ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬೊಮ್ಮನಕಟ್ಟೆಯಲ್ಲಿ ಸಂಚಾರದಟ್ಟಣೆ: ಜನರಿಗೆ ನರಕಯಾತನೆ

ರಸ್ತೆ ಗುಂಡಿ ಮುಚ್ಚಿ, ದೂಳು ನಿವಾರಿಸಿ
Last Updated 13 ಜನವರಿ 2023, 6:36 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ರಸ್ತೆಗಳ ಅಭಿವೃದ್ಧಿ ಆಗದ್ದರಿಂದ ವ್ಯಾಪಾರ ಇಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ದೂಳು ಕುಡಿದುಕೊಂಡೇ ಬದುಕುವ ದುಸ್ಥಿತಿ ಇದೆ. ರಸ್ತೆ ಗುಂಡಿ ಹಾಗೂ ಅತಿಯಾದ ದೂಳಿನಿಂದ ರಸ್ತೆ ಬದಿ ವ್ಯಾಪಾರ ಮಾಡುವುದಿರಲಿ, ಜೀವಿಸುವುದೇ ದುಸ್ತರ ಎಂಬಂತಿದೆ.

ಇಲ್ಲಿನ ಬೊಮ್ಮನಕಟ್ಟೆ ಬೀದಿ ಬದಿಯ ವ್ಯಾಪಾರಸ್ಥರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡ ಪರಿ ಇದು.

ಬೊಮ್ಮನಕಟ್ಟೆ ವಾರ್ಡ್ –1 ಮತ್ತು 2ರ ಮಧ್ಯೆ ಹಾದುಹೋಗುವ ಎರಡು ಕಿ.ಮೀ. ಉದ್ದದ ಮುಖ್ಯರಸ್ತೆ ಅತಿಯಾದ ಸಂಚಾರ ದಟ್ಟಣೆಯಿಂದ ಹಾಳಾಗಿದೆ. ಇದರಿಂದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ ಹಾಗೂ ರಸ್ತೆ ಗುಂಡಿಯಿಂದಾಗಿ ಈ ಭಾಗದ ಜನರು ಜೀವ ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ಇದೆ.

ರಸ್ತೆಯ ಎರಡೂ ಬದಿಗಳಲ್ಲಿ ಹಲವು ಖಾಸಗಿ ಬಡಾವಣೆಗಳು ತಲೆ ಎತ್ತಿವೆ. ಆಶ್ರಯ ಬಡಾವಣೆ ಕೂಡ ಇದೆ. ಜೊತೆಗೆ ಬೀದಿಬದಿ ವ್ಯಾಪಾರವೂ ನಡೆದಿದೆ. ಅತಿಯಾದ ದೂಳಿನ ಕಾರಣ ಗ್ರಾಹಕರು ಇತ್ತ ಸುಳಿಯದೇ ತರಕಾರಿ ಹಾಗೂ ಇತರ ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

ಬೊಮ್ಮನಕಟ್ಟೆ ಮುಖ್ಯರಸ್ತೆಗೆ ಅಡ್ಡಲಾಗಿ ರೈಲ್ವೆ ಹಳಿಯೂ ಇದೆ. ರೈಲು ಬರುವ ಸಂದರ್ಭ ಗೇಟ್ ಹಾಕುವುದರಿಂದ ರಸ್ತೆ ಬಂದ್ ಆಗುತ್ತದೆ. ಆಗ ವಾಹನ ದಟ್ಟಣೆಯಿಂದ ಸವಾರರು ಸಂಚಾರ ದಟ್ಟಣೆಯ ಸಮಸ್ಯೆ ಎದುರಿಸುವಂತಾಗಿದೆ. ಹಲವು ಬಾರಿ ರೈಲು ಹಳಿ
ದಾಟುವಾಗ ವಾಹನಗಳು ಗುಂಡಿಗೆ ಉರುಳಿ ಬಿದ್ದು ಸಾರ್ವಜನಿಕರು ಕೈ–ಕಾಲು ಕೂಡ ಮುರಿದುಕೊಂಡಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಶಾಲೆ- ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರ ಓಡಾಡುವುದೇ ಕಷ್ಟಕರವಾಗಿದೆ. ಸುಮಾರು ಎರಡು ಅಡಿಗಳಷ್ಟು ಆಳದ ಗುಂಡಿಗಳು ಬಿದ್ದಿದೆ. ವಾಹನಗಳಿಂದ ದೂಳು ಅಕ್ಕಪಕ್ಕದ ಮನೆಗಳು ಹಾಗೂ ಅಂಗಡಿಗಳಿಗೆನುಗ್ಗಿ ಜನರು ಆರೋಗ್ಯ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಕೂಡಲೇ ಈ ರಸ್ತೆ ವಿಸ್ತರಿಸಿ, ಗುಂಡಿ ಮುಕ್ತ, ದೂಳು ಮುಕ್ತ ರಸ್ತೆ ನಿರ್ಮಾಣ ಮಾಡಬೇಕಿದೆ. ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ.

***

ಜನಪ್ರತಿನಿಧಿಗಳು ನಮ್ಮ ಕಷ್ಟ ಆಲಿಸುತ್ತಾರೆ ಎನ್ನುವುದು ಸುಳ್ಳು. ಅವರನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ ಅಂತ ಈಗ ಅರ್ಥ ಆಗುತ್ತಿದೆ.

- ಪರಮೇಶ್ವರಪ್ಪ, ಬೀದಿ ಬದಿ ವ್ಯಾಪಾರಿ, ಬೊಮ್ಮನಕಟ್ಟೆ

.............

ರಸ್ತೆ ಸರಿಪಡಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸಮಸ್ಯೆ ಬಗ್ಗೆ ಗಮನ ಹರಿಸಿ ಕ್ರಮ ತೆಗೆದುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಕೈಗೊಳ್ಳಲಿದ್ದೇವೆ.

-ಮಾಲತೇಶ್‌, ಬೊಮ್ಮನಕಟ್ಟೆ ನಿವಾಸಿ

............

ರಸ್ತೆ ಗುಂಡಿಯಿಂದ ಬರುವ ದೂಳಿನಿಂದ ತರಕಾರಿ ವ್ಯಾಪಾರಕ್ಕೆ ಗ್ರಾಹಕರಿಲ್ಲ. ಜನ ಪ್ರತಿನಿಧಿಗಳು ಸಮಸ್ಯೆ ಪರಿಹರಿಸಲು ಕಾಳಜಿ ವಹಿಸಬೇಕು.

- ರೇಣುಕಮ್ಮ, ತರಕಾರಿ ವ್ಯಾಪಾರಿ, ಬೊಮ್ಮನಕಟ್ಟೆ

...........

ವಾಹನ ದಟ್ಟಣೆಯಿಂದ ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ. ಈ ಸಮಸ್ಯೆ ಕುರಿತು ಚರ್ಚೆ ನಡೆದಿದ್ದು, ರಸ್ತೆಯಲ್ಲಿರುವ ಗುಂಡಿಗಳನ್ನು ಶೀಘ್ರ ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗುವುದು.

-ಎಸ್. ಶಿವಕುಮಾರ್, ಮೇಯರ್

...............

ರಸ್ತೆ ಗುಂಡಿ ಮುಚ್ಚಲು ₹ 5 ಲಕ್ಷ ಅನುದಾನ ಬಿಡುಗಡೆ ಆಗಿದೆ. ಜ.16ಕ್ಕೆ ಟೆಂಡರ್ ಕರೆದು, ಶೀಘ್ರ ರಸ್ತೆ ಗುಂಡಿಗೆ ಡಾಂಬರ್‌ ಹಾಕಲಾಗುವುದು. - ನಟೇಶ್, ಕಾರ್ಯಪಾಲಕ ಎಂಜಿನಿಯರ್‌, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT