ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಸಾವಿರ ಕೋಟಿ ಬಂದರೂ ‘ಸ್ಮಾರ್ಟ್‌ ಆಗದ ಸಿಟಿ’

Last Updated 3 ಡಿಸೆಂಬರ್ 2020, 11:44 IST
ಅಕ್ಷರ ಗಾತ್ರ

ಶಿವಮೊಗ್ಗ: ಸುಲಲಿತ ನಿರ್ವಹಣೆ, ಕಾಗದ ರಹಿತ ಆಡಳಿತ, ಸ್ವಚ್ಛ, ಸುಂದರ ನಗರ ಶಿವಮೊಗ್ಗದ ಕನಸು ನನಸಾಗಿಸುವ ‘ಸ್ಮಾರ್ಟ್‌ ಸಿಟಿ’ ಯೋಜನೆಗೆ ಸುಮಾರು ₹ 1 ಸಾವಿರ ಕೋಟಿ ಹರಿದು ಬಂದರೂ, ಸಿಟಿ ಸ್ಮಾರ್ಟ್‌ ಆಗಿಲ್ಲ.

ರಾಜ್ಯ ಸರ್ಕಾರದ ಸಹಯೋಗದಲ್ಲಿ ಕೇಂದ್ರ ರೂಪಿಸಿದ ಈ ಯೋಜನೆಯ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ಅನುಷ್ಠಾನಗೊಂಡಿಲ್ಲ. ಕಾಮಗಾರಿಗಳು ಆರಂಭವಾಗಿ ವರ್ಷಗಳು ಕಳೆದರೂ ಅರೆಬರೆಯಾಗಿವೆ. ಇದರಿಂದ ನಾಗರಿಕರಿಗೆ ನಿತ್ಯವೂ ಕಿರಿಕಿರಿ ಮಾಡುತ್ತಿವೆ. ಕಿತ್ತು ಹೋದ ರಸ್ತೆಗಳು, ಅಗೆದು ಬಿಟ್ಟ ಚರಂಡಿ ಗುಂಡಿಗಳು, ದೂಳುಮಯ ವಾತಾವರಣ ನಿರ್ಮಿಸಿವೆ.

ಶಿವಮೊಗ್ಗಕ್ಕೆ ₹ 980 ಕೋಟಿ ನೆರವು

ಕೇಂದ್ರ ಸರ್ಕಾರ ದೇಶದ 100 ನಗರಗಳನ್ನು ಮಾದರಿಯಾಗಿಅಭಿವೃದ್ಧಿಪಡಿಸಲು‘ಸ್ಮಾರ್ಟ್‌ಸಿಟಿ’ ಯೋಜನೆ ಜಾರಿಗೆ ತಂದಿತ್ತು.ಎರಡನೇ ಹಂತದಲ್ಲಿ (20, ಸೆಪ್ಟೆಂಬರ್ 2016) ಆಯ್ಕೆಯಾದ ರಾಜ್ಯದ ನಾಲ್ಕು ನಗರಗಳಲ್ಲಿ ಶಿವಮೊಗ್ಗಕ್ಕೂ ಸ್ಥಾನ ದೊರಕಿತ್ತು. ಈ ಯೋಜನೆಗೆ ಆಯ್ಕೆಯಾದ ನಗರಗಳಿಗೆ ಪ್ರತಿ ವರ್ಷ ಕೇಂದ್ರ ₹ 100 ಕೋಟಿ, ರಾಜ್ಯ ₹ 100 ಕೋಟಿಯಂತೆ 5 ವರ್ಷಗಳು ನೆರವುನೀಡುತ್ತಿವೆ. ಶಿವಮೊಗ್ಗ ನಗರಕ್ಕೆ ಈಗಾಗಲೇ ₹ 980 ಕೋಟಿ ನೆರವು ದೊರೆತಿದೆ.

2008–11ರಲ್ಲೇ ಅಭಿವೃದ್ಧಿ ಪರ್ವ

ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ (2008–11) ಅವಧಿಯಲ್ಲಿ ನೂರಾರು ಕೋಟಿ ಅನುದಾನ ಮಂಜೂರು ಮಾಡಿದ್ದರು. ವೈದ್ಯಕೀಯ ಕಾಲೇಜು, ಕೃಷಿ ವಿಶ್ವವಿದ್ಯಾಲಯ, ಆಯುರ್ವೇದ ಕಾಲೇಜು, ಹೈಟೆಕ್‌ ಮಾರುಕಟ್ಟೆ, ಹೈಟೆಕ್‌ ಬಸ್‌, ರೈಲು ನಿಲ್ದಾಣಗಳು, ರಸ್ತೆಗಳ ವಿಸ್ತರಣೆ ಸೇರಿದಂತೆ ಶಿವಮೊಗ್ಗ ನಗರ ಸರ್ವತೋಮುಖ ಅಭಿವೃದ್ಧಿ ಕಂಡಿತ್ತು.

ಪ್ರಸಕ್ತ ₹ 980 ಕೋಟಿ ವೆಚ್ಚದ 50 ಕಾಮಗಾರಿಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗಿದೆ. ಸೈಕಲ್‌ ಟ್ರ್ಯಾಕ್, ನದಿ ತೀರದ ಅಭಿವೃದ್ಧಿ, ಡಿಜಿಟಲ್‌ ಲೈಬ್ರರಿ, ಪಾರ್ಕ್‌ಗಳ ಅಭಿವೃದ್ಧಿ, ಸ್ಮಾರ್ಟ್‌ ಪೋಲ್ ಅಳವಡಿಕೆ, ಕಸ ವಿಲೇವಾರಿಗೆ ಜಿಪಿಎಸ್ ವ್ಯವಸ್ಥೆ, ನೆಹರೂ ಕ್ರೀಡಾಂಗಣ ಅಭಿವೃದ್ಧಿ, ಕನ್ಸರ್‌ವೆನ್ಸಿಗಳ ಅಭಿವೃದ್ಧಿ, ಪಾರ್ಕಿಂಗ್ ವ್ಯವಸ್ಥೆ, ನಗರದ ಹಲವೆಡೆ ಆಟೊರಿಕ್ಷಗಳ ನಿಲ್ದಾಣ, ಯುಜಿಡಿ, 24X7 ಕುಡಿಯುವ ನೀರಿನ ಯೋಜನೆ, ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಸುಮಾರು ₹ 5 ಕೋಟಿ ವೆಚ್ಚದಲ್ಲಿ 9 ಶಾಲೆಗಳು, 2 ಕಾಲೇಜು ಮತ್ತು 4 ಗ್ರಂಥಾಲಯಗಳನ್ನು ‘ಸ್ಮಾರ್ಟ್ ಲೈಬ್ರರಿ’ಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ₹ 538 ಕೋಟಿ ವೆಚ್ಚದಲ್ಲಿ 108 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 2.80 ಕಿ.ಮೀ ಹೆರಿಟೇಜ್ ವಾಕ್, ₹ 20 ಕೋಟಿ ವೆಚ್ಚದಲ್ಲಿ 7 ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ. ₹ 130 ಕೋಟಿ ವೆಚ್ಚದಲ್ಲಿ ತುಂಗಾ ನದಿ ದಂಡೆ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಕೈಗೊಂಡ 50 ಕಾಮಗಾರಿಗಳಲ್ಲಿ 9 ಪೂರ್ಣಗೊಂಡಿವೆ. ಬಿಡುಗಡೆಯಾಗಿದ್ದ ₹ 307 ಕೋಟಿಯಲ್ಲಿ ₹ 173 ಕೋಟಿ ಖರ್ಚು ಮಾಡಲಾಗಿದೆ. ಉಳಿದ ಹಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ. ಕೆಲವು ಯೋಜನೆಗಳಿಗೆ ಟೆಂಡರ್ ಪಡೆಯಲು ಗುತ್ತಿಗೆದಾರರೇ ಮುಂದೆ ಬಂದಿಲ್ಲ.

‘ನಗರದಲ್ಲಿ ಒಂದು ಗಂಟೆ ದೊಡ್ಡ ಮಳೆಯಾದರೆ ಸಾಕು ಹಲವು ಬಡಾವಣೆಗಳು ಜಲಾವೃತವಾಗುತ್ತವೆ. ಸಾವಿರಾರು ಮನೆಗಳಒಳಗೆ ನೀರು ನುಗ್ಗುತ್ತದೆ. ಇದು ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಫಲ. ಸ್ಮಾರ್ಟ್‌ ಸಿಟಿ ಯೋಜನೆ ರೂಪಿಸುವಾಗ ನಗರದ ನಾಲ್ಕು ಲಕ್ಷ ಜನರಿಗೆ ಅಗತ್ಯ ಮೂಲ ಸೌಕರ್ಯಗಳಿಗೆ ಒತ್ತು ನೀಡಬೇಕಿತ್ತು ಅಥವಾ ಅಗತ್ಯ ಸೌಕರ್ಯಗಳಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕಿತ್ತು. ಈ ಎರಡೂ ಕೆಲಸಗಳನ್ನು ನಿರ್ಲಕ್ಷಿಸಲಾಗಿದೆ. ನೆಲದೊಳಗೆ ವಿದ್ಯುತ್ ಮಾರ್ಗ ಎಳೆಯುವಾಗ ನಿಗದಿತ ಆಳದಲ್ಲಿ ತೆಗೆದುಕೊಂಡು ಹೋಗಿಲ್ಲ. ಗುಣಮಟ್ಟದ ಪರಿಕರ ಬಳಸಿಲ್ಲ. ಇವು ಭವಿಷ್ಯದಲ್ಲಿ ಹೊಸ ಸಮಸ್ಯೆಗಳನ್ನು ಸೃಷ್ಟಿಸಬಹುದು’ ಎನ್ನುತ್ತಾರೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಅಧಕ್ಷ ಕೆ.ವಿ. ವಸಂತಕುಮಾರ್.

ತುಂಗೆಗೆ ದೊರಕದ ಸಬರಮತಿ ಸ್ಪರ್ಶ

ತುಂಗಾ ನದಿಯ ಉತ್ತರ ತೀರವನ್ನು ಅಭಿವೃದ್ಧಿಪಡಿಸಿ, ಗುಜರಾತ್‌ನ ಸಬರಮತಿ ಮಾದರಿಯ ಸ್ಪರ್ಶ ನೀಡಲು ಯೋಜನೆ ರೂಪಿಸಲಾಗಿತ್ತು. ತುಂಗಾ ನದಿಯ ಹೊಸ ಸೇತುವೆಯಿಂದ ಹೊಳೆ ನಿಲ್ದಾಣದವರೆಗೆ ಒಟ್ಟು 2.6 ಕಿ.ಮೀ ಪ್ರದೇಶವನ್ನು ನಾಗರಿಕ ಸ್ನೇಹಿ ಪ್ರವಾಸಿ ತಾಣವಾಗಿ ರೂಪಿಸಲು, 6.5 ಹೆಕ್ಟೇರ್ ವ್ಯಾಪ್ತಿಯಲ್ಲಿ ವಿವಿಧ ಜಲಕ್ರೀಡಾ ಚಟುವಟಿಕೆ, ವಾಯುವಿಹಾರ ಪಥ, ವಾಣಿಜ್ಯ ಸಂಕೀರ್ಣಗಳು, ಮಾಹಿತಿ ಕೇಂದ್ರ, ಜೆಟ್ಟಿಗಳು, ಗಣಪತಿ ವಿಸರ್ಜನೆಗೆ ಪ್ರತ್ಯೇಕ ಕೆರೆ ನಿರ್ಮಿಸಲು ನಿರ್ಧರಿಸಲಾಗಿತ್ತು. ವೀಕ್ಷಣಾ ಗೋಪುರ, ಮಕ್ಕಳ ಆಟಿಕೆ ತಾಣಗಳು, ಉದ್ಯಾನ, ಶಿವಮೊಗ್ಗ ನಗರದ ಇತಿಹಾಸ ಬಿಂಬಿಸುವ ಗೋಡೆ ಚಿತ್ರಗಳು, ಬೆಳಕಿನ ವ್ಯವಸ್ಥೆ, ದಾಟು ಸೇತುವೆ, ಜಿಮ್ ಸೌಲಭ್ಯ ಒದಗಿಸುವ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ. ನದಿಗೆ ಬಿಡುವ ಕಲ್ಮಶ ತಡೆಯಲು ಸಾಧ್ಯವಾಗಿಲ್ಲ.

ಮಿಯಾವಕಿ ಮಾದರಿಯಲ್ಲಿ ಅಭಿವೃದ್ಧಿಗೂ ವಿರೋಧ

ನಗರ ಪಾಲಿಕೆ ವ್ಯಾಪ್ತಿಯ 40 ಎಕರೆಯಲ್ಲಿಸಸಿಗಳನ್ನು ನೆಟ್ಟು,ಜಪಾನಿನ ಮಿಯಾವಕಿ ಅರಣ್ಯ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. 11 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಗೋಪಾಲ ಗೌಡ ಪಾರ್ಕ್, ಸೋಮಿನಕೊಪ್ಪ, ಶಾರದಮ್ಮ ಲೇಔಟ್ (ಮೈತ್ರಿ ಹಾಸ್ಟೆಲ್ ಹಿಂಭಾಗ), ಎಚ್‍ಟಿ ಲೈನ್ ಕಾರಿಡಾರ್, ದ್ರೌಪದಮ್ಮ ಸರ್ಕಲ್, ವಿನೋಬನಗರ ಪಾರ್ಕ್, ಇಂದಿರಾ ಕ್ಯಾಂಟೀನ್‌, ಸಮುದಾಯ ಭವನ, 60 ಅಡಿ ರಸ್ತೆ, ಎಸ್‍ಟಿಪಿ ತ್ಯಾವರಚಟ್ನಳ್ಳಿ, ವಾಜಪೇಯಿ ಲೇಔಟ್, ರಾಗಿಗುಡ್ಡ ಮತ್ತು ವಿದ್ಯಾನಗರ ಜ್ಞಾನ ವಿಹಾರದಲ್ಲಿಭೂಮಿ ಗುರುತಿಸಲಾಗಿದೆ. ಆದರೆ, 7 ಸಾವಿರ ಸಸಿಗಳನ್ನು ನೆಡಲು ₹ 3.81 ಕೋಟಿ ದೊಡ್ಡ ಮೊತ್ತ ನಿಗದಿ ಮಾಡಿರುವುದಕ್ಕೆ ವಿವಿಧ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

‘ಗುತ್ತಿಗೆದಾರರ ಸಮಸ್ಯೆ, ಕೊರೊನಾದಿಂದ ಕಾರ್ಮಿಕರ ಕೊರತೆ ಮೊದಲಾದ ಕಾರಣಕ್ಕೆ ಕಾಮಗಾರಿಗಳು ನಿರೀಕ್ಷಿತ ವೇಗ ಪಡೆದಿರಲಿಲ್ಲ. ಈಗ ಏಕ ಕಾಲಕ್ಕೆ ಹಲವು ಕಾಮಗಾರಿಗಳ ಅನುಷ್ಠಾನ ಭರದಿಂದ ಸಾಗಿದೆ. ನಿಗದಿತ ಅವಧಿಯ ಒಳಗೆ ಪೂರ್ಣಗೊಳ್ಳಲಿವೆ’ ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ.

ನೇಮಕವಾಗದ ಪ್ರತ್ಯೇಕ ಎಂ.ಡಿ

‘ಸ್ಮಾರ್ಟ್‌ ಸಿಟಿ’ ಯೋಜನೆಯ ಪಟ್ಟಿಯಲ್ಲಿ ಶಿವಮೊಗ್ಗದ ಹೆಸರು ಸೇರಿದ ನಂತರ ಕೇಂದ್ರದ ನಿರ್ದೇಶನದಂತೆ ರಾಜ್ಯ ಸರ್ಕಾರ ‘ಶಿವಮೊಗ್ಗ ಸ್ಮಾರ್ಟ್‌ಸಿಟಿ ಲಿಮಿಟೆಡ್’ ಕಂಪನಿ ನೋಂದಾಯಿಸಲಾಗಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನೇತೃತ್ವದಲ್ಲಿ ಈ ಕಂಪನಿ ಕಾರ್ಯನಿರ್ವಹಿಸುತ್ತಿದೆ.ಎಂಜಿನಿಯರ್‌ಗಳ ತಂಡ, ಸಿಬ್ಬಂದಿ ನೇಮಕ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿಗಳು ಆರಂಭವಾಗಿವೆ. ಆದರೆ, ಇದುವರೆಗೂ ಸ್ಮಾರ್ಟ್‌ಸಿಟಿಗೆ ಪ್ರತ್ಯೇಕ ವ್ಯವಸ್ಥಾಪಕರ ನೇಮಕ ಮಾಡಿಲ್ಲ. ನಗರ ಪಾಲಿಕೆ ಆಯುಕ್ತರೇ ಇರಡೂ ಜವಾಬ್ದಾರಿ ನಿಭಾಯಿಸುತ್ತಾ ಬಂದಿದ್ದಾರೆ. ‘ಸ್ಮಾರ್ಟ್‌ ಸಿಟಿ’ಗೆ ಪ್ರತ್ಯೇಕ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಲು ಒತ್ತಡ ಬಂದರೂ, ಸರ್ಕಾರ ಸ್ಥಾನ ಭರ್ತಿ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT