ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ: ಚೇತನ್ ಅಹಿಂಸಾ

ಹಮ್‌ ದೋ ಹಮಾರೆ ಬಾರಾ ಸಿನಿಮಾ ರಾಜ್ಯದಲ್ಲಿ ನಿಷೇಧ
Published 9 ಜೂನ್ 2024, 6:38 IST
Last Updated 9 ಜೂನ್ 2024, 6:38 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಹಮ್‌ ದೋ ಹಮಾರೆ ಬಾರಾ ಸಿನಿಮಾವನ್ನು ರಾಜ್ಯದಲ್ಲಿ ನಿಷೇಧಿಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ’ ಎಂದು ನಟ ಚೇತನ್ ಅಹಿಂಸಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸಿನಿಮಾ ನೋಡದೇ ಬರೀ ಟ್ರೈಲರ್ ನೋಡಿ ನಿಷೇಧಿಸಿರುವುದು ಎಷ್ಟು ಸರಿ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ ಅವರು, ಇದರ ಹಿಂದೆ ಸರ್ಕಾರದ ಓಲೈಕೆ ತಂತ್ರವೂ ಅಡಗಿದೆ ಎಂದರು.

‘ಕೋಟಿಗಟ್ಟಲೆ ಹಣ ಹಾಕಿ ಮಾಡಿದ ಸಿನಿಮಾ‌ವನ್ನು ನಿಷೇಧ ಮಾಡಿದರೆ ಹೇಗೆ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೂ ಹತ್ತಿಕ್ಕಬಾರದು. ಅಷ್ಟಕ್ಕೂ ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಒಪ್ಪಿಗೆ ನೀಡಿದೆ. ಮಹಾರಾಷ್ಟ್ರದಲ್ಲಿ ಈ ಸಿನಿಮಾ ಪ್ರದರ್ಶನಕ್ಕೆ ಮುಂಬೈ ಹೈಕೋರ್ಟ್ ಅನುಮತಿ ನೀಡಿದೆ ಎಂಬುದನ್ನು ಸರ್ಕಾರ ಗಮನಿಸಬೇಕು’ ಎಂದು ಹೇಳಿದರು.

‘ಕೆಲವರು ಟ್ರೈಲರ್ ನೋಡಿಯೇ ನಿಷೇಧಿಸುವಂತೆ ಆಗ್ರಹಿಸಿದ್ದರು. ವಾಸ್ತವದಲ್ಲಿ ಸಿನಿಮಾದ ಟೈಟಲ್ ಬದಲಾವಣೆ ಆಗಿದ್ದರೆ ಸಾಕಿತ್ತು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಾಶ್ಮೀರ ಫೈಲ್ ಸಿನಿಮಾ ಬ್ಯಾನ್ ಮಾಡಿದ್ದರು. ಅದು ಸರಿಯಲ್ಲ’ ಎಂದರು.

‘ಚುನಾವಣೆ ಮುಗಿದಿದೆ. ಈಗಲಾದರೂ ಸರ್ಕಾರ ಜಾತಿಗಣತಿ ವರದಿ ಅನುಷ್ಠಾನಗೊಳಿಸಬೇಕು. ₹200 ಕೋಟಿ ವ್ಯಯಿಸಿ ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಚುನಾವಣೆಗೆ ಮುನ್ನ ಕೊಟ್ಟ ಮಾತಿನಂತೆ ಜಾತಿಗಣತಿ ವರದಿ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.

‘ಜಾತಿಗಣತಿ ಬಿಡುಗಡೆ ಮಾಡದೇ ದಲಿತರು, ಶೋಷಿತರು, ಆದಿವಾಸಿಗಳಿಗೆ ನ್ಯಾಯ ಹೇಗೆ ಸಿಗುತ್ತದೆ. ಕಾಂಗ್ರೆಸ್ ಸರ್ಕಾರ ಕೂಡಲೇ ಅದನ್ನು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ದೇಶದಲ್ಲೂ ಇದುವರೆಗೂ ಜಾತಿ ಗಣತಿ ಆಗಿಲ್ಲ. ಎನ್‌ಡಿಎ ಜೊತೆ ಹೆಜ್ಜೆ ಹಾಕಿರುವ ನಿತೀಶ್‌ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಪ್ರಧಾನಿ ಮೋದಿ ಮೇಲೆ ಒತ್ತಡ ತಂದು ದೇಶದಲ್ಲಿ ಜಾತಿಗಣತಿ ಮಾಡಿಸಬೇಕು’ ಎಂದು ಒತ್ತಾಯಿಸಿದರು. 

‘ಅಲೆಮಾರಿಗಳಿಗೆ ಶಾಶ್ವತ ಸೂರು ಕಲ್ಪಿಸಿ’ ‘ತೀರ್ಥಹಳ್ಳಿ ಬಳಿಯ ಬುಕ್ಲಾಪುರದಲ್ಲಿ ನೆಲೆಸಿರುವ ಅಲೆಮಾರಿ ಸಮದಾಯದ ದೊಂಬರಿಗೆ (ದೊಂಬ್ರು) ಶಾಶ್ವತ ಪುನರ್‌ವಸತಿ ಕಲ್ಪಿಸಿ’ ಎಂದು ಚೇತನ್ ಅಹಿಂಸಾ ಒತ್ತಾಯಿಸಿದರು. ‘ತೀರ್ಥಹಳ್ಳಿ ಶಾಸಕ ಆರಗ‌ ಜ್ಞಾನೇಂದ್ರ ಈ ಹಿಂದೆ ಸಚಿವರಾಗಿದ್ದರು. ಅವರೂ ತಮ್ಮದೇ ಕ್ಷೇತ್ರದ ಈ ಅಲೆಮಾರಿ ಸಮುದಾಯದವರನ್ನು ಮರೆತಿದ್ದಾರೆ. ಮಧು ಬಂಗಾರಪ್ಪ ಸಚಿವರಾಗಿ ವರ್ಷ ಕಳೆದರೂ ಈ  ಸಮುದಾಯದ ಪುನರ್ ವಸತಿಗೆ ಕ್ರಮ ಕೈಗೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಅಲೆಮಾರಿಗಳ ಅಭಿವೃದ್ಧಿಗೆ ಕೊಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದೆ. ಅದನ್ನು ಬಳಸಿಕೊಂಡು ಈ ಸಮುದಾಯದವರಿಗೆ ಮನೆ ನಿರ್ಮಿಸಿಕೊಡಬೇಕು’ ಎಂದು ಆಗ್ರಹಿಸಿದರು.  ‘ಅಲೆಮಾರಿಗಳಿಗೆ ಶಾಶ್ವತ ಸೂರಿನ ಸಮಸ್ಯೆ ಇಡೀ ರಾಜ್ಯದಲ್ಲಿ ಇದೆ. ಶಿವಮೊಗ್ಗದ ಅಂಬೇಡ್ಕರ್ ಕಾಲೊನಿ ಸಹ್ಯಾದ್ರಿ ಕಾಲೇಜು ಪಕ್ಕದ ಬೈಪಾಸ್‌ ಬಳಿ ಅಲೆಮಾರಿಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ಸರ್ಕಾರ ಮೂಲ ಸೌಲಭ್ಯಗಳನ್ನು ಕಲ್ಪಿಸಲಿ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಟಿ.ಹಾಲೇಶಪ್ಪ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT