ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ: ಆರೋಗ್ಯ ಮಾತೆ ಜಾತ್ರೆಗೆ ಭರ್ಜರಿ ಸಿದ್ಧತೆ

ಆ. 29ರಂದು ಧ್ವಜಾರೋಹಣದೊಂದಿಗೆ ಚಾಲನೆ: ನವ ದಿನ ವಿಶೇಷ ಪ್ರಾರ್ಥನೆ, ಸರ್ವಧರ್ಮ ಸಮನ್ವಯತೆ
–ಕಿರಣ್ ಕುಮಾರ್
Published 25 ಆಗಸ್ಟ್ 2024, 6:00 IST
Last Updated 25 ಆಗಸ್ಟ್ 2024, 6:00 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ಹಳೇ ನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವಾರ್ಷಿಕ ಮಹೋತ್ಸವ ಸೆಪ್ಟೆಂಬರ್‌ 8ರಂದು ನಡೆಯಲಿದೆ. ನವ ದಿನಗಳ ಆಧ್ಯಾತ್ಮಿಕ ಪೂಜಾ ವಿಧಿ ವಿಧಾನಗಳೊಂದಿಗೆ ಮಹೋತ್ಸವಕ್ಕೆ ಸಿದ್ಧತೆ ಆರಂಭವಾಗುತ್ತಿದೆ. ಭಕ್ತರಿಂದ ಕೋರಿಕೆ, ಹರಕೆಗಳು, ವಿವಿಧ ಉದ್ದೇಶಗಳಿಗಾಗಿ ಪ್ರಾರ್ಥನೆ, ಮಾತೆಯ ಮೆರವಣಿಗೆ ಮತ್ತು  ಪುಷ್ಪಾರ್ಚನೆ ನಡೆಯುತ್ತವೆ.

ಇದಕ್ಕೂ ಮೊದಲು ಆ. 29ರಂದು ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಫ್ಯಾನ್ಸಿಸ್ ಸೆರಾವೋ ಅವರಿಂದ ಮಹೋತ್ಸವದ ಚಾಲನೆಯ ಸಂಕೇತವಾಗಿ ಧ್ವಜಾರೋಹಣ ಮತ್ತು ಪೂಜಾ ವಿಧಿ–ವಿಧಾನಗಳು ನಡೆಯುತ್ತವೆ. ಅಂದಿನಿಂದ ಸತತ 9 ದಿನ ದಿನಕ್ಕೊಂದು ವಿಷಯ ಮುಂದಿಟ್ಟು ಪ್ರಾರ್ಥಿಸಲಾಗುವುದು. ಸೆ. 7ರಂದು ಸಂಜೆ ನಗರದ ಮುಖ್ಯ ಬೀದಿಗಳಲ್ಲಿ ಭವ್ಯ ಅಲಂಕೃತ ತೇರಿನ ಮೆರವಣಿಗೆ ನಡೆಸಲಾಗುವುದು.

ಸೆ. 8ರಂದು ಮಾತೆಯ ಜನ್ಮದಿನ ಹಾಗೂ ದೇವಾಲಯದ ವಾರ್ಷಿಕೋತ್ಸವದ ಇದ್ದು, ಅಂದು ಬೆಳಿಗ್ಗೆ 7 ಗಂಟೆಯಿಂದಲೇ ವಿವಿಧ ಪೂಜೆಗಳು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಧರ್ಮಾಧ್ಯಕ್ಷರಿಂದ ಮತ್ತೆ ಶ್ರದ್ಧಾಭಕ್ತಿಯಿಂದ ಪೂಜೆ ನಡೆಯಲಿದೆ.

ಆ. 29ರಿಂದಲೇ ಜಾತ್ರೆಯ ವಾತಾವರಣ ನಿರ್ಮಾಣವಾಗಿರುತ್ತದೆ. ದೇವಾಲಯ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತಳಿರು– ತೋರಣ, ದೀಪಾಲಂಕಾರ ಶುರುವಾಗಲಿದೆ. ಹಬ್ಬದ ಶುಭಾಶಯದ ಫ್ಲೆಕ್ಸ್‌ಗಳ ಅಳವಡಿಕೆ, ತಿಂಡಿ ಅಂಗಡಿ, ಮಕ್ಕಳ ಆಟಿಕೆ ವಸ್ತುಗಳು, ಮಹಿಳೆಯರ ಉಡುಗೆ– ತೊಡುಗೆ, ಅಂಗಡಿಗಳು ತೆರೆದುಕೊಳ್ಳುತ್ತವೆ. ಜಾತ್ರಾ ಮಹೋತ್ಸವದ ದಿನ ಊಟದ ವ್ಯವಸ್ಥೆ, ಹರಕೆ ಸಾಮಾನುಗಳ ಮಾರಾಟ, ಹರಕೆಯ ಕೇಶ ಮುಂಡನ, ಚಿಕ್ಕ ಮಕ್ಕಳಿಗೆ ಕಿವಿ ಚುಚ್ಚುವುದು, ವಿಶೇಷವಾಗಿ ಅಲಂಕೃತಗೊಂಡ ಮಾತೆಯ ಪ್ರತಿಮೆ ಪೂಜೆ, ದೂರದ ಊರುಗಳಿಂದ ಪ್ರಾರ್ಥನೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯದ ವ್ಯವಸ್ಥೆ, ವಾದ್ಯ ಮೇಳ ಮತ್ತು ದೇವಾಲಯದ ಆವರಣದ ತುಂಬೆಲ್ಲ ಅಲಂಕೃತ ದೀಪಗಳು ಕಂಗೊಳಿಸುತ್ತಿರುತ್ತವೆ.

ಪ್ರತಿ ವರ್ಷವೂ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಲಿದ್ದು, ಧರ್ಮ ಗುರುಗಳು, ಧರ್ಮ ಭಗಿನಿಯರು ಮತ್ತು ಧರ್ಮ ಕೇಂದ್ರದ ಪದಾಧಿಕಾರಿಗಳು ಭಕ್ತರ ಸೇವೆಯಲ್ಲಿ ನಿರತರಾಗಿರುತ್ತಾರೆ ಎಂದು ದೇವಾಲಯದ ಧರ್ಮ ಗುರು ಫಾದರ್ ಸ್ಟೀವನ್ ಡೇಸಾ ತಿಳಿಸಿದ್ದಾರೆ.

ಸ್ಟೀವನ್ ಡೇಸಾ
ಸ್ಟೀವನ್ ಡೇಸಾ
ಸಿಸ್ಟರಿ ವಿಲ್ಮಾ
ಸಿಸ್ಟರಿ ವಿಲ್ಮಾ
ಆರೋಗ್ಯ ಸ್ವಾಮಿ
ಆರೋಗ್ಯ ಸ್ವಾಮಿ
ನಿತ್ಯ ದೇವಾಲಯದ ಮುಂದೆ ಓಡಾಡುವ ಜನರು ಒಂದು ಕ್ಷಣ ದಾರಿಯಲ್ಲಿಯೇ ನಿಂತು ಜಾತಿ ಧರ್ಮದ ಬೇಧಲ್ಲದೆ ಗೌರವ ಭಾವನೆಯಿಂದ ನಮಸ್ಕರಿಸಿ ಮುನ್ನಡೆಯುತ್ತಾರೆ.
ಸಿಸ್ಟರ್ ವಿಲ್ಮಾ
ಆರೋಗ್ಯ ಮಾತೆಯ ಪುಣ್ಯಕ್ಷೇತ್ರವು ತಮಿಳುನಾಡಿನ ವೇಳಾಂಗಣಿ ಕರ್ನಾಟಕದ ಹರಿಹರ ಬಿಟ್ಟರೆ ಭದ್ರಾವತಿಯ ಗಾಂಧಿನಗರದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆ ಪುಣ್ಯಕ್ಷೇತ್ರ ಮಾತ್ರ.
ಆರೋಗ್ಯ ಸ್ವಾಮಿ ಧರ್ಮ ಕೇಂದ್ರದ ಭಕ್ತ

ದೇವಾಲಯದ ವಿಶೇಷತೆ

ಈ ದೇವಾಲಯವನ್ನು ತಮಿಳುನಾಡಿನ ವೇಳಾಂಗಣಿಯ ಪುಣ್ಯಕ್ಷೇತ್ರದಲ್ಲಿರುವ ಆರೋಗ್ಯ ಮಾತೆಗೆ ಸಮರ್ಪಿಸಲಾಗಿದೆ. 1981ರಲ್ಲಿ ವೇಳಾಂಗಣಿಯಿಂದ ದಿವಂಗತ ಫಾದರ್ ಜೆರುಮ್ ಫರ್ನಾಂಡಿಸ್ ಮಾತೆಯ ಪ್ರತಿಮೆ ತಂದು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು. ಆರೋಗ್ಯ ಮಾತೆಯು ‘ಉತ್ತಮ ಆರೋಗ್ಯ ಕಾಯುವ ಮಾತೆ’ ಎಂದು ಪ್ರಸಿದ್ಧಿ ಪಡೆದಿದ್ದಾಳೆ. ಕ್ರೈಸ್ತ ಕಥೋಲಿಕ್ ಸಮುದಾಯದ ಹೆಚ್ಚಿನ ಸಂಖ್ಯೆಯ ಭಕ್ತರು ಆರೋಗ್ಯ ಮಾತೆಯಲ್ಲಿ ಅನನ್ಯ ವಿಶ್ವಾಸ ನಂಬಿಕೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT