ಶಿವಮೊಗ್ಗ: ‘ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ನೀಡಿರುವ ಮೀಸಲಾತಿ ಮಿತಿ ₹ 2 ಕೋಟಿವರೆಗೆ ಹೆಚ್ಚಿಸಬೇಕು’ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್.ಮಹಾದೇವ ಸ್ವಾಮಿ ಆಗ್ರಹಿಸಿದರು.
ಈ ಮೊದಲು ₹ 1 ಕೋಟಿವರೆಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮೀಸಲಾತಿ ಮಿತಿ ₹ 2 ಕೋಟಿವರೆಗೆ ಹೆಚ್ಚಿಸುವುದಾಗಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದರು. ಆದ್ದರಿಂದ ಮುಂದಿನ ಅಧಿವೇಶನದಲ್ಲಿ ಬಿಲ್ ಮಂಡಿಸಬೇಕು. ಇದರಿಂದ ರಾಜ್ಯದಾದ್ಯಂತ ಸುಮಾರು 15,000 ಗುತ್ತಿಗೆದಾರರು ಈ ಸೌಲಭ್ಯ ಪಡೆದುಕೊಳ್ಳಲಿದ್ದಾರೆ. ಎಸ್‌ಸಿ, ಎಸ್‌ಟಿ ಗುತ್ತಿಗೆದಾರರು ಇ–ಟೆಂಡರ್‌ನಲ್ಲಿ ಭಾಗವಹಿಸಲು ಲೈನ್ ಆಫ್ ಕ್ರೆಡಿಟ್ ಪಡೆಯುವುದು ಅವಶ್ಯಕ ಎಂಬುದನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.
2018ರಿಂದ ಈಚೆಗೆ ಇದ್ದ ಗುತ್ತಿಗೆದಾರರಿಗೆ ಪರವಾನಗಿ ನೀಡಬೇಕು ಹಾಗೂ ನವೀಕರಣಗೊಳಿಸಬೇಕು. ಕೆಆರ್‌ಐಡಿಎಲ್‌ಗೆ 4ಜಿ ವಿನಾಯಿತಿ ರದ್ದುಗೊಳಿಸಿ ಸಾಮಾನ್ಯ ಗುತ್ತಿಗೆದಾರರಂತೆ ಇ– ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಕುಮಾರ್, ಕಾರ್ಯದರ್ಶಿ ಕೆ.ಲೋಕೇಶ್, ಖಜಾಂಚಿ ಚಂದ್ರಶೇಖರ್ ಖಾನ್ ಪೇಟ್, ಪ್ರಮುಖರಾದ ಚಂದ್ರಪ್ಪ, ಎಸ್.ಟಿ.ರವಿ, ಪರಮೇಶ್ವರ ನಾಯಕ್, ಜಿ.ವಿ.ಅಶೋಕ್ ಇದ್ದರು.