ಸೋಮವಾರ, ಡಿಸೆಂಬರ್ 5, 2022
19 °C
ಶಿಮುಲ್ ಅಧ್ಯಕ್ಷ ಎನ್.ಎಚ್. ಶ್ರೀಪಾದ್‍ರಾವ್ ಅಭಿಮತ

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ನುಸುಳಬಾರದು. ರಾಜಕೀಯ ಬೆರೆಸುವುದರಿಂದ ಅದರ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ (ಶಿಮುಲ್) ಅಧ್ಯಕ್ಷ ಎನ್.ಎಚ್. ಶ್ರೀಪಾದ್‍ರಾವ್ ಹೇಳಿದರು.

ಇಲ್ಲಿನ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ‘ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಫ್ತು ವೃದ್ಧಿಗಾಗಿ ಜಿಮ್-ಪೋರ್ಟಲ್ ಬಳಕೆ‘ ಹಾಗೂ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದ ಅವರು, ಕಾಲಕ್ಕೆ ತಕ್ಕ ಹಾಗೆ ವ್ಯವಸ್ಥೆ ಬದಲಾಗಬೇಕು. ಸಹಕಾರಿ ರಂಗದ ಆಧುನೀಕರಣವೂ ಅನಿವಾರ್ಯ ಎಂದರು.

ಸಹಕಾರಿ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಮೋಸ ಮಾಡುತ್ತಾರೆ ಎಂಬ ತಪ್ಪು ಕಲ್ಪನೆ ಇತ್ತು. ಈಗ ಡಿಜಿಟಲೀಕರಣ ಆದ ಮೇಲೆ ಸಹಕಾರಿ ಕ್ಷೇತ್ರ ಹೆಮ್ಮರವಾಗಿ ಬೆಳೆದಿದೆ. ಮೀಟರ್ ಬಡ್ಡಿಗೆ ಸಾಲ ಪಡೆದು ತಮ್ಮ ಜೀವನವನ್ನೇ ಬಲಿ ಕೊಡುವ ಕಾಲವೊಂದಿತ್ತು. ಆದರೆ ಸಹಕಾರಿ ಕ್ಷೇತ್ರ ಬೆಳೆದ ಹಾಗೆ ಮೀಟರ್ ಬಡ್ಡಿಯ ವ್ಯವಹಾರಕ್ಕೆ ಕಡಿವಾಣ ಬಿದ್ದಿದೆ. ಜನ ಜಾಗೃತರಾಗಿದ್ದಾರೆ. ಸಹಕಾರಿ ಕ್ಷೇತ್ರದ ಮೂಲಕವೇ ಎಲ್ಲರೂ ವ್ಯವಹರಿಸಬೇಕು. ಆಗ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂದರು.

ಕೆಲವು ಸಹಕಾರಿ ಸಂಸ್ಥೆಗಳು ಕಾಲಕಾಲಕ್ಕೆ ಆಂತರಿಕ ಲೆಕ್ಕಪರಿಶೋಧನೆ ಮಾಡಿಸುತ್ತಿಲ್ಲ. ಇದರಿಂದ ಶೇರುದಾರರಲ್ಲಿ ಅವಿಶ್ವಾಸ ಉಂಟಾಗುತ್ತದೆ. ಸಂಸ್ಥೆಯ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗದಂತೆ ಅಧಿಕಾರಿಗಳ ಸಹಕಾರ ಅತಿ ಮುಖ್ಯ ಎಂದರು.

ಉತ್ತಮ ಸಾಧನೆ ತೋರಿದ ಹಸೂಡಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಪ್ರಮುಖರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎಲ್. ಜಗದೀಶ್ವರ್‌ ಅಧ್ಯಕ್ಷತೆ ವಹಿಸಿದ್ದರು.

ಡಾ.ಬಿ.ಡಿ. ಭೂಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮ್ಯಾಮ್‌ಕೋಸ್ ಉಪಾಧ್ಯಕ್ಷ  ಎಚ್.ಎಸ್. ಮಹೇಶ್ ಹುಲ್ಕಳಿ, ಸಹಕಾರಿ ಧುರೀಣರಾದ ಎಸ್.ಕೆ. ಮರಿಯಪ್ಪ, ವಿ.ರಾಜು, ಮೋಹನ್ ಉಂಬ್ಳೆಬೈಲು, ಎಸ್.ಪಿ.ದಿನೇಶ್, ಎಚ್.ಬಿ. ದಿನೇಶ್, ವಿರೂಪಾಕ್ಷಪ್ಪ, ಎಂ. ಉಮಾಶಂಕರ್ ಉಪಾಧ್ಯ, ನಾಗೇಶ್ ಎಸ್.ಡೋಂಗ್ರೆ, ಜಿ.ವಾಸುದೇವ್, ಪಿ.ವೀರಮ್ಮ ಸೇರಿದಂತೆ ಸಹಕಾರ ಸಂಘಗಳ ಪ್ರಮುಖರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು