ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಪಂ ಚುನಾವಣೆ: ಅಭ್ಯರ್ಥಿ ಆಯ್ಕೆ ಸಮಿತಿ ರಚನೆಗೆ ಕಿಮ್ಮನೆ ಗರಂ

ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಗೆ ಮಂಜುನಾಥಗೌಡ ಗೈರು
Last Updated 11 ಏಪ್ರಿಲ್ 2021, 5:28 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸಭೆಗೆ ಇತ್ತೀಚೆಗೆ ಪಕ್ಷ ಸೇರಿದ ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಗೈರಾಗಿರುವುದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹಾಗೂ ಮಂಜುನಾಥಗೌಡ ಅವರ ನಡುವೆ ಹೊಂದಾಣಿಕೆಯಾಗುತ್ತಿಲ್ಲ ಎಂಬ ಸೂಚನೆ ಹೊರಹಾಕಿದೆ.

ಪಟ್ಟಣ ಪಂಚಾಯಿತಿ ಚುನಾವಣೆ ಅಂಗವಾಗಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚಿಸಲು ಸಭೆ
ಕರೆಯಲಾಗಿತ್ತು.

ಅಭ್ಯರ್ಥಿಗಳ ಆಯ್ಕೆಗೆ ಸಮಿತಿ ರಚಿಸಿರುವ ಕುರಿತು ಕಿಮ್ಮನೆ ಅಸಮಾಧಾನ ಹೊರಹಾಕಿದರು.

‘15 ವರ್ಷಗಳಿಂದ ಪಕ್ಷದಲ್ಲಿ ಇದ್ದೇನೆ. ಪಟ್ಟಣ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಕೆಪಿಸಿಸಿ ಹಿಂದೆಂದೂ ಆಯ್ಕೆ ಸಮಿತಿ ರಚಿಸಿರುವ ಉದಾಹರಣೆ ಇಲ್ಲ. ಇಂತಹ ನಿರ್ಧಾರವನ್ನು ಈ ಬಾರಿ ಏಕೆ ತೆಗೆದುಕೊಂಡಿದೆ ಎಂಬ ಪ್ರಶ್ನೆ ಮೂಡಿದೆ. ಆಯ್ಕೆ ಸಮಿತಿ ರಚನೆ ಬೇಸರ ತಂದಿದೆ. ಪಕ್ಷದಿಂದ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳ ಪಟ್ಟಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸುತ್ತೇನೆ’ ಎಂದು ಕಿಮ್ಮನೆ ಸಭೆಗೆ ತಿಳಿಸಿದರು.

ಮಂಜುನಾಥಗೌಡ ಕಾಂಗ್ರೆಸ್ ಸೇರ್ಪಡಗೊಂಡ ದಿನದಿಂದ ಈವರೆಗೆ ಮಂಜುನಾಥಗೌಡ, ಕಿಮ್ಮನೆ ರತ್ನಾಕರ ಭೇಟಿ ಆಗಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ. ಇಬ್ಬರ ನಡುವಿನ ವೈಮನಸ್ಸು ಶಮನವಾದಂತಿಲ್ಲ.

ಕೆಪಿಸಿಸಿ ನಿರ್ಧಾರದಿಂದ ಕುಪಿತಗೊಂಡ ಕಿಮ್ಮನೆ ಪಕ್ಷದ ಮುಖಂಡರೊಂದಿಗೆ ಸಭೆಯಲ್ಲಿ ಸಿಟ್ಟಾಗಿದ್ದರು.

‘ಆಯ್ಕೆ ಸಮಿತಿ ಸದಸ್ಯನಾಗಿದ್ದರೂ ಅಭ್ಯರ್ಥಿಗಳನ್ನು ಸಮಿತಿ ಆಯ್ಕೆ ಮಾಡಲಿ. ಚುನಾವಣೆ ಪ್ರಚಾರದಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತೇನೆ’ ಎಂದು ಹೇಳಿದರು.

ಸಭೆಗೆ ಮಂಜುನಾಥಗೌಡ ಅವರು ಗೈರಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಕಿಮ್ಮನೆ ಜೊತೆ ಮುಖಾಮುಖಿಯಾಗಿ ಚರ್ಚೆ ನಡೆಸದೇ ಸಭೆಯಲ್ಲಿ ನೇರವಾಗಿ ಭಾಗವಹಿಸುವುದು ಕಷ್ಟ. ಅಭ್ಯರ್ಥಿಗಳ ಆಯ್ಕೆ ಸಮಿತಿ ರಚಿಸಿರುವ ಕುರಿತು ಕಿಮ್ಮನೆ ವಾಗ್ದಾಳಿ ನಡೆಸಬಹುದು ಎಂಬ ಮುನ್ಸೂಚನೆ ಅರಿತ ಮಂಜುನಾಥಗೌಡ ಸಭೆಗೆ ಗೈರಾಗಿರಬಹುದು ಎಂಬ ಮಾತು ಸಭೆಯಲ್ಲಿ ಕೇಳಿಬಂತು.

ಇಬ್ಬರ ನಡುವಿನ ಮುಸುಕಿನ ಗುದ್ದಾಟದಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ಹೇಗೆ ಎದುರಿಸುವುದು ಹೇಗೆ ಎಂಬ ಗೊಂದಲಕ್ಕೆ ಅಭ್ಯರ್ಥಿಗಳು ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT