ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಮಸೂದೆ ವಿರೋಧಿಸಿ 10ಕ್ಕೆ ಪ್ರತಿಭಟನೆ

Last Updated 6 ಆಗಸ್ಟ್ 2021, 3:39 IST
ಅಕ್ಷರ ಗಾತ್ರ

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಿದ್ಯುತ್ ತಿದ್ದುಪಡಿ ಮಸೂದೆ ವಿರೋಧಿಸಿ ಆ.10ರಂದು ಬೆಳಿಗ್ಗೆ 11ಕ್ಕೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.

ಕೇಂದ್ರ ಸರ್ಕಾರ ಈ ಹಿಂದೆ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ. ಕಾಯ್ದೆ ಗಳನ್ನು ವಿರೋಧಿಸಿ ದೇಶದಾದ್ಯಂತ ರೈತ ಚಳವಳಿ ನಡೆಯುತ್ತಿದ್ದರೂ, ಕೇಂದ್ರ ಸರ್ಕಾರ ಕಾಯ್ದೆಗಳನ್ನು ವಾಪಸ್‌ ಪಡೆಯದೇ ಮೊಂಡುತನ ಪ್ರದರ್ಶನ ಮಾಡುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸುಪ್ರೀಂಕೋರ್ಟ್ 18 ತಿಂಗಳು ಈ ಕಾಯ್ದೆಗಳನ್ನು ಜಾರಿ ಮಾಡಬಾರದು ಎಂದು ಆದೇಶ ನೀಡಿದ್ದರೂ
ಪ್ರಸಕ್ತ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮತ್ತೆ ವಿದ್ಯುತ್ ಮಸೂದೆ ಮಂಡಿಸುತ್ತಿದೆ. ಈ ಮಸೂದೆ ತಿದ್ದುಪಡಿಯಲ್ಲಿ ವಿದ್ಯುತ್ ಪೂರೈಕೆಯ ಉಪ ಗುತ್ತಿಗೆಗೆ ಅವಕಾಶವಿದೆ. ಈ ಮೂಲಕ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮಸೂದೆ ತಿದ್ದುಪಡಿ ರೈತರಿಗೆ, ಗ್ರಾಹಕರಿಗೆ ಮರಣ ಶಾಸನವಾಗಿದೆ. ವಿದ್ಯುತ್ ಪೂರೈಕೆ ಖಾಸಗೀಕರಣಗೊಂಡರೆ ರೈತರು, ಕೂಲಿ ಕಾರ್ಮಿಕರಿಗೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್‌ಸೆಟ್‌, ಬೀದಿ ದೀಪ, ನೀರು ಸರಬರಾಜಿಗೆ ನೀಡುತ್ತಿರುವ ಉಚಿತ ವಿದ್ಯುತ್ ಬಂದ್ ಆಗಲಿದೆ. ರೈತರು ಸಹ ಮೊದಲು ಹಣ ಪಾವತಿಸಿ ಬಳಿಕ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಬಳಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ದೂರಿದರು.

ಈ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನೌಕರರ ಸಂಘ ಮತ್ತು ಅಧಿಕಾರಿ ಅಸೋಸಿಯೇಷನ್ ಒಕ್ಕೂಟಗಳ ಜತೆ ಸೇರಿ ಪ್ರತಿಭಟನೆ ನಡೆಸಲಾಗುವುದು. ರೈತರು, ಕೂಲಿ ಕಾರ್ಮಿಕರು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವಿದ್ಯುತ್ ನಿಗಮದ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ರಾದ ಎಸ್.ಶಿವಮೂರ್ತಿ, ಈ.ಬಿ.ಜಗದೀಶ್, ಹಿಟ್ಟೂರು ರಾಜು, ಟಿ.ಎಚ್.ಹಾಲೇಶಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT