ಗುರುವಾರ , ಡಿಸೆಂಬರ್ 8, 2022
18 °C
ತಾಳಗುಂದಲ್ಲಿ

‘ಪ್ರಣವೇಶ್ವರ ಕೆರೆ’ಯೇ ಕರ್ನಾಟಕದ ಮೊದಲ ಕೆರೆ

ಎಂ.ನವೀನ್‌ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಶಿರಾಳಕೊಪ್ಪ: ಚಿತ್ರದುರ್ಗದ ಚಂದ್ರವಳ್ಳಿ ಶಾಸನದಲ್ಲಿ (ಮಯೂರನ ಅವಧಿ) ಉಲ್ಲೇಖವಿರುವ ಚಂದವಳ್ಳಿಯ ಕೆರೆಯೇ ಕರ್ನಾಟಕದ ಮೊದಲ ಕೆರೆ ಎಂದು ಇದುವರೆಗೂ ನಂಬಲಾಗಿದೆ. ಆದರೆ, ತಾಳಗುಂದದ ಚರಿತ್ರೆಯನ್ನು ಆಳವಾಗಿ ಸಂಶೋಧಿಸಿದಾಗ ಶಾತವಾಹನರ ಅವಧಿಯ ಕುರುಹುಗಳು ಲಭಿಸುವ ‘ಪ್ರಣವೇಶ್ವರ ಕೆರೆ’ ಅದಕ್ಕಿಂತಲೂ ಪ್ರಾಚೀನವಾದದ್ದು ಎಂದು ಹೇಳಲು ಸಾಕ್ಷಿಗಳು ಲಭಿಸುತ್ತವೆ.

ಶಾತವಾಹನರು ಪೂಜಿಸಿದ್ದ ತಾಳಗುಂದದ ಪ್ರಣವೇಶ್ವರ ಅಂದರೆ ಶಿವ ನೀರಿನ ಆಶ್ರಯದಲ್ಲೇ ಇದ್ದ. ದೇಗುಲದ ಸಮೀಪವಿರುವ ಕೆರೆಯ ತಡೆಗೋಡೆಗೆ ಶಾತವಾಹನರ ಕಾಲದ ಇಟ್ಟಿಗೆಗಳನ್ನು ಬಳಸಲಾಗಿದೆ. ಶಾತವಾಹನರ ಕಾಲದ ಸುಟ್ಟ ಕೆಂಪಿಟ್ಟಿಗೆ ಕೆರೆಯ ಆರಂಭದಲ್ಲಿ ಕಂಡುಬಂದಿದೆ.

ಹಿರಿಯ ಸಂಶೋಧಕ ದಿವಂಗತ ರಘುನಾಥ ಭಟ್ಟರು ತಮ್ಮ ‘ಶಾಸನಕಲೆ’ ಕೃತಿಯ ಅಡಿಟಿಪ್ಪಣಿಯಲ್ಲಿ ಇಟ್ಟಿಗೆ ಕಂಡು ಬಂದಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಇಟ್ಟಿಗೆ ಆಯುತಾಕಾರದಲ್ಲಿದ್ದು, ಸುಮಾರು 42 ಸೆಂ.ಮೀ ಉದ್ದ, 24 ಸೆಂ.ಮೀ ಅಗಲ, 8 ಸೆಂ.ಮೀ ದಪ್ಪವಿದೆ.

ಬಹುತೇಕ ಕಿರಿದಾದ ಕೊಳ, ಕಲ್ಯಾಣಿ ಇದ್ದು ನಂತರ ಕ್ರಿ.ಶ. 450ರ ಅವಧಿಯಲ್ಲಿ ಕದಂಬರ ಕಾಕುತ್ಸವರ್ಮನ ಕಾಲದಲ್ಲಿ ವಿಸ್ತಾರಗೊಂಡಂತಿದೆ. ತಾಳಗುಂದದ ಶಿವಾಲಯದ ನಿರ್ವಹಣೆಗಾಗಿ ಆತ ಒಂದು ಕೆರೆಯನ್ನು ಕಟ್ಟಿಸಿದ್ದಾನೆ. ಈಗಿನ ಪ್ರಣವೇಶ್ವರ ದೇವಾಲಯದ ಪಕ್ಕದಲ್ಲಿರುವ ಈ ಕೆರೆ ಈಗಲೂ ವಿಶೇಷವಾಗಿ ಗೋಚರಿಸುತ್ತದೆ. ಇದಕ್ಕೆ ಪೂರಕವಾಗಿ ಉತ್ಖನನದಲ್ಲಿ ಶಾತವಾಹನರ ಕಾಲದ ನೆಲಹಾಸು ಪ್ರಣವೇಶ್ವರ ದೇವಾಲಯದ ಆವರಣದಲ್ಲಿ ಲಭಿಸಿದೆ.

‘ಇಲ್ಲಿನ ಸ್ತಂಭ ಶಾಸನವು ಈ ದೇವಾಲಯದ ಇರುವಿಕೆಯನ್ನು ಶಾತವಾಹನರ ಅವಧಿಗೆ ಕೊಂಡೊಯ್ದಿದ್ದು, ದೇವಾಲಯದ ನಿರ್ವಹಣೆಗೆ ಆ ಕಾಲದಲ್ಲೇ ಪುಟ್ಟಕೆರೆ ಇದ್ದದ್ದನ್ನು ಕಾಕುತ್ಸವರ್ಮನ ಅವಧಿಯಲ್ಲಿ, ಒಂದೇ ತಿಂಗಳಲ್ಲಿ ವಿಸ್ತರಿಸಿರಬಹುದಾದ ಸಾಧ್ಯತೆಗಳಿವೆ. ಇದು ಶಾತವಾಹನರ ಅವಧಿಯ ನೀರಿನ ಆಕರ ಎಂದರೆ ತಪ್ಪಿಲ್ಲ ಎನ್ನುತ್ತಾರೆ ಇತಿಹಾಸ ಸಂಶೋಧಕ ರಮೇಶ ಬಿ. ಹಿರೇಜಂಬೂರು.

‘ಪ್ರಣವೇಶ್ವರ ಕೆರೆಯ ಸುತ್ತಲು ಶಾತವಾಹನ ಕಾಲದ ಇಟ್ಟಿಗೆಯಿಂದ ಪೌಳಿ ಅಥವಾ ಕಟ್ಟೆಯನ್ನು ರಚಿಸಿರುವುದು ಕಾಣಬಹುದು. ಹಾಗಾಗಿ, ಇದು ಕರ್ನಾಟಕದ ಮೊದಲ ಕೆರೆ ಎಂದರೆ ತಪ್ಪಾಗಲಾರದು’ ಎಂದೂ ಇತಿಹಾಸ ಸಂಶೊಧಕ ಶ್ರೀಪಾದ ಬಿಚ್ಚುಗತ್ತಿ ಅಭಿಪ್ರಾಯಪಡುತ್ತಾರೆ.

***

ಡಸ್ಟ್ ಬಿನ್ ಬಳಿ ಪತ್ತೆಯಾಗಿದ್ದವು ಚಿನ್ನದ ನಾಣ್ಯ

2012–13ರಲ್ಲಿ ಮೊಟ್ಟ ಮೊದಲ ಬಾರಿಗೆ ನಡೆದ ಪ್ರಾಯೋಗಿಕ ಉತ್ಖನನದಲ್ಲಿ ತಾಳಗುಂದ ಗ್ರಾಮದ ಪ್ರಣವೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಈಗಿರುವ ಕಸದ ತೊಟ್ಟಿ (ಡಸ್ಟ್ ಬಿನ್) ಬಳಿ 13 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.

ಮುಖ್ಯದ್ವಾರದ ಮೆಟ್ಟಿಲು ತೆಗೆದು ಉತ್ಖನನ ನಡೆಸಿದಾಗ ಭೂಮಿಯ 1 ಮತ್ತು 2ನೇ ಸ್ತರದಲ್ಲಿ ಗಂಗರ ಕಾಲದ 13 ಚಿನ್ನದ ಆನೆ ಚಿತ್ರವಿರುವ ವರಹಗಳು ಲಭಿಸುತ್ತವೆ. ಆನೆ ವರಹಗಳನ್ನು ಚಲಾವಣೆ ತಂದ ಕೀರ್ತಿ ಗಂಗರಿಗೆ ಸಲ್ಲುತ್ತದೆ. ಈ ನಾಣ್ಯಗಳು ದುರ್ವಿನೀತ (5ನೇ ಶತಮಾನ), ಭೂ ವಿಕ್ರಮ (6ನೇ ಶತಮಾನ), ಶ್ರೀ ವಿಕ್ರಮ (6ನೇ ಶತಮಾನ)ನ ಕಾಲದ ನಾಣ್ಯಗಳಾಗಿವೆ. ಈ ನಾಣ್ಯಗಳಲ್ಲಿ ಅಲಂಕಾರಗೊಂಡಿರುವ ಆನೆಯ ಮೇಲೆ ಅಂದಿನ ಅರಸನ ಹೆಸರನ್ನು ಬರೆಯಲಾಗಿದೆ. ವಿಶೇಷವೆಂದರೆ ಗಂಗರು ತಮ್ಮದೇ ಲಿಪಿಯ ನಾಣ್ಯ ಹೊಂದಿದ್ರೂ ಕದಂಬರ ಪ್ರದೇಶವಾದ ತಾಳಗುಂದದಲ್ಲಿ ಲಭಿಸಿರುವ ನಾಣ್ಯಗಳಲ್ಲಿ ಸ್ಥಳೀಯವಾದ ಕದಂಬ ಲಿಪಿಯನ್ನೇ ಬಳಸಿರುವುದು ಇದೇ ಮೊದಲ ದಾಖಲೆಯಾಗಿದೆ. 3 ಮತ್ತು 4ನೇ ಸ್ತರದಲ್ಲಿ ಕಾಕುತ್ಸವರ್ಮನ ಕಾಲದ ‘ಕಾ’ ಆಕಾರದ ಚಿನ್ನದ ಬೇಳೆ ಕಾಸು ದೊರಕಿದೆ.

5ನೇ ಸ್ತರದಲ್ಲಿ ಶಾತವಾಹನರ (2ನೇ ಶತಮಾನ) ಪೋಟಿನ್ ನಾಣ್ಯ ದೊರಕಿದೆ. ಪೋಟಿನ್ ನಾಣ್ಯಗಳನ್ನು ತಯಾರಿಸಲು ತಾಮ್ರ, ಸೀಸ, ತವರಗಳನ್ನು ಬಳಸಲಾಗಿದೆ. ಇದನ್ನು ರಬ್ಬರ್‌ನಂತೆ ಮಡಚಿ ಮತ್ತೆ ಸರಿಪಡಿಸಬಹುದು. ಹಾಗೆಯೇ, ವಿಜಯನಗರ ಅರಸರ ಕಾಲದ ಮತ್ತೊಂದು ನಾಣ್ಯ ಸಹ ಇಲ್ಲಿ ಪತ್ತೆಯಾಗಿದೆ.

ಕ್ರಿ.ಶ. 1180ರ ಅವಧಿಯ ಕಲ್ಯಾಣಿ ಚಾಲುಕ್ಯರ ವಿಕ್ರಮಾಧಿತ್ಯ ಮತ್ತು ಕಳಚೂರಿ ಸಂಕಮನ ಶಾಸನಗಳು ಇಲ್ಲಿ ಲಭಿಸಿವೆ. ತಾಮ್ರ ಶಾಸನವು ಒಟ್ಟು ಐದು ಫಲಕಗಳನ್ನು ಹೊಂದಿದ್ದು, ನಂದಿಯ ಮುದ್ರೆಯನ್ನು ಒಳಗೊಂಡಿದೆ. ದೇವನಾಗರಿ ಲಿಪಿಯಲ್ಲಿರುವ ಈ ಶಾಸನವು ಸಂಸ್ಕೃತದಲ್ಲಿದೆ. ಒಟ್ಟು 168 ಸಾಲುಗಳನ್ನು ಹೊಂದಿರುವ ಈ ಶಾಸನವು ಸಂಕಮನು ಬನವಾಸಿ ನಾಡನ್ನು ಆಳುತ್ತಿರುವಾಗ ಹೊಯ್ಸಳರ ಬಲ್ಲಾಳನ ಮಂತ್ರಿಯಾದ ಕೇಶವಾದಿತ್ಯನು ಇಲ್ಲಿ ಬ್ರಾಹ್ಮಣರಿಗೆ ದಾನ ನೀಡಿದ ವಿವರಗಳನ್ನು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು