ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೆ ಮಾರಿಕಾಂಬ ಜಾತ್ರೆಗೆ ಶಿವಮೊಗ್ಗ ಸಜ್ಜು

ಅಂತಿಮ ಹಂತದ ಸಿದ್ಧತೆಗಳು ಪೂರ್ಣ: ದೇವಿಗೆ ವಿಶೇಷ ಅಲಂಕಾರ
Published 9 ಮಾರ್ಚ್ 2024, 16:28 IST
Last Updated 9 ಮಾರ್ಚ್ 2024, 16:28 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದೇವತೆ ಕೋಟೆ ಮಾರಿಕಾಂಬ ದೇವಿಯ ಜಾತ್ರೆ ಮಾರ್ಚ್ 12ರಿಂದ16ರವರೆಗೆ ಐದು ದಿನಗಳ ಕಾಲ ನಡೆಯಲಿದೆ. ಮೂರು ವರ್ಷಕ್ಕೊಮ್ಮೆ ಜರುಗುವ ಜಾತ್ರೆಗೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಇಡೀ ನಗರದಲ್ಲಿ ಕಟೌಟ್ ಗಳು, ಫ್ಲೆಕ್ಸ್ ಗಳು ವಿಜೃಂಭಿಸುತ್ತಿವೆ. ದೀಪಾಲಂಕಾರ ನಡೆದಿದೆ.

ಜಾತ್ರೆ ಅಂಗವಾಗಿ ಮಾರಿಕಾಂಬ ದೇವಸ್ಥಾನವನ್ನು ಕಬ್ಬು, ಅರಿಶಿಣ–ಕುಂಕುಮ ಹಾಗೂ ಬೇಲದ ಕಾಯಿ ಬಳಸಿ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ತಳಿರು–ತೋರಣ, ಹೂವಿನ ಅಲಂಕಾರ ಸೇರಿದಂತೆ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಬೆಳಕಿನ ಅಲಂಕಾರ ಮಾಡುವ ಕೊನೆಯ ಹಂತದ ಸಿದ್ಧತೆಯಲ್ಲಿ ಜಾತ್ರಾ ಸಮಿತಿಯವರು ತೊಡಗಿದ್ದು ಶನಿವಾರ ’ಪ್ರಜಾವಾಣಿ‘ ಭೇಟಿ ನೀಡಿದಾಗ ಕಂಡುಬಂದಿತು.

ಜಾತ್ರೆಗೆ ಬರುವವರಿಗೆ ಕುಡಿಯುವ ನೀರು, ದೇವರ ದರ್ಶನಕ್ಕೆ ಬ್ಯಾರಿಕೇಡ್ ಅಳವಡಿಕೆ, ಸರದಿ ಸಾಲಿನಲ್ಲಿ ಬರುವವರಿಗೆ ನೆರಳಿನ ವ್ಯವಸ್ಥೆ, ಶಾಮಿಯಾನ ಅಳವಡಿಕೆ ಭರದಿಂದ ಸಾಗಿದೆ. ಪ್ರತಿ ದಿನ ಬೆಳಿಗ್ಗೆ 7ರಿಂದ ಹರಕೆ ಸಲ್ಲಿಕೆ, ಪೂಜೆಯೊಂದಿಗೆ ದೇವಿಯ ದರ್ಶನಕ್ಕೆ ಬರುವ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ತಿಳಿಸಿದರು.

ಜಾತ್ರೆ ಅಂಗವಾಗಿ ಗಾಂಧಿ ಬಜಾರ್ ದ್ವಾರ ಬಾಗಿಲಿನಲ್ಲಿ 45 ಅಡಿ ಎತ್ತರದ ಚಾಮುಂಡೇಶ್ವರಿ ಮೂರ್ತಿ ನಿರ್ಮಾಣ ಮಾಡಲಾಗಿದೆ. ಇದು ಚಲಿಸುವ ರೀತಿ ಕಾಣುತ್ತಿದ್ದು ಜನರನ್ನು  ಆಕರ್ಷಿಸುತ್ತಿದೆ. ಸ್ವಚ್ಛತೆಗೆ ಮತ್ತು ಕುಡಿಯುವ ನೀರಿಗೆ ಆದ್ಯತೆ ಕೊಡುವ ದೃಷ್ಟಿಯಿಂದ ಈಗಾಗಲೇ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ದೇವಸ್ಥಾನ ಸಮಿತಿಯವರು ಚರ್ಚೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅಗತ್ಯ ಸಿಬ್ಬಂದಿ ನಿಯೋಜಿಸಲು ಸಿದ್ಧತೆ ಮಾಡಿಕೊಂಡಿದೆ.

ಮಾರ್ಚ್ 12ರಂದು ಬೆಳಿಗ್ಗೆ 7 ಗಂಟೆಗೆ ದೇವಿಗೆ ಪೂಜೆ ಆರಂಭಗೊಳ್ಳಲಿದೆ. ರಾತ್ರಿ 9ಕ್ಕೆ ಗಾಂಧಿ ಬಜಾರ್‌ನಿಂದ ಉತ್ಸವ ಹೊರಡಲಿದ್ದು, ಬೆಳಗಿನ ಜಾವ ಗದ್ದಿಗೆ ಪ್ರವೇಶಿಸಲಿದೆ. ಮಾರ್ಚ್ 16ರಂದು ಸಂಜೆ 7ಕ್ಕೆ ಜಾನಪದ ಕಲಾ ತಂಡಗಳೊಂದಿಗೆ ದೇವಿಯ ರಾಜಬೀದಿ ಉತ್ಸವ ವನಪ್ರವೇಶ ಮಾಡಲಿದೆ.

ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಹೂವಿನ ಅಲಂಕಾರದ ಜವಾಬ್ದಾರಿ ಹೊತ್ತುಕೊಂಡಿದ್ದು, ಬೆಂಗಳೂರಿನಿಂದ 40ಕ್ಕೂ ಹೆಚ್ಚು ಮಂದಿ ಬಂದಿದ್ದು, ಸ್ಥಳೀಯರ ಜೊತೆಗೂಡಿ ದೇವಸ್ಥಾನ ಮತ್ತು ಗಾಂಧಿ ಬಜಾರ್‌ನಲ್ಲಿ ಹೂವಿನ ಅಲಂಕಾರ ಮಾಡುತ್ತಿದ್ದಾರೆ. ಹೂವು, ಕುಂಕುಮದ ಪ್ಯಾಕೇಟ್ ಗಳನ್ನು ಸಿದ್ಧಪಡಿಸಲಾಗುತ್ತಿದೆ. 

ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಶನಿವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಮಾರಿಕಾಂಬ ಜಾತ್ರೆ ಹಿನ್ನೆಲೆಯಲ್ಲಿ ಶನಿವಾರ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಕುಸ್ತಿ ಪಂದ್ಯಾವಳಿ; ಗೆದ್ದವರಿಗೆ ₹50 ಸಾವಿರ ಬಹುಮಾನ
ಮಾರಿಕಾಂಬ ಜಾತ್ರೆ ಅಂಗವಾಗಿ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಕುಸ್ತಿ ಆರಂಭವಾಗಲಿದೆ. ಗೆದ್ದ ಪೈಲ್ವಾನರಿಗೆ ಕೊನೆಯ ದಿನ ಬೆಳ್ಳಿಗದೆ ಮತ್ತು ₹50 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಎನ್.ಮಂಜುನಾಥ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT