ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಮೂರೂ ಪಕ್ಷದಲ್ಲೂ ಅಸಮಾಧಾನದ ಹೊಗೆ

Last Updated 4 ಜುಲೈ 2021, 7:02 IST
ಅಕ್ಷರ ಗಾತ್ರ

ಸಾಗರ: ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷದ ಮುಖಂಡರಲ್ಲಿ ಅಸಮಾಧಾನದ ಹೊಗೆಯಾಡತೊಡಗಿದೆ.

ತಮ್ಮ ರಾಜಕೀಯ ಭವಿಷ್ಯವನ್ನು ಪಂಚಾಯಿತಿ ಚುನಾವಣೆ ಮೂಲಕ ರೂಪಿಸಿಕೊಳ್ಳಲು ಕಾತರರಾಗಿದ್ದ ಹಲವು ಮುಖಂಡರಿಗೆ ಅನುಕೂಲಕರ ಮೀಸಲಾತಿ ಬಾರದೆ ಇರುವುದು ಅವರನ್ನು ನಿರಾಸೆಗೊಳಿಸಿದೆ.

ಕಳೆದ ಅವಧಿಯಲ್ಲಿ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾಗಿದ್ದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷರಾಗಿದ್ದ ಜೆಡಿಎಸ್‌ನ ಅಶೋಕ್ ಬರದವಳ್ಳಿ ಅವರಿಗೆ ತಾಲ್ಲೂಕು ಪಂಚಾಯಿತಿಗೆ ಸ್ಪರ್ಧಿಸಲು ಕ್ಷೇತ್ರವೇ ಇಲ್ಲದಂತಾಗಿದೆ. ಅಶೋಕ್ ಬರದವಳ್ಳಿ ಅವರಿಗಿಂತ ಮೊದಲು ಉಪಾಧ್ಯಕ್ಷರಾಗಿದ್ದ ಜೆಡಿಎಸ್‌ನ ಪರಶುರಾಮ್ ಅಕ್ಕಿ ಅವರೂ ಮೀಸಲಾತಿ ಕಾರಣಕ್ಕೆ ಸ್ಪರ್ಧಾ ಕಣದಿಂದ ದೂರ ಉಳಿಯುವಂತಾಗಿದೆ.

ತಲವಾಟ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಪ್ರಭಾವತಿ ಚಂದ್ರಕಾಂತ್ ಅವರಿಗೂ ಸ್ಪರ್ಧೆಗೆ ಅವಕಾಶವಿಲ್ಲದಂತಾಗಿದೆ. ಹಿರೇನೆಲ್ಲೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ದೇವೇಂದ್ರಪ್ಪ ಯಲಕುಂದ್ಲಿ ಅವರೂ ಕ್ಷೇತ್ರದಿಂದ ದೂರ
ಉಳಿಯುವಂತಾಗಿದೆ. ಬಿಜೆಪಿಯ ರಘುಪತಿ ಭಟ್ ಪ್ರತಿನಿಧಿಸುವ ಹೆಗ್ಗೋಡು ಕ್ಷೇತ್ರಕ್ಕೆ ಬಿಸಿಎಂ(ಎ) ಮೀಸಲಾತಿ ಇದ್ದು ಅವರಿಗೂ ಅವಕಾಶ ಇಲ್ಲ.

ಕೆಲವು ಹಾಲಿ ಸದಸ್ಯರಿಗೆ ತಾವು ಈ ಹಿಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಪಕ್ಕದ ಕ್ಷೇತ್ರದಲ್ಲಿ ಅನುಕೂಲಕರ ಮೀಸಲಾತಿ ಬಂದಿರುವುದರಿಂದ ಆ ಕ್ಷೇತ್ರದ ಟಿಕೆಟ್ ಕೇಳಲು ಮುಂದಾಗಿದ್ದಾರೆ. ಆದರೆ ಕೆಲವರಿಗೆ ಈ ಅವಕಾಶವೂ ಇಲ್ಲ.

ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಎಸ್ಟಿ ಮೀಸಲಾತಿ ನಿಗದಿಯಾಗಿರುವ ಬಗ್ಗೆ ಶಾಸಕ ಎಚ್.ಹಾಲಪ್ಪ ಹರತಾಳು ಅವರು ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕೆಲವು ಮುಖಂಡರು ತಮಗೆ ಮೀಸಲಾತಿ ತಪ್ಪಲು ಹಾಲಪ್ಪ ಅವರೇ ಕಾರಣ ಎಂದು ಆರೋಪಿಸುತ್ತಿರುವುದರ ನಡುವೆಯೇ ಶಾಸಕರು ಈ ರೀತಿ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ
ತಂದಿದೆ.

ಈಗ ನಿಗದಿಯಾಗಿರುವ ಮೀಸಲಾತಿ ಮೂರೂ ಪಕ್ಷಗಳ ಮುಖಂಡರಿಗೆ ಬೇಸರ ತಂದಿದೆ ಎಂಬುದು ನಿಚ್ಚಳವಾಗಿದೆ. ಕಡೇ ಗಳಿಗೆಯಲ್ಲಿ ಎಲ್ಲಿಯಾದರೂ ಮೀಸಲಾತಿ ಬದಲಾಗಬಹುದೇ ಆಶಾಭಾವ ಎಲ್ಲರದ್ದು.

‘ಮೀಸಲಾತಿ ಬಗ್ಗೆ ಚರ್ಚಿಸುವೆ’

ಶಿವಮೊಗ್ಗ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅರಬಿಳಚಿ ಕ್ಷೇತ್ರದಲ್ಲಿ 3,773 ಎಸ್ಟಿ ಮತದಾರರಿದ್ದಾರೆ. ಅಲ್ಲಿಗೆ ನೀಡಬೇಕಾದ ಮೀಸಲಾತಿಯನ್ನು 1,421 ಎಸ್ಟಿ ಮತದಾರರಿರುವ ಸಾಗರ ತಾಲ್ಲೂಕಿನ ಕುದರೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ನೀಡಿರುವಲ್ಲಿ ಕಾಣದ ಕೈಗಳು ಕೈಯಾಡಿಸಿರುವ ಹಾಗಿದೆ. ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಈ ಅವೈಜ್ಞಾನಿಕ ಮೀಸಲಾತಿ ಬಗ್ಗೆ ಚರ್ಚಿಸುತ್ತೇನೆ’ ಎಂದುಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

ತಾ.ಪಂ ಮೀಸಲಾತಿ

ಕೆಳದಿ: ಸಾಮಾನ್ಯ, ನಾಡಕಲಸಿ: ಸಾಮಾನ್ಯ,ಕೊರ್ಲಿಕೊಪ್ಪ: ಸಾಮಾನ್ಯ,ತ್ಯಾಗರ್ತಿ: ಸಾಮಾನ್ಯ,ಮಲಂದೂರು: ಸಾಮಾನ್ಯ (ಮಹಿಳೆ),ಯಡೇಹಳ್ಳಿ: ಎಸ್ಸಿ (ಮಹಿಳೆ), ಆವಿನಹಳ್ಳಿ : ಬಿಸಿಎಂ ಎ (ಮಹಿಳೆ),ಹೊನ್ನೇಸರ: ಬಿಸಿಎಂ ಎ,ಕುದರೂರು: ಸಾಮಾನ್ಯ (ಮಹಿಳೆ),ಚೆನ್ನಗೊಂಡ: ಎಸ್ಟಿ (ಮಹಿಳೆ),ತಾಳಗುಪ್ಪ: ಬಿಸಿಎಂ ಬಿ,ಕಾನ್ಲೆ: ಬಿಸಿಎಂ ಎ (ಮಹಿಳೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT