ಕಡೇನಂದಿಹಳ್ಳಿ (ಶಿರಾಳಕೊಪ್ಪ): ‘ಮೌಲ್ಯಾಧಾರಿತ ಜೀವನ ಬದುಕಿಗೆ ಶ್ರೇಯಸ್ಸು ಮತ್ತು ಬೆಲೆ ತಂದು ಕೊಡುತ್ತದೆ. ಮನುಷ್ಯ ತಿಳಿದಿರುವುದಕ್ಕಿಂತ ತಿಳಿಯಬೇಕಾಗಿರುವುದು ಬಹಳಷ್ಟಿದೆ. ಸುಖ, ದುಃಖಗಳ ಸಮ್ಮಿಶ್ರಣವೇ ಜೀವನ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕಡೇನಂದಿಹಳ್ಳಿಯಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್ ಅಂಗವಾಗಿ ನಡೆದ ಧರ್ಮ ಸಮಾರಂಭದ 3ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಮಾನವ ಜೀವನ ಅಮೂಲ್ಯವಾದುದು. ದೇವರು ಕೊಟ್ಟ ಅಮೂಲ್ಯ ವರ. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ಗುರಿಯಿರಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಆದರ್ಶಗಳೇ ದಾರಿದೀಪ. ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಕಣ್ಮರೆಯಾದರೆ ಧರ್ಮ, ಸಂಸ್ಕೃತಿ ಉಳಿಯಲಾರದು. ವೈಚಾರಿಕತೆಯ ಬಿರುಗಾಳಿಯಲ್ಲಿ ಸತ್ಯ, ಸಂಸ್ಕೃತಿ ಮತ್ತು ಧರ್ಮಾಚರಣೆಗಳು ನಾಶಗೊಳ್ಳಬಾರದು. ಸುಧಾರಣೆಯ ಹೆಸರಿನಲ್ಲಿ ನಾಸ್ತಿಕ ಮನೋಭಾವ ಬೆಳೆಯಲು ಯಾರೂ ಅವಕಾಶ ಕೊಡಬಾರದು’ ಎಂದು ಕಿವಿಮಾತು ಹೇಳಿದರು.
‘ಕ್ರಿಯಾಶೀಲ ಬದುಕು ಜೀವನ ಶ್ರೇಯಸ್ಸಿಗೆ ಅಡಿಪಾಯ ಎಂದು ‘ವೀರಶೈವ ಧರ್ಮ ದರ್ಶನದಲ್ಲಿ’ ರೇಣುಕಾಚಾರ್ಯರು ಸ್ಪಷ್ಟವಾಗಿ ಬೋಧಿಸಿದ್ದಾರೆ. ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆಯಾಗಬಾರದು. ಯುವ ಜನಾಂಗದಲ್ಲಿ ಆತ್ಮಸ್ಥೈರ್ಯ ಮತ್ತು ಕ್ರಿಯಾಶೀಲತೆ ಬೆಳೆಸುವ ಸದ್ಭಾವನೆ ಬೆಳೆಯಬೇಕಿದೆ. ಕೋಣಂದೂರಿನ ಸಾಧನೆಯ ಶಿಖರ ಕೆ.ಆರ್.ಪ್ರಕಾಶ ಅವರಿಗೆ ‘ರಂಭಾಪುರಿ ಯುವಸಿರಿ’ ಪ್ರಾಪ್ತವಾಗಿರುವುದು ಸಂತೋಷ ತಂದಿದೆ’ ಎಂದರು.
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ‘ಆತ್ಮಬಲ ಸಂವರ್ಧಿಸಲು ಮತ್ತು ಆದರ್ಶ ಚಿಂತನೆಗಳು ಬೆಳೆದುಕೊಂಡು ಬರಬೇಕಾದರೆ ಅಧ್ಯಾತ್ಮದ ಉತ್ಕೃಷ್ಟ ಚಿಂತನೆ–ಪರಿಪಾಲನೆ ಮುಖ್ಯ. ಜನರಲ್ಲಿ ಗೊಂದಲ ಮೂಡಿಸದೇ ಸನ್ಮಾರ್ಗದತ್ತ ಮುನ್ನಡೆಸುವ ಆದರ್ಶ ಗುರುಗಳು ನಮಗೆ ಬೇಕಾಗಿದ್ದಾರೆ. ಈ ದಿಸೆಯಲ್ಲಿ ರಂಭಾಪುರಿ ಪೀಠ ಧರ್ಮ ಸಂಸ್ಕೃತಿಯ ಬೆಳವಣಿಗಾಗಿ ನಿರಂತರ ಶ್ರಮಿಸುತ್ತಿದೆ. ಇದಕ್ಕೆ ಈ ದಸರಾ ಧರ್ಮ ಸಮಾರಂಭ ಸಾಕ್ಷಿ’ ಎಂದು ತಿಳಿಸಿದರು.
ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ನವರಾತ್ರಿ ನಾಡಹಬ್ಬದ ಆಚರಣೆಯ ಬಗೆಗೆ ಉಪದೇಶಮೃತವನ್ನು ನೀಡುತ್ತ ಆದಿಶಕ್ತಿಯ ಶಕ್ತಿ ಅದ್ಭುತವಾದುದು. ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಗೊಂಡ ರಂಭಾಪುರಿ ಶ್ರೀಗಳ ಧ್ಯೇಯ ಧೋರಣೆಗಳು ನಮ್ಮೆಲ್ಲರ ಬಾಳಿಗೆ ಬೆಳಕು ತರುತ್ತವೆ’ ಎಂದು ಹೇಳಿದರು.
ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ ಭಟ್ ಗುರೂಜಿ, ಬ್ರಹ್ಮಾಂಡ ಗುರೂಜಿ ಖ್ಯಾತಿಯ ನರೇಂದ್ರಬಾಬು ಶರ್ಮ ಮಾತನಾಡಿದರು.
ಸಮಾರಂಭದಲ್ಲಿ ದಿಂಡದಹಳ್ಳಿ, ಮಳಲಿ, ಸಿದ್ಧರಬೆಟ್ಟ ಹಾರನಹಳ್ಳಿ, ಸಂಗೊಳ್ಳಿ, ಚನ್ನಗಿರಿ, ಕೊಡಿಯಾಲ ಹೊಸಪೇಟೆ, ಗುಳೇದಗುಡ್ಡ ಶ್ರೀ ಸೇರಿ ವಿವಿಧೆಡೆಯ ಮಠಾಧೀಶರು ಇದ್ದರು.
ಚಿಕ್ಕೇರಿಯ ಕುಮಾರಿ ಎಸ್.ಕೆ. ಲೇಖನ ಮತ್ತು ಶಿಕಾರಿಪುರದ ಬಿ.ಪಿ ಹೇಮಾ ಭರತ ನಾಟ್ಯ ಪ್ರದರ್ಶಿಸಿದರು.
ಅಖಿಲ ಕರ್ನಾಟಕ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತಿ ಸ್ವಾಗತಿಸಿದರು. ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗದುಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಶಿವಮೊಗ್ಗದ ಶಾಂತಾ ಆನಂದ, ವೀರೇಂದ್ರ ಪಾಟೀಲ ಬಂಕವಳ್ಳಿ ನಿರೂಪಿಸಿದರು. ಸಮಾರಂಭದ ನಂತರ ಆಕರ್ಷಕ ನಜರ್ (ಗೌರವ) ಸಮರ್ಪಣೆ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.