ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂಸಿ: ಹದಗೆಟ್ಟ ರಸ್ತೆಗಳು... ಸಂಚಾರ ದುಸ್ತರ

Published 17 ಜೂನ್ 2024, 4:30 IST
Last Updated 17 ಜೂನ್ 2024, 4:30 IST
ಅಕ್ಷರ ಗಾತ್ರ

ಕುಂಸಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ನಿತ್ಯವೂ ದುಸ್ತರವಾಗಿ ಪರಿಣಮಿಸಿದೆ.

2001ರಲ್ಲಿ ಗ್ರಾಮ ಸಡಕ್ ಯೋಜನೆ ಅಡಿ ಕುಂಸಿಯಿಂದ ರೆಚಿಕೊಪ್ಪಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಂಬರೀಕರಣ ಆಗಿ 24 ವರ್ಷಗಳು ಕಳೆದಿವೆ. ಮತ್ತೆ ಆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿಲ್ಲ. ರಸ್ತೆ ಸಂಪೂರ್ಣ ಹಾಳಾಗಿದ್ದು ವೃದ್ಧರು ಹಾಗೂ ಶಾಲೆ– ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಸಂಚಾರೆಕ್ಕೆ ತೊಂದರೆ ಆಗುತ್ತಿದೆ.

ಈ ಮಾರ್ಗದಲ್ಲಿ ರೈಲ್ವೆ ಕೆಳ ಸೇತುವೆ ಇದ್ದು, ಮಳೆ ಬಂದರೆ ನೀರು ತುಂಬಿ ಕೆರೆಯಂತಾಗುತ್ತದೆ. ಈ ವೇಳೆ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ಕುಂಸಿ ರೆಚಿಕೊಪ್ಪ ಮಾರ್ಗದ ರಾಗಿಹೊಸಳ್ಳಿ, ಶೆಟ್ಟಿಕೆರೆ, ಶಾಂತಿಕೆರೆ, ಸಿಂಗನಹಳ್ಳಿಗಳ ರಸ್ತೆ ಸಂಪೂರ್ಣ ಹಾಳಾಗಿದ್ದು, ಜನ ಸಂಬಂಧಪಟ್ಟವರಿಗೆ ಶಾಪ ಹಾಕುತ್ತಿದ್ದಾರೆ.

ಸಮೀಪದ ಚೋರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಕೆರೆಯಿಂದ ಕೊರಗಿ ಗ್ರಾಮಕ್ಕೆ ಸಂಪೂರ್ಣ ಮಣ್ಣಿನ ರಸ್ತೆಯಿದೆ. ಡಾಂಬರೀಕರಣ ಕೋರಿ ಗ್ರಾಮಸ್ಥರು ಅಧಿಕಾರಿಗಳಿಗೆ ಹಲವು ಸಲ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಕೊರಗಿಯಿಂದ ಗುಂಡೂರು ಗ್ರಾಮಕ್ಕೆ 15 ವರ್ಷಗಳ ಹಿಂದೆ ರಸ್ತೆ ಆಗಿದ್ದು, ಅದು ಕೂಡ ದುರಸ್ತಿಯಲ್ಲಿದೆ. ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚೋರಡಿಯಿಂದ ಶಿಕಾರಿಪುರ ಮಾರ್ಗದ ಮಧ್ಯೆ ಕೋಟೆಹಾಳಕ್ಕೆ ಹೋಗುವ 3 ಕಿ.ಮೀ. ರಸ್ತೆ ಇಂದಿಗೂ ಡಾಂಬರೀಕರಣಗೊಂಡಿಲ್ಲ. ತುಪ್ಪೂರು ಪಂಚಾಯಿತಿ ವ್ಯಾಪ್ತಿಯ ಮುಖ್ಯರಸ್ತೆಯಿಂದ ಸನ್ನಿವಾಸ ಹೊರಬೈಲು ಕಡೆಗೆ ಹೋಗಲು 4 ಕಿ.ಮೀ. ಮಣ್ಣಿನ ರಸ್ತೆ ಇದ್ದು ಮಳೆಗಾಲ ಬಂದರೆ ರಸ್ತೆ ಕೆಸರು ಗದ್ದೆಯಂತಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಮಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಘಟ್ಟ–ಚಿನ್ಮನೆ ಸಂಪರ್ಕದ 2 ಕಿ.ಮೀ. ಅಡ್ಡರಸ್ತೆ ಸಂಪೂರ್ಣ ಕಲ್ಲು– ಮಣ್ಣಿನಿಂದ ಕೂಡಿದೆ. ಈ ಹಿಂದೆ ಬರೀ 1 ಕಿ.ಮೀ. ರಸ್ತೆಗೆ ಕಾಂಕ್ರೀಟ್ ಅಳವಡಿಸಲಾಗಿದೆ. ಪೂರ್ಣ ರಸ್ತೆಗೆ ಕಾಂಕ್ರೀಟ್ ಅಳವಡಿಸಿ ಸುಗಮ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕು ಎಂದು ಜನ ಒತ್ತಾಯಿಸಿದ್ದಾರೆ.

ಕುಂಸಿ ಸಮೀಪದ ಚೋರಡಿ ಹಾಗೂ ಶಿಕಾರಿಪುರ ಮಾರ್ಗದ ಮಧ್ಯೆ ಸಿಗುವ ಕೋಟೆಹಾಳ ಗ್ರಾಮದ ರಸ್ತೆಯ ಸ್ಥಿತಿ
ಕುಂಸಿ ಸಮೀಪದ ಚೋರಡಿ ಹಾಗೂ ಶಿಕಾರಿಪುರ ಮಾರ್ಗದ ಮಧ್ಯೆ ಸಿಗುವ ಕೋಟೆಹಾಳ ಗ್ರಾಮದ ರಸ್ತೆಯ ಸ್ಥಿತಿ
24 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ್ದ ಕುಂಸಿ–ರೆಚಿಕೊಪ್ಪ ರಸ್ತೆ ಸಂಪೂರ್ಣ ಹಾಳಾಗಿದೆ. ತಕ್ಷಣವೇ ಅಧಿಕಾರಿಗಳು ಗಮನಹರಿಸಿ ರಸ್ತೆಯನ್ನು ಡಾಂಬರೀಕರಣ ಮಾಡಿಸಬೇಕು.
ಸುಧಾಕರ್ ಗ್ರಾಮಸ್ಥ ರೆಚಿಕೊಪ್ಪ
ಕೋಟೆಹಾಳಕ್ಕೆ ಮಣ್ಣಿನ ರಸ್ತೆ ಇದ್ದು ಮಳೆ ಬಂದರೆ ಕೆಸರು ಗದ್ದೆಯಂತಾಗಿ ಜನರು ಸಂಚರಿಸಲು ಕಷ್ಟವಾಗುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಮಂಜುನಾಥ್ ಗ್ರಾಮಸ್ಥ ಕೋಟೆಹಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT