ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ವಸೂಲಾತಿಗೆ ಆದ್ಯತೆ ನೀಡಿ: ಕುಮಾರ್ ಬಂಗಾರಪ್ಪ

ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕುಮಾರ್ ಬಂಗಾರಪ್ಪ
Last Updated 12 ಜನವರಿ 2022, 5:47 IST
ಅಕ್ಷರ ಗಾತ್ರ

ಸೊರಬ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸ್ಥಳೀಯವಾಗಿ ಜನರಿಗೆ ಕೆಲಸ ನೀಡಬೇಕು. ಜೊತೆಗೆ ಕಂದಾಯ ವಸೂಲಾತಿಯಿಂದ ಗ್ರಾಮ ಪಂಚಾಯಿತಿ ಸಂಪನ್ಮೂಲ ಹಾಗೂ ಆಸ್ತಿಯನ್ನು ಹೆಚ್ಚಿಸಿಕೊಳ್ಳುಲು ಅಭಿವೃದ್ಧಿ ಅಧಿಕಾರಿಗಳು ಒತ್ತು ನೀಡಬೇಕು ಎಂದು ಶಾಸಕ ಎಸ್.ಕುಮಾರ ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಬಾರಿ ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿಯಲ್ಲಿ ಮುಂಚೂಣಿಯಲ್ಲಿದ್ದು, ಕೆಲವು ತಾಂತ್ರಿಕ ದೋಷದಿಂದ ಅನುದಾನದ ಕೊರತೆಯಿಂದಾಗಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗ ಮತ್ತೆ ಅನುದಾನ ಬಿಡುಗಡೆಯಾಗುತ್ತಿದ್ದು, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಗುರಿಯನ್ನು ಕಡ್ಡಾಯವಾಗಿ ಮುಟ್ಟಬೇಕು. ಯಾವುದೇ ಕಾರಣಕ್ಕೂ ಯೋಜನೆಯ ಅನುದಾನ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ, ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಶೇಕಡ 10ರ ಅನುದಾನದ ರಸ್ತೆ ನಿರ್ಮಾಣದ ಗುರಿಯನ್ನು ಶೇ 20ಕ್ಕೆ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮಾರ್ಚ್ ಅಂತ್ಯದೊಳಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಂದಲೂ ನರೇಗಾ ಯೋಜನೆಯ ಕ್ರಿಯಾ ಯೋಜನೆ ಸಲ್ಲಿಕೆಯಾಗಬೇಕು’ ಎಂದು ಪಿಡಿಒಗಳಿಗೆ ಸೂಚಿಸಿದರು.

‘ಗ್ರಾಮ ಪಂಚಾಯಿತಿಗೆ ಮುಖ್ಯವಾಗಿ ಸಂಪನ್ಮೂಲ ಕ್ರೋಡೀಕರಣಗೊಳ್ಳಬೇಕಾದರೆ ಕಂದಾಯ ವಸೂಲಾತಿ ಕಡ್ಡಾಯವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಕೆಲವೇ ಗ್ರಾಮ ಪಂಚಾಯಿತಿಗಳು ವಸೂಲಾತಿಯಲ್ಲಿ ತೃಪ್ತಿ ತಂದಿದ್ದು, ಇನ್ನು ಕೆಲವು ಗ್ರಾಮ ಪಂಚಾಯಿತಿಗಳು ನಿರಾಶಾದಾಯಕವಾಗಿವೆ. ಕಂದಾಯ ವಸೂಲಾತಿಯಲ್ಲಿ ಪ್ರಗತಿ ಸಾಧಿಸಿಲ್ಲ’ ಎಂದರು.

‘ವಸತಿ ಯೋಜನೆಯಡಿ ಮನೆಗಳ ಆಯ್ಕೆ ಪಟ್ಟಿಯನ್ನು ಗ್ರಾಮ ಸಭೆಯಲ್ಲಿಯೇ ಅಂತಿಮಗೊಳಿಸಿಕೊಂಡು ಯಾವುದೇ ರಾಜಕಾರಣವನ್ನು ಬಳಸದೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆಯ್ಕೆಯಲ್ಲಿ ರಾಜಕಾರಣ ಕಂಡುಬಂದರೆ ಅಂತಹ ಪಟ್ಟಿಯ
ನ್ನು ಕೈ ಬಿಡಲಾಗುವುದು ಜ.18ರೊಳಗೆ ಅಂತಿಮ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಬೇಕು’ ಎಂದು ಪಿಡಿಒಗಳಿಗೆ ಸೂಚಿಸಿದರು.

‘ಸ್ವಚ್ಛ ಗ್ರಾಮ ಯೋಜನೆಯಡಿ ತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸ್ವಚ್ಛ ಭಾರತ ಯೋಜನೆಯ ಸಫಲತೆಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ವಸತಿ ಯೋಜನೆಯಡಿ ನೀಡಿದ ಮನೆಗಳು ಹಾಗೂ ಇನ್ನಿತರೆ ಇಲಾಖೆಗಳಲ್ಲಿ ನಿರ್ಮಿಸುವ ಶೌಚಾಲಯದಲ್ಲಿ ವೆಸ್ಟರ್ನ್ ಕಮೋಡ್ ನಿರ್ಮಸಲು ಆದ್ಯತೆ ನೀಡಿ ಇಂಡಿಯನ್ ಕಮೋಡ್‌ಗಳನ್ನು ಹಾಕದಂತೆ ನೋಡಿಕೊಳ್ಳಬೇಕು. ಇದರಿಂದ ನೀರಿನ ಮಿತವ್ಯಯ ಸಾಧ್ಯ’ ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಕೆ.ಜಿ. ಕುಮಾರ್, ಕೆಡಿಪಿ ನಾಮ ನಿರ್ದೇಶನ ಸದಸ್ಯ ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT