ಮಾತನಾಡಿದರು.

ಆದರೆ ಬೆಳಿಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಸಮಾವೇಶ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಯಿತು. ಶಾಸಕ ಕುಮಾರ್‌ ಬಂಗಾರಪ್ಪ ಹಾಗೂ ನಮೋ ವೇದಿಕೆ ಮುಖಂಡರ ನಡುವೆ ರಾಜಿಸಂಧಾನ ನಡೆಸಲು ಮುಂದಾದ ಕಾರಣ ಸಮಾವೇಶ ಸಮಾವೇಶ ವಿಳಂಬವಾಗಿ ಆರಂಭವಾಯಿತು ಎಂಬ ಮಾತು ಕೇಳಿ ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT