ಶನಿವಾರ, ಮೇ 28, 2022
25 °C
ಕಾರ್ಮಿಕ ಇಲಾಖೆ ತಿದ್ದುಪಡಿ ಆದೇಶ ಉಲ್ಲಂಘನೆ ಆರೋಪ

ಶಿವಮೊಗ್ಗ | ಪ್ಯಾಕೇಜಿಂಗ್ ಸಂಸ್ಥೆ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮಂಡ್ಲಿಯಲ್ಲಿರುವ ಪೇಪರ್ ಪ್ಯಾಕೇಜಿಂಗ್ ಸಂಸ್ಥೆಯ ಆಡಳಿತ ವರ್ಗ ಕಾರ್ಮಿಕರ ಜತೆ ಅನುಚಿತವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರ ಸಂಘದ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪೇಪರ್ ಪ್ಯಾಕೇಜ್ ಖಾಸಗಿ ಸಂಸ್ಥೆಯ ಆಡಳಿತ ವರ್ಗ ಕಾರ್ಮಿಕರ ನಿವೃತ್ತಿ ವಯಸ್ಸು 60 ವರ್ಷಕ್ಕೆ ಹೆಚ್ಚಿಸಿಲ್ಲ. ಹೈಕೋರ್ಟ್‌ ತೀರ್ಪು, ಕಾರ್ಮಿಕ ಇಲಾಖೆ ತಿದ್ದುಪಡಿ ಆದೇಶ ಉಲ್ಲಂಘಿಸಿದೆ. ಹಿರಿಯ ಕಾರ್ಮಿಕರನ್ನು ಅವೈಜ್ಞಾನಿಕವಾಗಿ ಸೇವೆಯಿಂದ ವಜಾಗೊಳಿಸಿದೆ. ಸ್ಥಳೀಯ ಕಾರ್ಮಿಕರ ಬದಲಾಗಿ ಹೊರ ರಾಜ್ಯಗಳ ಕಾರ್ಮಿಕರನ್ನು ನೇಮಿಸಿಕೊಂಡು ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಆಡಳಿತ ವರ್ಗದ ಕೆಲವು ಅಧಿಕಾರಿಗಳು ಕಾರ್ಮಿಕರಿಗೆ 5 ವರ್ಷಗಳ ವಿಚಾರಣೆ ಎಂದು ನೋಟಿಸ್ ನೀಡಿ, 35 ವರ್ಷಗಳಿಂದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಕಾರ್ಮಿಕರನ್ನು ವಜಾಗೊಳಿಸಿದ್ದಾರೆ. ಕಾರ್ಮಿಕ ಅಧಿಕಾರಿಗಳ ಆದೇಶಕ್ಕೂ ಬೆಲೆ ಕೊಡದೆ ಸ್ಥಳೀಯ ಕಾರ್ಮಿಕರಿಗೆ ಕೆಲಸವನ್ನೂ ನೀಡದೆ, ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನೂ ನೀಡದೆ ವಂಚಿಸುತ್ತಿದೆ ಎಂದು ದೂರಿದರು.

ವಜಾಗೊಳಿಸಿದ ಕಾರ್ಮಿಕರನ್ನು ಮತ್ತೆ ಸೇವೆಯಲ್ಲಿ ಮುಂದುವರಿಸಲು ಆದೇಶಿಸಬೇಕು. ಅವರಿಗೆ ಸಿಗಬೇಕಾದ ಸಂಪೂರ್ಣ ಸೌಲಭ್ಯಗಳನ್ನು ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ರಿಯಾಜ್ ಅಹಮದ್‌, ತಿಮ್ಮಾ ರೆಡ್ಡಿ, ಅಲ್ತಾಫ್ ಅಹಮದ್, ಬಿ.ಎಂ. ಪುಟ್ಟಪ್ಪ, ಸೈಯದ್ ಬಶೀರ್, ಹನುಮಂತಪ್ಪ, ಮೊಹಮದ್‌ ಅಯೂಬ್, ಜಾವೀದ್, ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.