ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಳೆ ಹಾನಿ: ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲ’

ಅಧಿಕಾರಿಗಳ ಸಭೆಯಲ್ಲಿ ಶಾಸಕ ಹಾಲಪ್ಪ ಹರತಾಳು ಸೂಚನೆ
Last Updated 18 ಜುಲೈ 2021, 5:53 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನಲ್ಲಿ ಮಳೆ ಜೋರಾಗುತ್ತಿದ್ದು, ಹೆಚ್ಚಿನ ಮಳೆಹಾನಿ ಸಂಭವಿಸುವ ಲಕ್ಷಣವಿದೆ. ಅಧಿಕಾರಿಗಳು ಮಳೆಹಾನಿ ವಿಚಾರದಲ್ಲಿ ನಿರ್ಲಕ್ಷ್ಯ ತಾಳದೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಭಾರಿ ಮಳೆ ಸುರಿಯುತ್ತದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಅಧಿಕಾರಿಗಳು ಕ್ರಮಬದ್ಧ ವರದಿ ನೀಡಬೇಕು. ಮನೆ ಕುಸಿತವಾದಲ್ಲಿ ನಿರ್ದಿಷ್ಟ ವರದಿ ನೀಡಬೇಕು. ಕಚೇರಿಯಲ್ಲಿ ಕುಳಿತು ವರದಿ ತಯಾರಿಸಬೇಡಿ. ಸ್ಥಳಕ್ಕೆ ಹೋಗಿ ಪರಿಶೀಲಿಸಿ ನೋಡಿ ಫಲಾನುಭವಿಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡಬೇಕು. ಈ ಬಗ್ಗೆ ಅಧಿಕಾರಿಗಳು ಅಸಡ್ಡೆ ತಾಳಿದರೆ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶಾಲೆಗಳ ಗೋಡೆ, ಚಾವಣೆ ಕುಸಿದು ಹಾನಿಯಾದ ಬಗ್ಗೆ ದೂರು ಬಂದಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟು, ದುರಸ್ತಿ ಮಾಡಬೇಕು ಎಂದು ಬಿ‌ಇಒ ವೀರಭದ್ರಪ್ಪ ಅವರಿಗೆ ಸೂಚಿಸಿದರು.

ಮಳೆಗಾಲದಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಇರಬೇಕು. ಶಿವಮೊಗ್ಗದಲ್ಲಿ ಮನೆ ಮಾಡಿಕೊಂಡು, ಇಲ್ಲಿಗೆ ಬಂದು ಹೋಗುವವರು ಇಲ್ಲಿಯೇ ಇರಬೇಕು. ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ತಾಕೀತು ಮಾಡಿದರು.

ಕುಡಿಯಲು ಹಿನ್ನೀರ ನೀರು: ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಯೋಜನೆ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಶರಾವತಿ ಹಿನ್ನೀರು ಮತ್ತು ಮಾಣಿ, ಸಾವೇಹಕ್ಕಲು ಹಿನ್ನೀರು ಪ್ರದೇಶದಿಂದ ಗ್ರಾಮಗಳ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ. ಈ ಕುರಿತು ಯೋಗ್ಯ ಸ್ಥಳಗಳ ಪರಿಶೀಲನೆ, ಸರ್ವೆ ಕಾರ್ಯ ನಡೆಯುತ್ತಿದೆ ಎಂದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ಆಪರೇಷನ್‌ ರೂಂ ಸೋರುತ್ತಿದೆ. ಇಲ್ಲಿ ಆಪರೇಷನ್ ಮಾಡಲು ಆಗುತ್ತಿಲ್ಲ. ಒಬ್ಬರು ಪ್ರಸೂತಿ ತಜ್ಞರು ಇದ್ದರೂ ಆಪರೇಷನ್‌ ಮಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ದುರಸ್ತಿ ಮಾಡಿಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸುರೇಶ ನಾಯ್ಕ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ‘ಒಟಿ ರೂಂ ನೆಲ ಮಹಡಿಯಲ್ಲಿ ಇರಬೇಕು. ಯಾಕೆ ಮೊದಲ ಮಹಡಿಯಲ್ಲಿದೆ ಎಂದು ಪ್ರಶ್ನಿಸಿದರು. ಶೀಘ್ರ ದುರಸ್ತಿ ಮಾಡಿಸಲಾಗುವುದು’ ಎಂದು ಭರವಸೆ ನೀಡಿದರು.

ಪರೀಕ್ಷೆ ಹೆಚ್ಚಿನ ಗಮನ ನೀಡಿ: ಸೋಮವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುತ್ತಿದೆ. ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಆಗದಂತೆ ಮುತುವರ್ಜಿ ವಹಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳು ಇರಬೇಕು. ಮುಂಜಾಗೃತಾ ಕ್ರಮ ವಹಿಸಿ ಸರ್ಕಾರದ ಆದೇಶ ಪಾಲಿಸಬೇಕು. ಈ ವಿಚಾರದಲ್ಲಿ ಯಾರೂ ಸುಮ್ಮನೆ ಕೂರಬಾರದು ಎಂದು ಎಚ್ಚರಿಸಿದರು.

ತಾಲ್ಲೂಕಿನ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಮಕ್ಕಳನ್ನು ಸಕಾಲಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT