ಶಿವಮೊಗ್ಗ: ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಕಾಮಗಾರಿಯನ್ನು ಮುಂಬರುವ ಜೂನ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಇಲಾಖೆ ಸಚಿವ ವಿ. ಸೋಮಣ್ಣ ಸೂಚನೆ ನೀಡಿದರು.
ತಾಲ್ಲೂಕಿನ ಕೋಟೆ ಗಂಗೂರಿನಲ್ಲಿ ನಿರ್ಮಿಸುತ್ತಿರುವ ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿಯನ್ನು ಗುರುವಾರ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳಿಗೆ ಸೂಚಿಸಿದ ಅವರು, ರಾಜ್ಯದಲ್ಲಿಯೇ ಮೊದಲ ಕೋಚಿಂಗ್ ಡಿಪೋ ಇದಾಗಿದೆ ಎಂದರು.
74 ಎಕರೆ ಪ್ರದೇಶದಲ್ಲಿ ₹ 80 ಕೋಟಿ ಹಣ ವೆಚ್ಚದಲ್ಲಿ ಕೋಚಿಂಗ್ ಡಿಪೋ ನಿರ್ಮಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಅಂಗ ಸಂಸ್ಥೆಯಾಗಿರುವ ರೈಟ್ಸ್ ಸಂಸ್ಥೆ ಕಾಮಗಾರಿ ಮಾಡುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟತೆ ಕಾಪಾಡುವಂತೆ ಸಂಸ್ಥೆ ನಿರ್ದೇಶಕರಿಗೆ ಸೂಚಿಸಿದ ಕೇಂದ್ರ ಸಚಿವರು, ಗುಣಮಟ್ಟವನ್ನು ಪರಿಶೀಲಿಸಲು ರೈಲ್ವೆ ಮುಖ್ಯ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ಕೋಚಿಂಗ್ ಡಿಪೋ ನಿರ್ಮಾಣವಾದ ಬಳಿಕ ರಾಜ್ಯದ ಎಲ್ಲ ರೈಲುಗಳು ಸ್ವಚ್ಛತೆಗಾಗಿ ಇಲ್ಲಿಗೆ ಬರಲಿವೆ. ಒಂದೇ ಭಾರತ್ ರೈಲುಗಳು ಸಹ ಬರಲಿದೆ. ರಾಜ್ಯದಲ್ಲಿ ₹ 45,000 ಕೋಟಿ ಮೊತ್ತದ ರೈಲ್ವೆ ಇಲಾಖೆಯಿಂದ ಡಬ್ಲಿಂಗ್, ಎಲೆಕ್ಟ್ರಿಫಿಕೇಶನ್ ಸೇರಿದಂತೆ ನಾನಾ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಕಷ್ಟು ದೂರದೃಷ್ಟಿ ಕೂಡ ಹೊಂದಿದ್ದಾರೆ. ಅವರ ಕನಸು ಸಾಕಾರಗೊಳಿಸಲಾಗುವುದು ಎಂದು ಹೇಳಿದರು.
ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಭೂಮಿ ನೀಡಿದ ರೈತರು ಸೇರಿದಂತೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆ ನಿರೀಕ್ಷೆಗೂ ಮೀರಿ ಅಭಿವೃದ್ಧಿಯಾಗುತ್ತಿದೆ. ಸಂಸ ಬಿ.ವೈ. ರಾಘವೇಂದ್ರ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರೈಲ್ವೆ ಕೋಚಿಂಗ್ ಡಿಪೋ ನಿರ್ಮಾಣ ಮಾಡಲು ಭೂಮಿ ನೀಡಿ 3 ವರ್ಷವಾಯಿತು. ಆದರೆ ಕಾಮಗಾರಿ ಬರೀ ಶೇ.25 ರಷ್ಟು ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಡಿಸೆಂಬರ್ ಅಂತ್ಯದೊಳಗೆ ಪಿಟ್‌ಲೈನ್ ಕಾಮಗಾರಿ ಪೂರ್ಣಗೊಳಿಸಬೇಕು. ಉಳಿದ ಕಾಮಗಾರಿ ನಂತರ ಮಾಡಿ. ಫಿಟ್ ಲೈನ್ ಕಾಮಗಾರಿ ಮುಗಿದರೆ ಒಂದೇ ಭಾರತ್ ರೈಲು ಮಂಜೂರಾತಿ ಆಗುತ್ತದೆ ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಿವಮೊಗ್ಗ ನಗರ ಪ್ರದೇಶದಲ್ಲಿ ರೈಲ್ವೆ ಗುಡ್‌ಶೆಡ್ ಇದೆ. ಇದನ್ನು ಸಹ ಕೋಚಿಂಗ್ ಡಿಪೋಗೆ ಶಿಫ್ಟ್ ಮಾಡಬೇಕು. ₹ 50 ಕೋಟಿ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಇದನ್ನು ಬಳಸಿಕೊಂಡು ಇದೇ ಜಾಗದಲ್ಲಿ ಗುಡ್‌ಶೆಡ್ ನಿರ್ಮಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಹೇಳಿದರು.
ಒಂದೇ ಭಾರತ್ ರೈಲು ಮಂಜೂರಾತಿ ಮಾಡಬೇಕು. ಅದಕ್ಕೆ ನೀವೇ ಚಾಲನೆ ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರ ಮನವಿಗೆ ಸ್ಪಂದಿಸಿದ ಸಚಿವ ವಿ. ಸೋಮಣ್ಣ ಅವರು, ಮೂರು ತಿಂಗಳೊಳಗೆ ಒಂದೇ ಭಾರತ್ ರೈಲು ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ಣಿಡಿದರು.
ಶಾಸಕ ಎಸ್.ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್, ಭಾರತಿ ಶೆಟ್ಟಿ, ಡಾ. ಧನಂಜಯ ಸರ್ಜಿ, ರೈಲ್ವೆ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.