ಶಿವಮೊಗ್ಗ: ‘ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ನಲ್ಲಿ ಏನೇ ತೀರ್ಪು ಬಂದರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಟ್ಟ ಮೇಲ್ಪಂಕ್ತಿಗೆ ನಾಂದಿ ಹಾಡಲು ಮುಂದಾಗಿದ್ದಾರೆ. ಒಂದು ವೇಳೆ ನ್ಯಾಯಾಲಯವು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆದರ್ಶ ರಾಜಕಾರಣಿಯಾಗಲಿ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.
‘ಸಂವಿಧಾನಕ್ಕೆ ಅಗೌರವ ತೋರುವಂತಹ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೇಕಾದ ವ್ಯಕ್ತಿಯನ್ನು ಸಿಎಂ ಮಾಡಿದರೆ ಕೆಲವೇ ದಿನ ಸರ್ಕಾರ ನಡೆಯುತ್ತದೆ. ವಿರುದ್ಧವಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಸರ್ಕಾರ ಉಳಿಯುವುದಿಲ್ಲ’ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಪರವಾಗಿ ಬಂಡೆಯಂತೆ ನಿಲ್ಲುತ್ತಾರೆಯೋ ಅಥವಾ ಬಂಡೆ ಹಾಕುತ್ತಾರೆಯೋ ಗೊತ್ತಿಲ್ಲ. ಹಲವರು ಸಿಎಂಗೆ ಬಹಿರಂಗ ಬೆಂಬಲ ಸೂಚಿಸುತ್ತಲೇ ಒಳಗೊಳಗೆ ಸಿಎಂ ಕುರ್ಚಿಗೆ ಹಂಬಲಿಸುತ್ತಿದ್ದಾರೆ’ ಎಂದು ಮಾರ್ಮಿಕವಾಗಿ ನುಡಿದರು.
‘ಸಿಎಂ ಅವರು ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಿರುವುದನ್ನು ಸ್ವಾಗತಿಸುತ್ತೇನೆ. ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದಾರೆ. ಇದು ಸಂಕಟ ಬಂದಾಗ ವೆಂಕಟರಮಣ ಎಂತಾಗಬಾರದು. ಮೊದಲು ಕುಂಕುಮ ಹಚ್ಚಿಕೊಳ್ಳುತ್ತಿರಲಿಲ್ಲ. ಕೇಸರಿ ಪೇಟ ಬೇಡ ಎನ್ನುತ್ತಿದ್ದರು. ಒಂದು ಕೋಮಿನವರ ಮತಕ್ಕಾಗಿ ಹೀಗೆ ಮಾಡುತ್ತಿದ್ದರು’ ಎಂದು ಕುಟುಕಿದರು.
‘ಸಿಎಂ ಪತ್ನಿ ಪಾರ್ವತಮ್ಮ ಅವರ ಮುಖವನ್ನು ನಾನು ಒಮ್ಮೆಯೂ ನೋಡಿಲ್ಲ. ಬೆಂಗಳೂರಿನಲ್ಲಿ ಅವರ ಮನೆ ಪಕ್ಕದಲ್ಲಿಯೇ ನಾವು ಇದ್ದೆವು. ಮುಡಾ ಹಗರಣದ ಕಾರಣ ಸಿಎಂ ಅವರಿಂದಾಗಿ ಪಾರ್ವತಮ್ಮ ಅವರಿಗೆ ಎಲ್ಲಿ ತೊಂದರೆ ಆಗುತ್ತದೆಯೋ ಎಂಬ ಭಯ ಕಾಡುತ್ತಿದೆ’ ಎಂದು ತಿಳಿಸಿದರು.
‘ಮುಡಾದಿಂದ ಒಂದೇ ದಿನ 848 ನಿವೇಶನ ಹಂಚಿಕೆ ಮಾಡಿರುವುದು ಬಯಲಾಗಿದೆ. ಮುಡಾ ಹಿಂದಿನ ಅಧ್ಯಕ್ಷ ಬಿಜೆಪಿಯವರು ಆಗಿದ್ದರು. ಆತನು ಬುದ್ಧಿವಂತ ಇದೀಗ ಕಾಂಗ್ರೆಸ್ ಸೇರಿದ್ದಾನೆ. ಬಿಜೆಪಿಯವರೇನೂ ಸತ್ಯ ಹರಿಶ್ಚಂದ್ರರಲ್ಲ. ಸರ್ಕಾರ ಕೂಡಲೇ ರಾಜ್ಯದ ಎಲ್ಲ ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ನಡೆದಿರುವ ನಿವೇಶನ ಹಂಚಿಕೆ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
‘ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಾಂಗ್ಲಾ ರೀತಿ ರಾಜ್ಯದಲ್ಲಿ ಧಂಗೆ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿರುವುದು ಸರಿಯಲ್ಲ. ಎಸ್‌ಡಿಪಿಐನವರ ಮಾತು ಕೇಳಿಕೊಂಡು ಪ್ರಾಂಶುಪಾಲ ರಾಧಾಕೃಷ್ಣ ಅವರಿಗೆ ನೀಡಿದ್ದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ತಡೆ ಹಿಡಿದಿರುವುದು ಸರಿಯಲ್ಲ’ ಎಂದರು.
‘ಗಣಪತಿ ಹಬ್ಬದಲ್ಲಿ ಪ್ರಸಾದ ವಿತರಿಸಲು ಆಹಾರ ಸುರಕ್ಷತಾ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಹೇಳಿರುವುದು ಅಜ್ಞಾನದ ಪರಮಾವಧಿ. ಒಂದು ಕೋಮಿನವರು ಹಬ್ಬ ಆಚರಿಸುವಾಗ ಇಫ್ತಿಹಾರ ಕೂಟ ಮಾಡುತ್ತಾರೆ. ಆಗ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಅನುಮತಿ ಪಡೆಯುತ್ತಾರೆಯೇ ? ಅವರಿಗೆ ಏಕೆ ಈ ಆದೇಶ ಅನ್ವಯ ಆಗುವುದಿಲ್ಲ’ ಎಂದು ತಿಳಿಸಿದರು.
ಇ.ವಿಶ್ವಾಸ್, ಎಂ.ಶಂಕರ್, ಸುವರ್ಣ ಶಂಕರ್, ಬಾಲು, ಶಂಕರ ನಾಯ್ಕ, ಶಿವು, ಜಾಧವ್, ಚನ್ನಬಸಪ್ಪ ಇದ್ದರು.
ಜೈಲ್ ಭರೋ ಚಳವಳಿ
ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣ ಬಯಲಿಗೆಳದು ಆತ್ಮಹತ್ಯೆ ಮಾಡಿಕೊಂಡಿರುವ ನಿಗಮದ ಅಧೀಕ್ಷಕ ಚಂದ್ರಶೇಖರನ್ ಕುಟುಂಬಕ್ಕೆ ರಾಜ್ಯ ಸರ್ಕಾರ ಸೆ.10ರೊಳಗೆ ₹ 25 ಲಕ್ಷ ಹಣ ಪರಿಹಾರ ನೀಡಬೇಕು. ಇಲ್ಲದಿದ್ದರೆ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 25 ಲಕ್ಷ ಪರಿಹಾರ ನೀಡುವುದಾಗಿ ವಿಧಾನಮಂಡಲ ಅಧಿವೇಶನದಲ್ಲಿ ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ನ್ಯಾಯಕ್ಕಾಗಿ ನಾನು ಜೈಲಿಗೆ ಹೋಗಲು ಸಿದ್ಧ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರ ಸೆ.10ರೊಳಗೆ ಪರಿಹಾರ ನೀಡಬೇಕು. ವಿಳಂಬ ಮಾಡಿದರೆ ಸೆ.11ರಂದು ದೇಣಿಗೆ ಸಂಗ್ರಹಿಸುವ ಮೂಲಕ ಚಂದ್ರಶೇಖರನ್ ಕುಟುಂಬಕ್ಕೆ ₹ 5 ಲಕ್ಷ ಸಂಗ್ರಹಿಸಿ ನೀಡಲಾಗುವುದು ಎಂದು ತಿಳಿಸಿದರು.
‘ಪರಿಹಾರ ನೀಡದಿರುವ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರ ಗಮನಕ್ಕೂ ತರಲಾಗಿದೆ. ಸರ್ಕಾರಕ್ಕೆ ಪರಿಹಾರ ಕೊಡುವ ಯೋಗ್ಯತೆ ಇಲ್ಲವೇ ? ಎಲ್ಲರ ಕಣ್ಣು ಸಿಎಂ ಸ್ಥಾನದ ಮೇಲಿದೆ. ಯಾರಾದರೂ ಸಿಎಂ ಆಗಿ ಹಾಳಾಗಿ ಹೋಗಲಿ ಮೊದಲು ಪರಿಹಾರ ನೀಡಲಿ’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.