ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಆಧಾರ್ ತಿದ್ದುಪಡಿಗೆ ಒಂದೇ ಕೇಂದ್ರ; ದೀರ್ಘ ಸರತಿ ಸಾಲು, ಜನರು ಹೈರಾಣ

Published 21 ಡಿಸೆಂಬರ್ 2023, 6:41 IST
Last Updated 21 ಡಿಸೆಂಬರ್ 2023, 6:41 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ತಿದ್ದುಪಡಿ ಕಡ್ಡಾಯವಾಗಿದೆ. ಆದರೆ ಸಾರ್ವಜನಿಕರು ನಿತ್ಯವೂ ಆಧಾರ್‌ ತಿದ್ದುಪಡಿಗೆ ಪರದಾಡುವಂತಾಗಿದೆ.

ಇಲ್ಲಿನ ಕೇಂದ್ರ ಮುಖ್ಯ ಅಂಚೆ ಕಚೇರಿ ಎದುರು ಪ್ರತಿದಿನ ಇದಕ್ಕಾಗಿಯೇ ಜನರು ಸರತಿ ಸಾಲಲ್ಲಿ ನಿಂತಿರುವುದನ್ನು ಕಾಣಬಹುದು. ಇಲ್ಲಿ ಇರುವುದು ಒಂದೇ ತಿದ್ದುಪಡಿ ಕೇಂದ್ರ. ಹೀಗಾಗಿ ಜನರ ಅಲೆದಾಟ ತಪ್ಪಿಲ್ಲ.

ತಾಲ್ಲೂಕು ಕಚೇರಿ, ನಾಡಕಚೇರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಈ ಹಿಂದೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಮುಖ್ಯ ಅಂಚೆ ಕಚೇರಿಯಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಒಬ್ಬ ಸಿಬ್ಬಂದಿ ನಿಯೋಜನೆಗೊಂಡಿದ್ದು ದಿನವೊಂದಕ್ಕೆ 30ಕ್ಕಿಂತ ಅಧಿಕ ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಸೌಲಭ್ಯ ವಂಚಿತರು ಅಂಗಲಾಚಿದರೂ ತಿದ್ದುಪಡಿಗೆ ಅವಕಾಶ ಸಿಗುತ್ತಿಲ್ಲ.

ಸಾರ್ವಜನಿಕರು ಬೆಳಿಗ್ಗೆ 6ರಿಂದಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಕಚೇರಿ ತೆರೆಯುವುದರೊಳಗೆ ಆ ದಿನದ ತಿದ್ದುಪಡಿ ಕೋಟಾ ಮುಕ್ತಾಯಗೊಳ್ಳುತ್ತಿದೆ. ಹಳ್ಳಿಗಳಿಂದ ಮುಂಜಾನೆ ಬರಲು ಸಮರ್ಪಕ ಬಸ್‌ ಸೌಲಭ್ಯ ಇಲ್ಲದ ಕಾರಣ ಗ್ರಾಮೀಣ ಪ್ರದೇಶದ ಜನರು ಆಧಾರ್ ತಿದ್ದುಪಡಿಗೆ ತೊಂದರೆ ಎದುರಿಸುವಂತಾಗಿದೆ.

ವಿಳಾಸ, ಫೋಟೊ,‌ ಜನನ ಪ್ರಮಾಣಪತ್ರ, ಮೊಬೈಲ್‌ ಸಂಖ್ಯೆ, ಹೆಸರು ಬದಲಾವಣೆ, ಲಿಂಗ, ಬಯೊಮೆಟ್ರಕ್ ಸೇರಿದಂತೆ 10 ವರ್ಷ ಮೇಲ್ಪಟ್ಟವರ ಎಲ್ಲಾ ಕಾರ್ಡ್‌ಗಳನ್ನು ನವೀಕರಿಸಬೇಕಿದೆ. ಇಲ್ಲದಿದ್ದರೆ ಪಡಿತರ ಸೌಲಭ್ಯ, ‘ಗೃಹಲಕ್ಷ್ಮಿ ಯೋಜನೆ’, ಉಚಿತ ಬಸ್‌, ಬ್ಯಾಂಕ್‌ ಖಾತೆ, ಪ್ಯಾನ್‌ ಕಾರ್ಡ್‌, ಮತದಾರರ ಚೀಟಿ ನವೀಕರಣ, ವ್ಯಾಸಂಗ ದೃಢೀಕರಣ ಮುಂತಾದ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.

ಕರ್ನಾಟಕ ಒನ್‌ ನಿಷ್ಕ್ರಿಯ: ರಾಜ್ಯ ಸರ್ಕಾರ ಹಲವು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಈಚೆಗೆ ತೆರೆದ ಕರ್ನಾಟಕ ಒನ್‌ ಕೇಂದ್ರ ಕೆಲಸ ಮಾಡುತ್ತಿಲ್ಲ. ತಾಲ್ಲೂಕು ಆಡಳಿತದಲ್ಲೂ ಸಿಬ್ಬಂದಿ ಕೊರತೆ ಹೆಚ್ಚಿದ್ದು ಸೇವೆ ನೀಡಲು ತೊಂದರೆಯಾಗುತ್ತಿದೆ. ಅನೇಕ ಸೌಲಭ್ಯಗಳನ್ನು ಒಳಗೊಂಡ ಮಹತ್ವದ ಯೋಜನೆಗೆ ಚಾಲನೆ ದೊರೆಯುತ್ತಿಲ್ಲ. ಸಾಮಾನ್ಯ ಕೇಂದ್ರಗಳಲ್ಲೂ ನಿರೀಕ್ಷಿತ ಪ್ರಮಾಣದ ಕೆಲಸ ಮಾಡಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದು ಸ್ಥಳೀಯ ಮಂಜೇಶ್‌ ಜಿ.ಕೆ. ದೂರಿದರು.

ನಾಡಕಚೇರಿ ಸೇವೆ ಸ್ಥಗಿತ: ಮೇಗರವಳ್ಳಿ, ದೇವಂಗಿ, ಬೆಜ್ಜವಳ್ಳಿ ಅಟಲ್‌ ಜನಸ್ನೇಹಿ ಕೇಂದ್ರ (ನಾಡಕಚೇರಿ)ದಲ್ಲಿ ಆಧಾರ್‌ ತಿದ್ದುಪಡಿಯಾಗುತ್ತಿಲ್ಲ. ಕೋಣಂದೂರು ನಾಡಕಚೇರಿಯಲ್ಲಿ ಮಾತ್ರ ಈ ಸೌಲಭ್ಯ ಇದೆ. ವಿದ್ಯುತ್‌ ಸಮಸ್ಯೆ, ಸರ್ವರ್‌ ಸಮಸ್ಯೆ ಹೆಚ್ಚಿದ್ದು ಜನರು ತೊಂದರೆಗೆ ಸಿಲುಕಿದ್ದಾರೆ. ಅಲ್ಲದೇ 20 ಕಿ.ಮೀ. ದೂರದಿಂದ ತಾಲ್ಲೂಕು ಕೇಂದ್ರಕ್ಕೆ ದಿನವಿಡೀ ಅಲೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT