ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಗಳ ಬಗ್ಗೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಿಗಾವಹಿಸಲಿ: ಸೋಮಣ್ಣ

Last Updated 9 ಜೂನ್ 2021, 12:39 IST
ಅಕ್ಷರ ಗಾತ್ರ

ಶಿವಮೊಗ್ಗ: ಬಡವರಿಗೆ ನೆಲೆ ಕಲ್ಪಿಸಲು ಜಾರಿಗೆ ತಂದ ವಿವಿಧ ವಸತಿ ಯೋಜನೆಗಳು ಐದಾರು ವರ್ಷಗಳಿಂದಲ್ಲೂ ಪೂರ್ಣಗೊಂಡಿಲ್ಲ. ಶಾಸಕರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಿಗಾವಹಿಸಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಅನುಮೋದನೆಗೊಂಡು ಅನುಷ್ಠಾನ ಹಂತದಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಇಒಗಳ ಮೂಲಕ ಬಾಕಿ ಇರುವ ಬಿಲ್‌ಗಳನ್ನು ಕಳಿಸಿಕೊಟ್ಟರೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಹಣ ಪಾವತಿಸಲಾಗುತ್ತದೆ ಎಂದು ಭರವಸೆ ನೀಡಿದರು.

ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ, ವಿದ್ಯುತ್ ಸಂಪರ್ಕ, ರಸ್ತೆ ನಿರ್ಮಾಣದಂತಹ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ನೇರವಾಗಿ ಹಣಕಾಸು ನೆರವು ಒದಗಿಸಲಿದೆ. ಸಚಿವ ಸಂಪುಟದ ಮುಂದೆ ಪ್ರಸ್ತಾವ ಸಲ್ಲಿಸಿ, ಅನುಮೋದನೆ ಪಡೆಯಲಾಗುವುದು ಎಂದರು.

ರಾಜ್ಯದಲ್ಲಿ ಮೊದಲ ಬಾರಿಗೆ ಘೋಷಿತ ಸರ್ಕಾರಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಫಲಾನುಭವಿಗಳು ಕೊಳಚೆ ಮಂಡಳಿಗೆ ಪಾವತಿಸುವ ಮೊತ್ತಕ್ಕೆ ಮಾತ್ರ ಶುಲ್ಕ ವಿಧಿಸಲು ಎಲ್ಲ ಉಪ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಯೋಜನೆಯಡಿ ಮನೆಗಳ ನಿರ್ಮಾಣಕ್ಕಾಗಿ ನಗರ ಪ್ರದೇಶಗಳಲ್ಲಿ 137 ಎಕರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 52 ಎಕರೆ ಜಮೀನು ಗುರುತಿಸಲಾಗಿದೆ. ನಗರ ಪ್ರದೇಶದಲ್ಲಿ 5,489 ಹಾಗೂ ಗ್ರಾಮೀಣ ಪ್ರದೇಶದಲ್ಲಿ 1,043 ಸೇರಿ ಒಟ್ಟು 6,532 ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆ ಸಮಯದಲ್ಲಿ ಅರ್ಹರಿಗೆ ದೊರೆಯುವಂತೆ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

ವಿರೂಪಿನಕಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಯೋಜನೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ಅನುದಾನಕ್ಕಾಗಿ ರಾಜೀವ್‍ಗಾಂಧಿ ವಸತಿ ನಿಗಮದಿಂದ ನೀಡಲು ಪ್ರಸ್ತಾವ ಸಲ್ಲಿಸಬೇಕು. ಇದೇ ರೀತಿ ವಿವಿಧ ತಾಲ್ಲೂಕುಗಳಲ್ಲಿ ಪಾವತಿಗೆ ಬಾಕಿಯಿರುವ ವಸತಿ ಯೋಜನೆ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಚಿವ ಕೆಎಸ್. ಈಶ್ವರಪ್ಪ ಮಾತನಾಡಿ, ಘೋಷಿತ ಸರ್ಕಾರಿ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡುತ್ತಿರುವಂತೆ ಖಾಸಗಿ ಜಮೀನಿನಲ್ಲಿರುವ ಕೊಳೆಗೇರಿಗಳ ಜನರಿಗೂ ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು. ನಗರದ ತುಂಗಾ ನಾಲೆ ಪಕ್ಕದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಲು ಪರ್ಯಾಯ ಕ್ರಮಗಳ ಕುರಿತು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ವಸತಿ ಯೋಜನೆಗಳಲ್ಲಿ ಕೈಗೊಂಡಿರುವ ಬಡಾವಣೆಗಳಲ್ಲಿ ಇದುವರೆಗೂ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ. ಇದಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಅನುದಾನ ಇಲ್ಲ. ಸರ್ಕಾರವೇ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ವಸತಿ ಯೋಜನೆ ಮನೆಗಳನ್ನು ನಿರ್ಮಿಸುತ್ತಿರುವ ಐಶ್ವರ್ಯಗಿರಿ ನಿರ್ಮಾಣ ಸಂಸ್ಥೆ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಇದುವರೆಗೂ ಒಂದು ಮನೆಯನ್ನೂ ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ. 3 ವರ್ಷಗಳಿಂದ ಸಂಸ್ಥೆಯ ಮುಖ್ಯಸ್ಥರ ಮುಖ ನೋಡಲು ಸಾಧ್ಯವಾಗಿಲ್ಲ. ಈ ಸಂಸ್ಥೆ ನಿರ್ಮಿಸುತ್ತಿರುವ ಎಲ್ಲಾ ಮನೆಗಳ ಪಟ್ಟಿ ತಯಾರಿಸಿ, ಇಲಾಖೆಗೆ ಸಲ್ಲಿಸುವಂತೆ ಸಚಿವ ಸೋಮಣ್ಣ ಸೂಚಿಸಿದರು.

ಶಾಸಕರಾದ ಬಿ.ಕೆ.ಸಂಗಮೇಶ್ವರ, ಕುಮಾರ ಬಂಗಾರಪ್ಪ, ವಿಧಾನ ಪರಿಷತ್‌ ಸದಸ್ಯರಾದ ಎಸ್‌. ರುದ್ರೇಗೌಡ, ಆಯನೂರು ಮಂಜುನಾಥ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್, ರಾಜೀವ್‍ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಸವರಾಜು, ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್‌.ವೈಶಾಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT