ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ | ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ; ಸಾರ್ವಜನಿಕರಿಗೆ ಕಿರಿಕಿರಿ

ಎರಡು ವರ್ಷ ಕಳೆದರೂ ಮುಕ್ತಾಯಗೊಳ್ಳದ ಆರ್‌ಓಬಿ ನಿರ್ಮಾಣ
ಕಿರಣ್ ಕುಮಾರ್
Published 15 ಡಿಸೆಂಬರ್ 2023, 7:25 IST
Last Updated 15 ಡಿಸೆಂಬರ್ 2023, 7:25 IST
ಅಕ್ಷರ ಗಾತ್ರ

ಭದ್ರಾವತಿ: ಸಮೀಪದ ಕಡದಕಟ್ಟೆ ಬಳಿ ಪ್ರಗತಿಯಲ್ಲಿರುವ ರೈಲ್ವೆ ಮೇಲ್ಸೇತುವೆ (ಆರ್‌ಓಬಿ) ನಿರ್ಮಾಣ ಕಾಮಗಾರಿ 2 ವರ್ಷ ಕಳೆದರೂ ಪೂರ್ಣಗೊಳ್ಳದೆ ಮಂದಗತಿಯಲ್ಲಿ ಸಾಗುತ್ತಿದೆ.

ಕಾಮಗಾರಿ ವಿಳಂಬದಿಂದಾಗಿ ಶಿವಮೊಗ್ಗ– ಭದ್ರಾವತಿ ನಡುವೆ ಸಂಚಾರಿಸುವವರು ಮುಖ್ಯ ಬಸ್ ನಿಲ್ದಾಣ ತಲುಪಲು ಸುತ್ತಿಕೊಂಡು ಬರಬೇಕಾಗಿದೆ. ಇದರಿಂದ ಸಮಯ ವ್ಯರ್ಥವಾಗುಗುತ್ತಿದೆ.

ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಸ್ಥಗಿತಗೊಂಡು ನಗರಸಭೆ ವ್ಯಾಪ್ತಿಯ ಬಂಡಾರಹಳ್ಳಿ, ಹೆಬ್ಬಂಡಿ ಪ್ರದೇಶದ ನಿವಾಸಿಗಳು ಕಳೆದ ಎರಡು ವರ್ಷಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ರಸ್ತೆಯಲ್ಲಿ ಅಂಗಡಿ– ಮುಂಗಟ್ಟು ಹೊಂದಿರುವ ವ್ಯಾಪಾರಸ್ಥರು, ವರ್ತಕರ ಸ್ಥಿತಿ ಹೇಳತೀರದಾಗಿದೆ. ವ್ಯಾಪಾರ, ವಹಿವಾಟು ನಡೆಯದೇ ಅವರೆಲ್ಲ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಈಗಿರುವ ಕಚ್ಚಾ ರಸ್ತೆಯಲ್ಲಿ ವಾಹನಗಳು ಸಾಗುವುದರಿಂದ ವಿಪರೀತ ದೂಳು ಹರಡಿ ಸ್ಥಳೀಯರಿಗೆ ಉಸಿರಾಟದ ತೊಂದರೆ ಆಗುತ್ತಿದೆ. ಈ ರಸ್ತೆಯಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ರೈತರ ವ್ಯವಸಾಯೋತ್ಪನ್ನ ಸಹಕಾರ ಸಂಘ, ಕಲ್ಯಾಣ ಮಂಟಪ, ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿವೆ. ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ವಿದ್ಯಾರ್ಥಿಗಳೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದು ಸ್ಥಳೀಯರ ಆರೋಪ.

ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಹೈದರಾಬಾದ್‌ನ ಎಸ್. ಆರ್. ಸಿ. ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ನಡೆಸುತ್ತಿದೆ. ಆರಂಭದಲ್ಲಿ ಚುರುಕುಗೊಂಡಿದ್ದ ಕಾಮಗಾರಿ ಈಗ ಮಂದಗತಿಯಲ್ಲಿ ನಡೆಯುತ್ತಿದೆ. ಸಂಸದ ಬಿ.ವೈ. ರಾಘವೇಂದ್ರ ರೈಲ್ವೆ ಇಲಾಖೆ ಎಂಜಿನಿಯರ್, ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಎರಡು-ಮೂರು ಬಾರಿ ಖುದ್ದಾಗಿ ಬಂದು ಈ ಮೇಲ್ಸೇತುವೆಯ ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ಆದರೆ ಕಾಮಗಾರಿ ಮಾತ್ರ ವೇಗ ಪಡೆಯುತ್ತಿಲ್ಲ.

ಕಾಮಗಾರಿ ಕಾರಣ ಬದಲಿ ರಸ್ತೆ ವ್ಯವಸ್ಥೆ ಮಾಡಿದ್ದರೂ ಅದು ಹದಗೆಟ್ಟಿದೆ
ಕಾಮಗಾರಿ ಕಾರಣ ಬದಲಿ ರಸ್ತೆ ವ್ಯವಸ್ಥೆ ಮಾಡಿದ್ದರೂ ಅದು ಹದಗೆಟ್ಟಿದೆ

‘ಸೇತುವೆ ಕಾಮಗಾರಿ ಆರಂಭಗೊಂಡಾಗಿನಿಂದ ರಸ್ತೆಯಲ್ಲಿ ಜನರ ಓಡಾಟವಿಲ್ಲದೇ ವಹಿವಾಟು ಸಂಪೂರ್ಣ ಕುಸಿದಿದೆ. ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ. ಕಾಮಗಾರಿ ಯಾವಾಗ ಮುಗಿಯುವುದೋ ಗೊತ್ತಿಲ್ಲ. ಇಲ್ಲಿ ವ್ಯಾಪಾರ ಆಗದ ಕಾರಣ ಬಾಡಿಗೆ ಇದ್ದವರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ’ ಎಂದು ಕಾರೇಹಳ್ಳಿಯ ಫ್ಯಾನ್ಸಿ ಸ್ಟೋರ್ ಮಾಲಕಿ ಲಿಜಿಯಾ ಬೇಸರ ವ್ಯಕ್ತಪಡಿಸುತ್ತಾರೆ.

ಲಿಜಿಯಾ
ಲಿಜಿಯಾ

ನಗರ ತಲುಪಲು 2 ಕಿ.ಮೀ ನಡೆದುಕೊಂಡು ಹೋಗಬೇಕಾಗಿದೆ. ಕಾಮಗಾರಿ ವಿಳಂಬದ ಬಗ್ಗೆ ಪ್ರಶ್ನಿಸುವವರು ಯಾರು ಇಲ್ಲದಂತಾಗಿದೆ ಎಂದು ಹೇಳುತ್ತಾರೆ.

ಗಿರೀಶ್
ಗಿರೀಶ್
ಮೇಲ್ಸೇತುವೆ ಕಾಮಗಾರಿ ಕಾರಣ ಪರ್ಯಾಯ ರಸ್ತೆ ಕಲ್ಪಿಸಿದ್ದರೂ ಅದು ಚಿಕ್ಕದಾಗಿದ್ದು ಸಂಪೂರ್ಣ ಹದಗೆಟ್ಟಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಗಿರೀಶ್ ಸ್ಥಳೀಯರು
ಮೇಲ್ಸೇತುವೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ. ದೊಡ್ಡ ಮಟ್ಟದ ಕಾಮಗಾರಿ ಆಗಿರುವುದರಿಂದ ಹೆಚ್ಚು ಸಮಯ ಹಿಡಿಯುತ್ತಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಗುತ್ತಿಗೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT