ಭಾನುವಾರ, ಅಕ್ಟೋಬರ್ 17, 2021
23 °C
ಜೆ.ಎಚ್.ಪಟೇಲ್ ಜಯಂತಿಯಲ್ಲಿ ಬಲ್ಕೀಷ್ ಬಾನು

ಮೌಲ್ಯ ರಾಜಕಾರಣದ ಕನಸುಗಾರ ಪಟೇಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭದ್ರಾವತಿ: ರಾಜಕಾರಣದಲ್ಲಿ ಮೌಲ್ಯವನ್ನು ಕಾಪಾಡಿಕೊಂಡು ಸ್ವಚ್ಛ ರಾಜಕಾರಣ ಮಾಡಬೇಕು ಎಂಬ ಕನಸು ಹೊತ್ತು ಕೆಲಸ ಮಾಡಿದವರು ಜೆ.ಎಚ್. ಪಟೇಲ್ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಷ್ ಬಾನು ಹೇಳಿದರು.

ಇಲ್ಲಿನ ಜೆ.ಎಚ್. ಪಟೇಲ್ ಅಭಿಮಾನಿಗಳ ಬಳಗದಿಂದ ಭಾನುವಾರ ನಡೆದ ಪಟೇಲ್‌ ಅವರ 91ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅವರ ಒಡನಾಟದಲ್ಲಿ ನೈಜವಾಗಿ ಸಾಮಾಜಿಕ ಸಾಮರಸ್ಯದೊಂದಿಗೆ ಎಲ್ಲರನ್ನೂ ಒಟ್ಟು ಮಾಡಿಕೊಂಡು ಸಂಘಟನೆ ಹೇಗೆ ಮಾಡಬಹುದು ಎಂಬುದನ್ನು ಕಲಿತೆವು. ಇದಕ್ಕೆ ಅವರೇ ಪ್ರೇರಣೆ. ಪಟೇಲರು ರಾಜ್ಯದ ಅನೇಕ ಕಡೆ ಜಾತಿ ಲೆಕ್ಕಾಚಾರ ಬದಿಗಿಟ್ಟು ಹಿಂದುಳಿದ, ದಲಿತ ಸಮುದಾಯದ ನಾಯಕರನ್ನು ಗುರುತಿಸಿ ರಾಜಕೀಯ ಶಕ್ತಿಯನ್ನು ಕೊಟ್ಟ ಮಹಾನ್ ನಾಯಕ. ಅವರು ಎಂದೂ ಕುಟುಂಬ ರಾಜಕಾರಣ ಮಾಡಲಿಲ್ಲ’ ಎಂದು ಹೇಳಿದರು.

ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಮಹಿಮ ಪಟೇಲ್, ‘ತಂದೆಯವರು ನಮಗೆ ಕಲಿಸಿಕೊಟ್ಟ ಶಿಸ್ತುಬದ್ಧ ಸಮಾಜವಾದಿ ಚಿಂತನೆಯಡಿ ಪಕ್ಷ ಸಂಘಟನೆ ನಡೆಸಿದ್ದು, ಅದಕ್ಕೆ ತಕ್ಕಂತೆ ನಮ್ಮ ಬದುಕು ನಡೆದಿದೆ. ಈಗ ರಾಜಕಾರಣ ರಿಯಲ್ ಎಸ್ಟೇಟ್ ಉದ್ದಿಮೆದಾರರ ಹಿಡಿತಕ್ಕೆ ಸಿಕ್ಕು ನಲುಗಿದೆ’ ಎಂದು ವಿಷಾದಿಸಿದರು.

ಶಶಿಭೂಷಣ ಹೆಗ್ಗಡೆ ಮಾತನಾಡಿದರು.

ಪಟೇಲ್ ಕುರಿತು ಡಾ.ಬಿ.ಜಿ. ಧನಂಜಯ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಯೋಗೀಶ್, ಎಂ.ಎಸ್. ಜನಾರ್ದನ ಅಯ್ಯಂಗಾರ್, ಮಂಗೋಟೆ ರುದ್ರೇಶ್, ಬಿ.ಕೆ. ಜಗನ್ನಾಥ, ಸಿ.ಎಂ.ಖಾದರ್, ನಗರಸಭಾ ಸದಸ್ಯ ಮೋಹನಕುಮಾರ್, ಸಂಜೀವಕುಮಾರ್, ವಿನಯ್ ರಾಜಾವತ್, ಶಿವಬಸಪ್ಪ, ಎನ್. ಮಂಜುನಾಥ ಇದ್ದರು. ಬಾಬು ದೀಪಕ್ ಕುಮಾರ್ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.